ಪ್ರಧಾನಿ ಮೋದಿ ಅವರು ಗುಜರಾತ್ ರಾಜ್ಯಕ್ಕೆ ಭೇಟಿ ನೀಡಲು ನಿರ್ಧರಿಸಿದ್ದು, ಈ ಸಮಯದಲ್ಲಿ ಸರ್ಕಾರಿ ನೌಕರರ ಬೃಹತ್ ಪ್ರತಿಭಟನೆಯನ್ನು ಅವರು ಎದುರಿಸಬೇಕಿದೆ. ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆ(ಒಪಿಎಸ್) ಜಾರಿಗೊಳಿಸಬೇಕೆಂದು (NPS News) ಲಕ್ಷಾಂತರ ಗುಜರಾತ್ ಸರ್ಕಾರಿ ನೌಕರರು ಗಾಂಧಿನಗರದ ಸತ್ಯಾಗ್ರಹ ಶಿಬಿರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆ ನಡೆಸುತ್ತಿರುವ ನೌಕರರ ಪ್ರತಿನಿಧಿ ಮಾತನಾಡಿದ್ದು, ನಿವೃತ್ತರಾದ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ(ಒಪಿಎಸ್)ಯಲ್ಲಿ ಇಂತಿಷ್ಟು ಎಂದು ನಿಶ್ಚಿತ ಮೊತ್ತವು ಪಿಂಚಣಿಯಾಗಿ ದೊರೆಯುತ್ತಿತ್ತು. ಆದರೆ ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ಅಡಿಯಲ್ಲಿ ನಿವೃತ್ತಿಯ ನಂತರ ಎಷ್ಟು ಮೊತ್ತ ಪಿಂಚಣಿಯಾಗಿ ದೊರೆಯುತ್ತದೆ ಎಂದು ನಿರ್ದಿಷ್ಟವಾಗಿ ಹೇಳಲಾಗದು ಅಥವಾ ಏನೂ ಇಲ್ಲದೇ ಹೋಗಬಹುದು. ಇದರಿಂದಾಗಿ ರಾಜ್ಯದ ಎನ್.ಪಿ. ಎಸ್. ನೌಕರರ ಜೀವನ ನಿರ್ವಹಣೆ ಹಾಗೂ ಸಂಧ್ಯಾಕಾಲದ ಬದುಕು ಅತ್ಯಂತ ಕಷ್ಟಕರವಾಗಿರುವುದರಿಂದ ಎನ್. ಪಿ. ಎಸ್. ನೌಕರರನ್ನು ಓ. ಪಿ. ಎಸ್. ವ್ಯಾಪ್ತಿಗೆ ತರುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ ಎಂದು ಒತ್ತಾಯಿಸಿದ್ದಾರೆ.
ಒಪಿಎಸ್ ಬಗ್ಗೆ ರಾಜ್ಯ ಸರ್ಕಾರದ ನಿಲುವಿನ ಬಗ್ಗೆ ಸರ್ಕಾರದ ವಕ್ತಾರ ರಿಷಿಕೇಶ್ ಪಟೇಲ್ ಅವರ ಅಭಿಪ್ರಾಯ ಕೇಳಿದಾಗ, ಚುನಾವಣೆ ಸಮಯದಲ್ಲಿ ಇಂತಹ ಮಹತ್ವದ ಅಥವಾ ದೊಡ್ಡ ಹೋರಾಟಗಳು ನಡೆಯುತ್ತವೆ. ಹಳೆ ಪಿಂಚಣಿ ಯೋಜನೆ ಒತ್ತಾಯಿಸುತ್ತಿರುವ ಬಗ್ಗೆ ನಮಗೆ ತಿಳಿದಿಲ್ಲ. ಫೆಬ್ರವರಿ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಗೆ ಬರಲಿದ್ದು ವಿವಿಧ ಯೋಜನೆಗಳ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಬೇಜವಾಬ್ದಾರಿ ಹೇಳಿಕೆಯನ್ನು ನೀಡಿದ್ದಾರೆ.
ಸರ್ಕಾರದ ವಕ್ತಾರರ ಈ ಹೇಳಿಕೆಯಿಂದಾಗಿ ಪ್ರತಿಭಟನಾ ನಿರತ ನೌಕರರನ್ನು ಮತ್ತಷ್ಟು ಕೋಪಗೊಳಿಸಿದ್ದು, ಪ್ರಧಾನಿ ಮೋದಿ ರಾಜ್ಯಕ್ಕೆ ಬರುವ ಮುನ್ನ ಒಪಿಎಸ್ ಜಾರಿಯಾಗಬೇಕು ಇಲ್ಲವೇ ನಮ್ಮ ಹೋರಾಟ ತೀರ್ವಗೊಳ್ಳುತ್ತದೆ. ರಾಜ್ಯ ಸರದಕಾರ ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಪರಿಹರಿಸಬೇಕು. ಇಲ್ಲವೇ ನಮ್ಮ ಬೇಡಿಕೆ ಈಡೇರಿಸುವವರೆಗೂ ನಾವು ಪ್ರತಿಭಟನೆಯನ್ನು ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.
