ಮುಂಬೈ: ಹದಿನಾಲ್ಕು ಅಮಾಯಕ ಜೀವಗಳ ಬಲಿ ಪಡೆದ ಘೋರ ದುರಂತದ ನಂತರ ಎಚ್ಚೆತ್ತುಕೊಂಡಿರುವ ಮುಂಬೈ ಮಹಾನಗರಪಾಲಿಕೆ ಆದೇಶದ ಮೇರೆಗೆ ನಗರದಲ್ಲಿ ಅಳವಡಿಸಿದ್ದ ಬೃಹತ್ ಜಾಹೀರಾತು ಫಲಕಗಳ ತೆರವು ಕಾರ್ಯಾಚರಣೆ ಆರಂಭಗೊಂಡಿದೆ.
ಘಾಟ್ಕೋಪರ್ ಭಾಗದಲ್ಲಿ ಅಳವಡಿಸಲಾಗಿದ್ದ 120 ಅಡಿ ಎತ್ತರದ 120 ಅಡಿ ಅಗಲದ ಜಾಹೀರಾತು ಫಲಕ ನಿನ್ನೆ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಕುಸಿದು ಬಿದ್ದ ಪರಿಣಾಮವಾಗಿ ಇದುವರೆಗೆ 14 ಮಂದಿ ಮೃತಪಟ್ಟಿದ್ದು 70 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸ್ಥಳಕ್ಕೆ ಧಾವಿಸಿದ NDRF ಸಿಬ್ಬಂದಿ ಸೇರಿದಂತೆ ಅಗ್ನಿಶಾಮಕ ದಳ ಮತ್ತು ಮಹಾನಗರಪಾಲಿಕೆ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ರಕ್ಷಣಾ ಕಾರ್ಯಾಚರಣೆ ಸಂದರ್ಭದಲ್ಲಿ ಊಹೆಗೂ ಮೀರಿದ ಜೀವಹಾನಿ ಆಗಿರುವುದು ಬೆಳಕಿಗೆ ಬಂದಿತ್ತು.
ಪೊಲೀಸ್ ಕಲ್ಯಾಣ ಸಹಕಾರ ಸಂಘಕ್ಕೆ ಲೀಸ್ ಆಧಾರದಲ್ಲಿ ನೀಡಲಾಗಿರುವ ಜಾಗದಲ್ಲಿ ಇಗೋ ಮೀಡಿಯಾ ಏಜೆನ್ಸಿ ಜಾಹೀರಾತು ಫಲಕ ಅವಳಡಿಸಿತ್ತು. ಇಗೋ ಮೀಡಿಯಾ ಅಳವಡಿಸಿದ್ದ ನಾಲ್ಕು ಫಲಕಗಳ ಪೈಕಿ ನಿನ್ನೆ ಒಂದು ಫಲಕ ಕೆಳಗೆ ಬಿದ್ದಿದೆ. ಮುಂಬೈ ಪೊಲೀಸರು ಇಗೋ ಮೀಡಿಯಾ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಾಲ್ಕು ಫಲಕಗಳನ್ನು ಅಳವಡಿಸಲು ಸಹಾಯಕ ಪೊಲೀಸರ್ ಆಯುಕ್ತ (ರೈಲ್ವೇಸ್)ರಿಂದ ಇಗೋ ಮೀಡಿಯಾ ಅನುಮತಿ ಪಡೆದಿದ್ದರೂ BMC ಯಿಂದ ನಿರಾಕ್ಷೇಪಣಾ ಪತ್ರ ಪಡೆದಿರಲಿಲ್ಲ.