ಬೆಂಗಳೂರು: ಆನ್ ಲೈನ್ ಬೆಟ್ಟಿಂಗ್ ದುಶ್ಚಟಕ್ಕೆ ಬಲಿಯಾಗಿ ಹಣ ಕಳೆದುಕೊಂಡಿದ್ದ ಬ್ಯಾಂಕ್ ಉದ್ಯೋಗಿಯೊಬ್ಬ ಸೆಲ್ಪಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ರಾಜರಾಜೇಶ್ವರಿ ನಗರದ ಬಂಗಾರಪ್ಪ ನಗರದಲ್ಲಿ ನಡೆದಿದೆ.ಮನೋಜ್ ಕುಮಾರ್ (25) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಮೃತ ಮನೋಜ್ ತಂದೆ ಲೋಕೇಶ್ ದೂರು ನೀಡಿದ್ದು, ತಮ್ಮ ಮನೆಯ ಕೊಠಡಿಯಲ್ಲಿದ್ದ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಈ ದೂರು ಆಧರಿಸಿ ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬ್ಯಾಂಕ್ ವೊಂದರಲ್ಲಿ ಮನೋಜ್ ಕೆಲಸ ಮಾಡುತ್ತಿದ್ದರು. ಕೆಲಸ ಮಾಡುತ್ತಿದ್ದ ಬ್ಯಾಂಕ್ ನಲ್ಲೇ ಸಾಲ ಪಡೆದು ಆನ್ ಲೈನ್ ಬೆಟ್ಟಿಂಗ್ ಆಡಿ ಹಣ ಕಳೆದುಕೊಂಡಿದ್ದರು. ಸಾಲದ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ಮನೋಜ್ ಸೆಲ್ಫಿ ವಿಡಿಯೋ ಮಾಡಿ ಬ್ಯಾಂಕ್‌ನಿಂದ ಸಾಲ ತೆಗೆದುಕೊಳ್ಳುವಂತೆ ಪ್ರೇರೇಪಿಸಿ ಬೆಟ್ಟಿಂಗ್ ಆ್ಯಪ್ ನಲ್ಲಿ ಹೂಡಿಕೆ ಮಾಡುವಂತೆ ಬ್ಯಾಂಕ್‌ನ ಇಬ್ಬರು ಸಹದ್ಯೋಗಿಗಳು ಪ್ರಚೋದನೆ ನೀಡಿದ್ದರು. ಇವರ ಸಹವಾಸದಿಂದ ಬೆಟ್ಟಿಂಗ್ ನಲ್ಲಿ ಹಣ ಕಳೆದುಕೊಂಡಿದ್ದೇನೆ. ಈಗ ನನಗೆ ಯಾರೂ ನೆರವಿಗೆ ಬರುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.
ವಿಡಿಯೋದಲ್ಲಿ ಹೆಸರಿಸಲಾಗಿರುವ ವ್ಯಕ್ತಿಗಳನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುವುದು. ಪ್ರಚೋದನೆ ನೀಡಿದ್ದು ಸಾಬೀತಾದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.