ಕೆಜಿಎಫ್ ಹಾಗೂ ಕಾಂತಾರ ಸಿನಿಮಾಗಳು ಇಡೀ ಇಂಡಿಯಾವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಬೆಳೆ ತೆಗೆಯುವಂತ ಸಿನಿಮಾಗಳು ಬರುತ್ತಿಲ್ಲ. ಕನ್ನಡ ಇಂಡಸ್ಟ್ರಿಯ ಗಲ್ಲಾ ಪೆಟ್ಟಿಗೆ ತುಂಬ ಬೇಕು ಎಂದರೆ ಸ್ಟಾರ್ ಗಳ ಸಿನಿಮಾ ಥಿಯೇಟರ್ ನಲ್ಲಿ ಎರಡು ತಿಂಗಳಿಗೊಂದಾದರೂ ಬರಬೇಕು. ಆದರೆ ನಮ್ಮಲ್ಲಿ ಎರಡು ವರ್ಷಕ್ಕೆ, ಮೂರು ವರ್ಷಕ್ಕೊಮ್ಮೆ ಸ್ಟಾರ್ ಸಿನಿಮಾಗಳ ದರ್ಶನವಾಗುತ್ತದೆ. ಮತ್ತೆಲ್ಲಿ ಥಿಯೇಟರ್ ಮಾಲೀಕರು ಬದುಕುವುದು. ಶಿವಣ್ಣ, ದರ್ಶನ್, ಸುದೀಪ್, ಯಶ್, ಗಣೇಶ್, ಧ್ರುವ, ಉಪೇಂದ್ರ, ಡಾಲಿ, ದುನಿಯಾ ವಿಜಿ ಹೀಗೆ ಒಂದಷ್ಟು ಸ್ಟಾರ್ ಗಳು ಇದ್ದರು ಕೂಡ ಸಿನಿಮಾಗಳು ಮಾತ್ರ ಬೆರಳೆಣಿಕೆಯಷ್ಟು ಬರುತ್ತಿವೆ. ಹಂಗೋ ಹಿಂಗೋ ವರ್ಷಕ್ಕೆ ಎರಡು ಸಿನಿಮಾ ಕೊಡುತ್ತಿರುವುದು ದರ್ಶನ್ ಹಾಗೂ ಶಿವಣ್ಣ ಮಾತ್ರ. ಸಿನಿಮಾ ಇಂಡಸ್ಟ್ರಿಯ ಬಗ್ಗೆ ನಿರ್ದೇಶಕ ಜಯತೀರ್ಥ ಮಾತನಾಡಿದ್ದಾರೆ.
ವರ್ಷಕ್ಕೆ ಎರಡು ಸಿನಿಮಾ ಕೊಡಬೇಕು ಅಂತಿರೋ ದರ್ಶನ್ ಅವರೇ ಚಿತ್ರರಂಗವನ್ನು ಕಾಪಾಡುತ್ತಿರುವುದು. ಅದರಲ್ಲೂ ಪ್ಯಾನ್ ಇಂಡಿಯಾ ಆದ್ಮೇಲೆ ಕನ್ನಡಕ್ಕಾಗಿ ಸಿನಿಮಾ ಮಾಡುವುದು ಕಡಿಮೆ ಆಗಿದೆ. ಈಗ ರಾಕಿಂಗ್ ಸ್ಟಾರ್ ಯಶ್ ಅವರನ್ನು ಕನ್ನಡದ ಹೀರೋ ಅನ್ನುವುದಕ್ಕೆ ಆಗುತ್ತಾ..? ಯಶ್ ಅವರು ಕನ್ನಡದ ಹೀರೋನಾ..? ನ್ಯಾಷನಲ್ ಲೆವೆಲ್ ಹೀರೋನಾ..? ಅವರು ಯಾರಿಗೆ ಸಿನಿಮಾ ಮಾಡುತ್ತಿದ್ದಾರೆ ಈಗ..? ಇಡೀ ಪ್ರಪಂಚಕ್ಕೆ ಸಿನಿಮಾ ಮಾಡುತ್ತಿದ್ದಾರೆ ಈಗ. ಕನ್ನಡದವರು ಎಂದುಕೊಳ್ಳುವುದಕ್ಕೆ ಆಗಲ್ಲ ಎಂದಿದ್ದಾರೆ.
ಇದೇ ವೇಳೆ ಸುದೀಪ್ ಅವರ ಬಗ್ಗೆ ಬೇಸರ ಹೊರ ಹಾಕಿದ್ದು, ಬಿಗ್ ಬಾಸ್, ಕ್ರಿಕೆಟ್ ಅಂತ ಆಕ್ಯೂಪೈ ಆಗಿದ್ದಾರೆ. ಸಿನಿಮಾ ಮಾಡುತ್ತಿದ್ದಾರೆ. ಅದು ಬರಬೇಕು. ಆದರೆ, ಅವರ ಸಿನಿಮಾ ಬಂದು ಎರಡು ವರ್ಷವಾಯ್ತೇನೋ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.