ನಟಿ ರಂಭಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳು ಸಿನಿಮಾ ಪ್ರಿಯರಿಗೆ ರಂಭಾ ಪರಿಚಯ ಇದ್ದೇ ಇರುತ್ತದೆ. ಆದರೆ ರಂಭಾ ಅದ್ಯಾಕೋ ಯಶಸ್ಸಿನ ಅಲೆಯಲ್ಲಿರುವಾಗಲೇ, ಡಿಮ್ಯಾಂಡ್ ಇರುವಾಗಲೇ ಚಿತ್ರರಂಗವನ್ನು ತೊರೆದರು. ಇಂದು ಅವರ ಜನ್ಮದಿನ. 48 ನೇ ವಸಂತಕ್ಕೆ ಕಾಲಿಟ್ಟ ರಂಭಾ ಅವರಿಗೆ ಶುಭಾಶಯಗಳ ಸುರಿಮಳೆಯೇ ಸುರಿಯುತ್ತಿದೆ. ಅವರನ್ನು ಮತ್ತೆ ತೆರೆಮೇಲೆ ನೋಡುವುದಕ್ಕೆ ಅಭಿಮಾನಿಗಳು ಕಾಯುತ್ತಿತ್ತಾದರೂ ಅವರು ಚಿತ್ರರಂಗಕ್ಕೆ ಬರುವ ಸೂಚನೆ ಇಲ್ಲ. ಗಂಡ, ಮನೆ, ಮಕ್ಕಳು ಅಂತ ಆರಾಮವಾಗಿದ್ದಾರೆ. ಆದರೆ ಚಿತ್ರರಂಗ ತೊರೆಯುವುದಕ್ಕೆ ಕಾರಣ ಏನು ಎಂಬುದಕ್ಕೆ ಕಾರಣ ಇಲ್ಲಿದೆ.
ರಂಭಾ 90 ದಶಕದ ಬಹುಬೇಡಿಕೆಯ ನಟಿ. ಮಲಯಾಳಂ, ತಮಿಳು ಚಿತ್ರರಂಗದಲ್ಲಿ ಆಗ ಸಾಕಷ್ಟು ಹೆಸರು ಮಾಡಿದ್ದರು. ಜಗ್ಗೇಶ್ ಅವರ ಸರ್ವರ್ ಸೋಮಣ್ಣ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೂ ಪರಿಚಯವಾದರು. ಬಳಿಕ ಓ ಪ್ರೇಮವೇ, ಸಾಹುಕಾರ, ಗಂಡುಗಲಿ ಕುಮಾರ ರಾಮ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರು. 2010ರಲ್ಲಿ ಮದುವೆಯಾದ ರಂಭಾ ಚಿತ್ರರಂಗದಿಂದ ದೂರವೇ ಉಳಿದು ಬಿಟ್ಟರು.
ಕೆನಡಾ ಮೂಲದ ಉದ್ಯಮಿ ಇಂದ್ರಕುಮಾರ್ ಪದ್ಮನಾಥನ್ ಎಂಬುವವರನ್ನು ರಂಭಾ ಮದುವೆಯಾದರು. 2010ರಲ್ಲಿ ತಿರುಮಲದಲ್ಲಿ ಮದುವೆಯಾದ ನಟಿಗೆ ಮೂವರು ಮಕ್ಕಳು. ಎರಡು ಹೆಣ್ಣು, ಒಂದು ಗಂಡು. ಮನೆ, ಸಂಸಾರ ಅಂತ ಇರುವ ರಂಭಾ, ಮದುವೆಯಾದ ಒಂದೇ ವರ್ಷಕ್ಕೆ ಚಿತ್ರರಂಗ ತೊರೆದರು. ಮದುವೆಯಾಗಿದ್ದೆ ಚಿತ್ರರಂಗ ತೊರೆಯಲು ಕಾರಣ ಎಂದೇ ಹೇಳಲಾಗುತ್ತಿದೆ. ಸದ್ಯ ಅವರ ಕುಟುಂಬದ ಜೊತೆಗೆ ಟೊರೆಂಟೋದಲ್ಲಿ ರಂಭಾ ವಾಸವಾಗಿದ್ದಾರೆ.