ಬೆಂಗಳೂರು: ಕಳೆದ ಒಂದು ದಶಕದಿಂದ ಬೆಂಗಳೂರಿನ ಓಕಳಿಪುರ ಜಂಕ್ಷನ್‌ನ ಅಷ್ಟಪಥ ಸಿಗ್ನಲ್ ಮುಕ್ತ ಕಾರಿಡಾರ್ ಕಾಮಗಾರಿ ನಡೆಯುತ್ತಲೇ ಇದೆ. ಇದರಲ್ಲಿ ಈಗಾಗಲೇ ಆರು ಪಥವನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಬಾಕಿ ಉಳಿದಿರುವ ಎರಡು ಪಥ ಫೆಬ್ರವರಿ ಅಂತ್ಯದ ವೇಳೆಗೆ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ತಿಳಿಸಿದೆ.
ಬಿಬಿಎಂಪಿ, ಮೆಜೆಸ್ಟಿಕ್ ಗೆ ಪ್ರವೇಶ ಕಲ್ಪಿಸುವ ಓಕಳಿಪುರ ಜಂಕ್ಷನ್ ನಲ್ಲಿ 2013-14ರಲ್ಲಿ ಎಂಟು ಪಥದ ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿತ್ತು. ಹಂತಹಂತವಾಗಿ ಆರು ಪಥವನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಆದರೆ, ಚೆನ್ನೈ ರೈಲ್ವೆ ಮಾರ್ಗದಲ್ಲಿ ಎರಡು ಕೆಳ ಸೇತುವೆ ನಿರ್ಮಾಣ ಕಾರ್ಯ ಬಾಕಿ ಉಳಿದುಕೊಂಡಿತ್ತು. ಇದೀಗ ಈ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಫೆಬ್ರವರಿ ಅಂತ್ಯದ ವೇಳೆಗೆ ವಾಹನ ಸಂಚಾರಕ್ಕೆ ಮುಕ್ತಗೊಳ್ಳಿಸಲಾಗುವುದು ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರಿಂದ ಮಲ್ಲೇಶ್ವರ ಮತ್ತು ರಾಜಾಜಿನಗರ ಕಡೆಯಿಂದ ರೈಲ್ವೆ ನಿಲ್ದಾಣ ಹಾಗೂ ಮೆಜೆಸ್ಟಿಕ್ ನಿಂದ ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂ 6,7 ಹಾಗೂ 8ಕ್ಕೆ ನೇರವಾಗಿ ಪ್ರವೇಶ ಪಡೆಯುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಲೋಕೇಶ್ ತಿಳಿಸಿದ್ದಾರೆ.
ರೈಲ್ವೆ ಹಳಿ ಕೆಳಭಾಗದಲ್ಲಿ ಪ್ರೀಕಾಸ್ಟ್ ಬಾಕ್ಸ್ ಅಳವಡಿಕೆ ಕಾಮಗಾರಿಯನ್ನು ರೈಲ್ವೆ ಇಲಾಖೆ ವಹಿಸಿಕೊಂಡಿತ್ತು. ಇದೀಗ ಬಾಕ್ಸ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿ ಸ್ಥಳದಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿ ಮಾತ್ರ ಬಾಕಿ ಉಳಿದುಕೊಂಡಿದೆ. ರೈಲ್ವೆ ಇಲಾಖೆಯು ಕಾಮಗಾರಿ ಸ್ಥಳವನ್ನು ಬಿಬಿಎಂಪಿಗೆ ಹಸ್ತಾಂತರ ಮಾಡುತ್ತಿದಂತೆ ಚರಂಡಿ ಪೈಪ್ ಅಳವಡಿಕೆ ಹಾಗೂ ರಸ್ತೆ ಸಂಪರ್ಕ ಕಾಮಗಾರಿ ಪೂರ್ಣಗೊಳಿಸಿ ಸಂಚಾರ ಮುಕ್ತಕ್ಕೆ ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಚನ್ನೈ ರೈಲ್ವೆ ಮಾರ್ಗದಲ್ಲಿ ಅತಿ ಹೆಚ್ಚು ರೈಲುಗಳ ಸಂಚಾರ ಇದ್ದ ಕಾರಣ ಹಗಲು ಹೊತ್ತು ಕಾಮಗಾರಿ ನಡೆಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಪ್ರೀ ಕಾಸ್ಟ್ ಬಾಕ್ಸ್ ಗಳನ್ನು ರೈಲ್ವೆ ಹಳಿಯ ಕೆಳ ಭಾಗದಲ್ಲಿ ಅಳವಡಿಕೆ ಮಾಡುವ ಕಾಮಗಾರಿ ನಡೆಯುತ್ತಿದೆ. ತಡರಾತ್ರಿ 12.30 ರಿಂದ ಬೆಳಗಿನ ಜಾವ 4.30ರ ಅವಧಿಯಲ್ಲಿ ಮಾತ್ರ ಕೆಲಸ ಮಾಡಬೇಕಿದೆ. ದಿನವೊಂದಕ್ಕೆ 2 ರಿಂದ 3 ಅಡಿ ಮಾತ್ರ ಪ್ರೀ ಕಾಸ್ಟ್ ಬಾಕ್ಸ್ ಅನ್ನು ಹಳಿಯ ಕೆಳಭಾಗದಲ್ಲಿ ಕೂಡಿಸಲು ಸಾಧ್ಯವಾಗುತ್ತಿದೆ. ಈ ಕಾರಣಗಳಿಗಾಗಿ ಕಾಮಗಾರಿ ವಿಳಂಬವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.