ವಿಜಯಪುರ: ಕುಖ್ಯಾತ ರೌಡಿ ಬಾಗಪ್ಪ ಹರಿಜನನ ಭೀಕರ ಹತ್ಯೆ;ಬೆಚ್ಚಿ ಬಿದ್ದ ಜನತೆ

Most read

ವಿಜಯಪುರ: ಭೀಮಾತೀರದ ಕುಖ್ಯಾತ ರೌಡಿ ಚಂದಪ್ಪ ಹರಿಜನನ ಸಹಚರ ಬಾಗಪ್ಪ ಹರಿಜನನನ್ನು ನಗರದ ರೇಡಿಯೋ ಕೇಂದ್ರ ಸಮೀಪ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಬಾಗಪ್ಪನ ಎಡಗೈ ಮತ್ತು ಮುಂಗೈ ಕತ್ತರಿಸಲಾಗಿದ್ದು, ಮುಖ ಹಾಗೂ ತಲೆಗೆ ಹೊಡೆದು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ವಿಜಯಪುರ ಕಲಬುರಗಿ ಸೇರಿದಂತೆ ಭೀಮಾತೀರದಲ್ಲಿ ನಡೆದ ಹಲವಾರು ಕ್ರಿಮಿನಲ್‌ ