ಟ್ರಿಲಿಯನ್‌ ಸುಳ್ಳುಗಳನ್ನು ಹೇಳಲು ಬಿಜೆಪಿಗಷ್ಟೇ ಸಾಧ್ಯ; ಅಖಿಲೇಶ್‌ ಯಾದವ್‌ ವ್ಯಂಗ್ಯ

Most read

ಲಖನೌ: ಉತ್ತರ ಪ್ರದೇಶದ ಆರ್ಥಿಕತೆಯನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಒಂದು ಟ್ರಿಲಿಯನ್ಗೆ ತಲುಪಿಸುವುದಾಗಿ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳೀದ್ದಾರೆ. ಅವರ ಈ ಹೇಳಿಕೆಯನ್ನು ಸಮಾಜವಾದಿ ಪಕ್ಷ ತರಾಟೆಗೆ ತೆಗೆದುಕೊಂಡಿದೆ.  ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌, ಅದು ಅಸಾಧ್ಯ. ಬಿಜೆಪಿಯವರಷ್ಟೇ ಇಂತಹ ಟ್ರಿಲಿಯನ್‌ ಸುಳ್ಳುಗಳನ್ನು ಹೇಳಬಲ್ಲರು ಎಂದು ವ್ಯಂಗ್ಯವಾಡಿದ್ದಾರೆ.  ಎಕ್ಸ್‌  ನಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿರುವ ಅವರು, ಬಿಜೆಪಿ ಸರ್ಕಾರವು ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ದೂರಿದ್ದಾರೆ. ಈ ಟ್ವೀಟ್‌ನಲ್ಲಿ, ಒಂದು ಟ್ರಿಲಿಯನ್‌ ಸುಳ್ಳುಗಳನ್ನು ಹೇಳಲು ಬಿಜೆಪಿಗಷ್ಟೇ ಸಾಧ್ಯ. ಅದನ್ನು ಬಿಟ್ಟು ಬೇರೇನೂ ಇಲ್ಲ ಎಂದಿದ್ದಾರೆ.

ರಾಜ್ಯದ ಆರ್ಥಿಕತೆಯು ಮುಂದಿನ ನಾಲ್ಕು ವರ್ಷಗಳಲ್ಲಿ ಒಂದು ಟ್ರಿಲಿಯನ್‌ ತಲುಪಲಿದೆ ಎಂಬ ಘೋಷವಾಕ್ಯವನ್ನು ಉತ್ತರ ಪ್ರದೇಶ ಬಿಜೆಪಿಯು ಮತ್ತೆ ಹರಿಬಿಟ್ಟಿದೆ. ಈಗಿನ ಬೆಳವಣಿಗೆ ದರದ ಪ್ರಕಾರ, ಅದು ಅಸಾಧ್ಯ. ಆ ಕಾರಣಕ್ಕಾಗಿಯೇ ಇದು ಅತಿದೊಡ್ಡ ಸುಳ್ಳು ಎಂದು ಅಖಿಲೇಶ್‌ ಅಭಿಪ್ರಾಯಪಟ್ಟಿದ್ದಾರೆ. ಭ್ರಷ್ಟಾಚಾರವು ಸರ್ಕಾರದ ಖಜಾನೆಗೆ ಹೊಡೆತ ನೀಡಿದೆ. ಹೂಡಿಕೆಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ರೈತರು, ವರ್ತಕರು, ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳು ಸಂಕಷ್ಟದಲ್ಲಿದ್ದಾರೆ. ನಿರುದ್ಯೋಗವು ಬಡತನದ ಹೊಸ ಅಧ್ಯಾಯ ಬರೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಜನರ ಬಳಿ ಹಣವೇ ಇಲ್ಲದಿದ್ದರೆ, ಕೊಳ್ಳುವ ಶಕ್ತಿ ಎಲ್ಲಿಂದ ಬರುತ್ತದೆ? ಕೆಲಸಗಾರರೆಲ್ಲ ವಲಸೆ ಹೋಗುತ್ತಿರುವಾಗ, ಕಾರ್ಮಿಕ ಸಂಪನ್ಮೂಲವನ್ನು  ಎಲ್ಲಿಂದ ಸೃಷ್ಟಿಸುವಿರಿ? ಎಂದು ಪ್ರಶ್ನಿಸಿದ್ದಾರೆ. ಹಣದುಬ್ಬರ ಎಷ್ಟು ಇಳಿಕೆಯಾಗಲಿದೆ? ನಮ್ಮ ಆದಾಯ ಎಷ್ಟು ಹೆಚ್ಚಾಗಲಿದೆ? ಯುವಕರು ಉದ್ಯೋಗ ಗಿಟ್ಟಿಸುವುದು ಹೇಗೆ? ಔಷಧ ಮತ್ತು ಶಿಕ್ಷಣದ ಮೇಲಿನ ವೆಚ್ಚ ಎಷ್ಟು ಕಡಿತಗೊಳ್ಳುತ್ತದೆ? ಅಂಗಡಿ ಮುಂಗಟ್ಟುಗಳು, ಉದ್ಯಮಗಳು ಮುಚ್ಚಿಹೋಗದಂತೆ ರಕ್ಷಿಸಿಕೊಳ್ಳುವುದು ಹೇಗೆ? ಎಂಬ ಪ್ರಶ್ನೆಗಳನ್ನು ಜನರು ಕೇಳುತ್ತಿದ್ದಾರೆ ಉತ್ತರಿಸಿ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

More articles

Latest article