ಭುವನೇಶ್ವರ: ಒಡಿಶಾದ ಬೌದ್ಧ ನೆಲೆಗಳಾದ ರತ್ನಗಿರಿ, ಉದಯಗಿರಿ ಹಾಗೂ ಲಲಿತಗಿರಿ ಈ ಮೂರು ಐತಿಹಾಸಿಕ ತಾಣಗಳನ್ನು ಯುನೆಸ್ಕೋ ಸಂಸ್ಥೆ ‘ಶಾರ್ಟ್ ಲಿಸ್ಟ್’ ಮಾಡಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ. ಇವುಗಳನ್ನು ಬೌದ್ಧ ಪರಂಪರೆಯ ‘ಡೈಮಂಡ್ ಟ್ರಯಾಂಗಲ್’ ಎಂದು ಕರೆಯಲಾಗುತ್ತದೆ.
ಕಟಕ್ ಜಿಲ್ಲೆಯಲ್ಲಿರುವ ರತ್ನಗಿರಿ, ಉದಯಗಿರಿ ಹಾಗೂ ಲಲಿತಗಿರಿ ತಾಣಗಳು ಪ್ರಾಚೀನ ಭಾರತದಲ್ಲಿ ‘ಹೀನಯಾನ’, ‘ಮಹಾಯಾನ’ ಹಾಗೂ ‘ವಜ್ರಯಾನ’ಕ್ಕೆ ನೆಲೆ ಒದಗಿಸಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಡಿಶಾದ ಪ್ರವಾಸೋದ್ಯಮ ಸಚಿವ ಪಾರ್ವತಿ ಪರೀದಾ ಅವರು ಈ ವಿಷಯನ್ನು ತಿಳಿಸಿದ್ದು, ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಭಾರತ ಸರ್ಕಾರ ಈ ಮೂರು ನೆಲೆಗಳ ಹೆಸರನ್ನು ಕಳಹಿಸಿತ್ತು ಎಂದರು.
ಭಾರತ ಸರ್ಕಾರದ ಪ್ರಾಚ್ಯ ಇಲಾಖೆ ಕಳೆದ ಡಿಸೆಂಬರ್‌ನಲ್ಲಿ ಈ ರತ್ನಗಿರಿ, ಉದಯಗಿರಿ ಹಾಗೂ ಲಲಿತಗಿರಿ ಐತಿಹಾಸಿಕ ತಾಣಗಳನ್ನು ಯುನೆಸ್ಕೊ ತಾಣಗಳನ್ನಾಗಿ ಮಾಡಲು ಪಟ್ಟಿ ಕಳುಹಿಸಿಕೊಟ್ಟಿತ್ತು. ಈ ಮೂರು ಗಿರಿ ತಾಣಗಳು ಬೌದ್ಧ ಧರ್ಮದ ಪರಂಪರೆಯಲ್ಲಿ ಉನ್ನತ ಸ್ಥಾನ ಪಡೆದುಕೊಂಡಿವೆ ಎಂದು ಹೇಳಿದರು.

