ಹೇಗ್ (ನೆದರ್‌ಲ್ಯಾಂಡ್ಸ್): ಕರ್ನಾಟಕದ ಸೆಮಿಕಂಡಕ್ಟರ್ ವಲಯದಲ್ಲಿ ಮುಂದಿನ ಐದು ವರ್ಷಗಳಲ್ಲಿ ₹ 8,400 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಮಾಡುವುದಾಗಿ ಸೆಮಿಕಂಡಕ್ಟರ್ ತಯಾರಿಸುವ ಜಾಗತಿಕ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ನೆದರ್‌ಲ್ಯಾಂಡ್ಸ್‌ನ ಎನ್‌ಎಕ್ಸ್‌ಪಿ ವಾಗ್ದಾನ ಮಾಡಿದೆ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಇನ್ವೆಸ್ಟ್ ಕರ್ನಾಟಕ-2025ಕ್ಕೆ ಹೂಡಿಕೆದಾರರನ್ನು ಆಕರ್ಷಿಸಲು ಯುರೋಪ್ ಪ್ರವಾಸದಲ್ಲಿ ಇರುವ ಸಚಿವರ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗದ ಜೊತೆಗಿನ ಭೇಟಿ ಸಂದರ್ಭದಲ್ಲಿ ಈ ಭರವಸೆ ದೊರೆತಿದೆ.
ಸೆಮಿಕಂಡಕ್ಟರ್ ಕ್ಷೇತ್ರದಲ್ಲಿನ ಸಂಶೋಧನೆ ಹಾಗೂ ಅಭಿವೃದ್ಧಿಗೆ (ಆರ್‌ಆ್ಯಂಡ್‌ಡಿ) ಕಂಪನಿಯು ಬೆಂಗಳೂರಿನಲ್ಲಿ ₹ 8,400 ಕೋಟಿ ಹೂಡಿಕೆ ಮಾಡುವುದಾಗಿ ಎನ್‌ಎಕ್ಸ್‌ಪಿ-ಯ ಕಾರ್ಯನಿರ್ವಾಹಕ ನಿರ್ದೇಶಕ ಮೌರಿಸ್ ಗೆರೆಟ್ಸ್ ಅವರು ಭರವಸೆ ನೀಡಿದ್ದಾರೆ. ನವೋದ್ಯಮ ಹಾಗೂ ಮಾನವ ಸಂಪನ್ಮೂಲದ ಕೌಶಲ ವೃದ್ಧಿ ಕ್ಷೇತ್ರದಲ್ಲಿ ಪಾಲುದಾರಿಕೆ ಮಾಡಿಕೊಳ್ಳುವುದಕ್ಕೂ ಉತ್ಸುಕತೆ ತೋರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜಾಗತಿಕ ವಾಣಿಜ್ಯ ಬಾಂಧವ್ಯ ವೃದ್ಧಿ ನಿಟ್ಟಿನಲ್ಲಿ ರಾಜ್ಯದ ನಿಯೋಗವು ಫಿಲಿಪ್ಸ್ ಕಂಪನಿ ಜೊತೆಗೂ ಸಮಾಲೋಚನೆ ನಡೆಸಿತು. ಬೆಂಗಳೂರಿನ ಕ್ಯಾಂಪಸ್‌ನಲ್ಲಿ 2023ರಲ್ಲಿ ₹445 ಕೋಟಿ ಹೂಡಿಕೆ ಮಾಡಿರುವ ಈ ಕಂಪನಿಯು ರಾಜ್ಯದಲ್ಲಿ ತಯಾರಿಕಾ ಘಟಕ ಸ್ಥಾಪಿಸಲು ಮುಂದೆ ಬಂದರೆ ಅಗತ್ಯ ನೆರವು ಕಲ್ಪಿಸುವುದಾಗಿ ನಿಯೋಗವು ಭರವಸೆ ನೀಡಿತು.
ರಾಜ್ಯದ ನಿಯೋಗವು ದೀಪ / ಬೆಳಕಿನ ಉತ್ಪನ್ನಗಳ ಜಾಗತಿಕ ಪ್ರಮುಖ ಕಂಪನಿ ಸಿಗ್ನಿಫಿ (ಈ ಹಿಂದಿನ ಫಿಲಿಪ್ಸ್ ಲೈಟಿಂಗ್) ಪ್ರಮುಖರನ್ನು ಭೇಟಿಯಾಗಿ ದೇಶಿ ಮತ್ತು ರಫ್ತು ಮಾರುಕಟ್ಟೆ ಉದ್ದೇಶಕ್ಕೆ ರಾಜ್ಯದಲ್ಲಿ ತಯಾರಿಕಾ ಘಟಕ ಸ್ಥಾಪಿಸುವುದರ ಪ್ರಯೋಜನಗಳನ್ನು ಮನದಟ್ಟು ಮಾಡಿಕೊಟ್ಟಿತು. ಹೈನೆಕೆನ್ ಜೊತೆಗಿನ ಭೇಟಿಯಲ್ಲಿ ಕರ್ನಾಟಕದಲ್ಲಿ ತಯಾರಿಕೆಗೆ ಸಂಬಂಧಿಸಿದ ಹೂಡಿಕೆ ಮಾಡುವುದರ ಪ್ರಯೋಜನಗಳನ್ನು ವಿವರಿಸಲಾಗಿದೆ.
ನೆದರಲ್ಯಾಂಡ್ಸ್‌ನಲ್ಲಿ ನಡೆದ ʼಇನ್ವೆಸ್ಟ್ ಕರ್ನಾಟಕʼದ ರೋಡ್‌ಷೋದಲ್ಲಿ ನಾವೀನ್ಯತೆ, ಸೆಮಿಕಂಡಕ್ಟರ್ಸ್, ನವೀಕರಿಸಬಹುದಾದ ಇಂಧನ ಮತ್ತು ತಯಾರಿಕಾ ವಲಯದಲ್ಲಿನ ಕರ್ನಾಟಕದಲ್ಲಿ ಇರುವ ಸದವಕಾಶಗಳನ್ನು ಸ್ಥಳೀಯ ಉದ್ಯಮಿಗಳಿಗೆ ಪರಿಚಯಿಸಲಾಯಿತು.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ ಭಾಗವಹಿಸಿದ್ದರು.