ದೇಶಾದ್ಯಂತ ಒಪಿಎಸದ ಮರುಸ್ಥಾಪನೆಗೆ ಒತ್ತಾಯಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಗುಜರಾತ್ ನಲ್ಲಿ ತೀರ್ವ ಸ್ವರೂಪ ಪಡೆದಿದ್ದು, ಪ್ರಧಾನಿ ಮೋದಿ ಭೇಟಿಯ ಸಮಯದಲ್ಲೂ ಈ ಬಿಸಿ ಮುಟ್ಟುವ ಸಾಧ್ಯತೆಗಳು ಹೆಚ್ಚಿದೆ ಎನ್ನಲಾಗಿದೆ . ಈಗಾಗಲೇ ಪಂಜಾಬ್, ರಾಜಸ್ಥಾನ, ಛತ್ತೀಸ್‌ಗಢ, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಹಳೆಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು ಅದೇ ಮಾದರಿಯಲ್ಲಿ ಗುಜರಾತ್‌ನಲ್ಲೂ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂಬುದು ನೌಕರರ ಒತ್ತಾಯ.
ಏನಿದು ಹಳೆ ಮತ್ತು ಹೊಸ ಪಿಂಚಣಿ ಯೋಜನೆ?
ನಿವೃತ್ತರಾದ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ(ಒಪಿಎಸ್)ಯಲ್ಲಿ ಇಂತಿಷ್ಟು ಎಂದು ನಿಶ್ಚಿತ ಮೊತ್ತವು ಪಿಂಚಣಿಯಾಗಿ ದೊರೆಯುತ್ತಿತ್ತು. ಸರ್ಕಾರ ತೆರಿಗೆದಾರರ ಹಣವನ್ನು ಬಳಸಿ ಈ ಪಿಂಚಣಿ ನೀಡುತ್ತಿತ್ತು. ಕನಿಷ್ಠ 10 ವರ್ಷ ಸರ್ಕಾರಿ ಸೇವೆ ಸಲ್ಲಿಸಿದ ನೌಕರರು ಈ ಪಿಂಚಣಿ ಯೋಜನೆಗೆ ಅರ್ಹರಾಗಿರುತ್ತಿದ್ದರು.
ಈಗ ಜಾರಿಯಲ್ಲಿರುವ ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ಅಡಿಯಲ್ಲಿ ನಿವೃತ್ತಿಯ ನಂತರ ಎಷ್ಟು ಮೊತ್ತ ಪಿಂಚಣಿಯಾಗಿ ದೊರೆಯುತ್ತದೆ ಎಂದು ನಿರ್ದಿಷ್ಟವಾಗಿ ಹೇಳಲಾಗದು. ಏಕೆಂದರೆ ನೌಕರನು ಪ್ರತಿ ತಿಂಗಳು ಎನ್‌ಪಿಎಸ್ ಖಾತೆಯಲ್ಲಿ ಸಂಬಳದ ಶೇ.10 ರಷ್ಟನ್ನು ಇರಿಸಬೇಕು. ಅದಕ್ಕೆ ಪ್ರತಿಯಾಗಿ ಸರ್ಕಾರವು ಶೇ.14ರಷ್ಟನ್ನು ನೀಡುತ್ತದೆ. ಈ ರೀತಿ ಜಮಾ ಆದ ಮೊತ್ತಕ್ಕೆ ಎಷ್ಟು ಲಾಭ ಸಿಗುತ್ತದೆ ಎಂಬುದನ್ನು ಆಧರಿಸಿ ಪಿಂಚಣಿ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ.
ನೌಕರರ ಸಂಬಳದಿಂದ ಕಡಿತ ಮಾಡಿದ ಮೊತ್ತವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊತ್ತಿರುವ ಕಂಪನಿಗಳು ಆಯಾ ಕಾಲಕ್ಕೆ ಅವರ ಲಾಭ ನಷ್ಟಗಳ ಆಧಾರದಲ್ಲಿ ಪಿಂಚಣಿಯ ಮೊತ್ತವನ್ನು ನಿಗದಿಪಡಿಸಬಹುದು. ಆ ಮೊತ್ತ ಹೆಚ್ಚಿರಬಹುದು, ಕಡಿಮೆ ಇರಬಹುದು ಅಥವಾ ಏನೂ ಇಲ್ಲದೇ ಹೋಗಬಹುದು! ಇದನ್ನು ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್‌ಮೆಂಟ್ ಅಥಾರಿಟಿ ಕಾಯ್ದೆಯ ಸೆಕ್ಷನ್ 20 (2)(ಜಿ) ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಇದರ ಪ್ರಕಾರ ಪಿಂಚಣಿ ಮೊತ್ತದ ನೀಡಿಕೆಯ ಬಗ್ಗೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ಆಯಾ ಕಾಲಘಟ್ಟದಲ್ಲಿ ಪಿಂಚಣಿ ನಿರ್ವಾಹಕರ ತೀರ್ಮಾನದಂತೆ ಪಿಂಚಣಿಯನ್ನು ನೀಡಲಾಗುತ್ತದೆ.