Sunday, September 8, 2024

ಬೆಂಗಳೂರಲ್ಲಿ ನಾಡೋಜ ಪ್ರೊ‌. ಬರಗೂರು ರಾಮಚಂದ್ರಪ್ಪ ಅವರ ಸ್ನೇಹಗೌರವ ಪುಸ್ತಕಗಳ ಜನಾರ್ಪಣೆ

Most read

ಕನ್ನಡ ಸಾಂಸ್ಕೃತಿಕ ಲೋಕದ ಸೋಜಿಗದ ಸಾಧಕ, ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ಅನನ್ಯ ಸೃಷ್ಟಿ ಮಾಡಿದ ಸಾಮಾಜಿಕ ರೂಪಕ. ಯಾವತ್ತೂ ತಮ್ಮ ಜನಪರ ಸಮಾಜಮುಖಿ ಬದ್ಧತೆಯನ್ನು ಬಿಟ್ಟುಕೊಡದೆ ಚಿಂತನಶೀಲ ಹಾಗೂ ಸೃಜನಶೀಲ ಕೃತಿಗಳಲ್ಲಿ ಅಂತರ್ಗತ ಮಾಡಿದ ಅಂತಃಕರಣಶೀಲ ಅಭಿವ್ಯಕ್ತಿ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅವರಿಗೆ 75 ವರ್ಷ ದಾಟಿದ ಸಂಭ್ರಮದ ದಿನದಂದು ಅವರ ಗೆಳೆಯರ ಬಳಗ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದಾರೆ.

ಸಾಹಿತ್ಯ, ಸಿನಿಮಾ, ಸಂಸ್ಕೃತಿ, ಸಂಘಟನೆ-ಹೀಗೆ ವಿವಿಧ ವಿಷಯಗಳ ಒಂದು ಒಕ್ಕೂಟ ವ್ಯಕ್ತಿತ್ವವಾಗಿ ಬೆಳೆದಿರುವ ಪ್ರೊ.ಬರಗೂರು ರಾಮಚಂದ್ರಪ್ಪ ಅವರ 75 ವರ್ಷ ದಾಟಿದ ಹಿನ್ನೆಲೆ ಪ್ರೊ.ಬರಗೂರು ಗೆಳೆಯರ ಬಳಗ ಜುಲೈ 28ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರು ಸೆಂಟ್ರಲ್ ಕಾಲೇಜ್ ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಾಂಸ್ಕೃತಿಕ ಸ್ನೇಹಗೌರವ ಪುಸ್ತಕಗಳ ಜನಾರ್ಪಣೆ ಮತ್ತು ಗೀತ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಜುಲೈ 28ರಂದು ಪ್ರೊ.ಬರಗೂರು ಗೆಳೆಯರ ಬಳಗ ಆಯೋಜಿಸುತ್ತಿರುವ ಈ ಕಾರ್ಯಕ್ರಮದ ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ವಹಿಸಲಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸೃತರಾದ ಕನ್ನಡ ಲೇಖಕರಾದ ಡಾ. ಚಂದ್ರಶೇಖರ ಕಂಬಾರ ಅವರು ಪುಸ್ತಕಗಳ ಲೋಕಾರ್ಪಣೆ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಮರಾಠಿ ಲೇಖಕರು ಡಾ. ಶರಣಕುಮಾರ್ ಲಿಂಬಾಳೆ ಸರಸ್ವತಿ, ಕೇರಳದ ಮಾಜಿ ಸಚಿವರಾದ ಶ್ರೀಮತಿ ಶೈಲಜ ಟೀಚರ್, ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ ಅವರು ಇರಲಿದ್ದಾರೆ. ಇವರೊಂದಿಗೆ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಉಪಸ್ಥಿತಿ ಇರಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅನೇಕ ಸಂಘಟನೆಗಳು, ವಿವಿ ಅಧ್ಯಾಪಕರ ಪರಿಷತ್ತುಗಳು, ಮಂಡಳಿಗಳು ಕೂಡ ಉಪಸ್ಥಿತಿಯಲ್ಲಿರುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಮೊದಲಿಂದಲೂ ತಾವು ನಂಬಿದ್ದನ್ನು ಬರೆಯುತ್ತ, ಬರೆದಂತೆ ಬದುಕುತ್ತ ಬಂದಿರುವ ಬರಗೂರರು ಅವರ ʻಬರಗೂರ್ ಬುಕ್ʼ ಮತ್ತು ʻನಮ್ಮ ಬರಗೂರ್ ಮೇಷ್ಟ್ರುʼ ಎಂಬ ಶೀರ್ಷಿಕೆಯ ಎರಡು ಪುಸ್ತಕಗಳು ಅಂದೆ ಲೋಕಾರ್ಪಣೆಗೊಳ್ಳಲಿವೆ. ಜೊತೆಗೆ ಬರಗೂರು ರಾಮಚಂದ್ರಪ್ಪ ಅವರು ರಚಿಸಿರುವ ಗೀತೆಗಳನ್ನು ಡಾ. ಶಮಿತಾ ಮಲ್ನಾಡ್ ಅವರ ತಂಡ ಹಾಡಲಿದೆ.

More articles

Latest article