ನನ್ನ ಮದುವೆಗೆ ಎಲ್ಲ ಅಭಿಮಾನಿಗಳಿಗೆ ಮುಕ್ತ ಆಹ್ವಾನ; ಡಾಲಿ ಧನಂಜಯ

Most read

ಮೈಸೂರು: ಮಂತ್ರ ಮಾಂಗಲ್ಯ, ವಚನ ಮಾಂಗಲ್ಯ ರೀತಿಯಲ್ಲಿ ವಿವಾಹ ಮಾಡಿಕೊಳ್ಳುವ ಆಸೆಯಿತ್ತು. ಆದರೆ ನಮ್ಮ ಕುಟುಂಬ ಸದಸ್ಯರು, ಚಿತ್ರರಂಗ, ಸ್ನೇಹಿತರ ಆಶೀರ್ವಾದ ಪಡೆಯಬೇಕು. ಎಲ್ಲರಿಗೂ ಊಟ ಹಾಕಿಸಬೇಕು ಎಂದು ಬಯಸಿದ್ದರಿಂದ ಮೈಸೂರಿನಲ್ಲಿ ಮದುವೆ ಮಡಿಕೊಳ್ಳುತ್ತಿದ್ದೇವೆ ಎಂದು ನಟ ಡಾಲಿ ಧನಂಜಯ ಹೇಳಿದ್ದಾರೆ.

ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ಫೆಬ್ರವರಿ 15ಮತ್ತು 16ರಂದು ಮದುವೆ ನಡೆಯಲಿದ್ದು, ಇಂದು ಅಲ್ಲಿಯೇ ಅವರು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಮದುವೆಗೆ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮೈಸೂರಿನಲ್ಲೇ ಮದುವೆ ಆಗಬೇಕು ಎನ್ನುವುದು ನಮ್ಮ ಕನಸು. ನನ್ನ ವಿದ್ಯಾಭ್ಯಾಸ, ಚಿತ್ರರಂಗಕ್ಕೆ ಕಾಲಿಟ್ಟಿದ್ದು ಎಲ್ಲವೂ ಮೈಸೂರಿನಿಂದಲೇ. ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಸಿಗಲಿದೆ. ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಭಿಮಾನಿಗಳಿಗೆ ಮುಕ್ತ ಅವಕಾಶ ನೀಡಿದ್ದೇವೆ ಎಂದು ಹೇಳಿದರು.

ಎಲ್ಲರೂ ನೇರವಾಗಿ ಬಂದು ನಮಗೆ ಆಶೀರ್ವಾದ ಮಾಡಬಹುದು. ವಿದ್ಯಾಪತಿ ದ್ವಾರದ ಮೂಲಕ ಅಭಿಮಾನಿಗಳಿಗೆ ಪ್ರವೇಶ ಇರುತ್ತದೆ. ಚಿತ್ರರಂಗ, ರಾಜಕೀಯ ನಾಯಕರು ಎಲ್ಲರನ್ನೂ ಮದುವೆಗೆ ಆಹ್ವಾನಿಸಿದ್ದೇನೆ. ಎಲ್ಲರೂ ಬಂದು ಆಶೀರ್ವಾದ ಮಾಡಬೇಕು ಎಂಬುದು ನಮ್ಮ ಬಯಕೆ ಎಂದರು.

ಚಾಮುಂಡೇಶ್ವರಿ ದೇವಾಲಯದ ಮಾದರಿಯಲ್ಲಿ ವಿವಾಹದ ವೇದಿಕೆ ನಿರ್ಮಾಣ ಆಗುತ್ತಿದೆ. ದಕ್ಷಿಣ ಭಾರತದ ಮಾದರಿಯ ಊಟದ ವ್ಯವಸ್ಥೆ ಇರಲಿದೆ. ಅಭಿಮಾನಿಗಳು, ವಿಐಪಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿದೆ. ಆದರೆ ಎಲ್ಲರಿಗೂ ಒಂದೇ ಮಾದರಿಯ ಊಟ ಇರುತ್ತದೆ. ಎಲ್ಲರೂ ತಪ್ಪದೇ ಮದುವೆಗೆ ಬಂದು ನಮ್ಮನ್ನು ಹಾರೈಸಿ ಎಂದು ಕೋರಿದರು.

ನಟ ದರ್ಶನ್ ನ್ನು ವಿವಾಹಕ್ಕೆ ಆಹ್ವಾನಿಸುವ ಕುರಿತು ಪ್ರತಿಕ್ರಿಯಿಸಿದ ಡಾಲಿ ಧನಂಜಯ,  ನನ್ನ ಮದುವೆಗೆ ದರ್ಶನ್ ಅವರು ಬಂದ್ರೇ ತುಂಬಾ ಸಂತೋಷವಾಗುತ್ತದೆ. ಈಗಿನ ಪರಿಸ್ಥಿಯಲ್ಲಿ ಅವರನ್ನು ಭೇಟಿ ಮಾಡಲು ಆಗುತ್ತಿಲ್ಲ. ಕನ್ನಡ ಚಿತ್ರರಂಗದ ಎಲ್ಲರನ್ನೂ ಕರೆದಿದ್ದೇನೆ. ದರ್ಶನ್ ಅವರನ್ನೂ ಕರೆಯಲು ಪ್ರಯತ್ನ ಮಾಡುತ್ತಿದ್ದೇನೆ. ಆದರೆ ದರ್ಶನ್ ಅವರು ಸಿಗುತ್ತಿಲ್ಲ ಎಂದು ತಿಳಿಸಿದರು.

More articles

Latest article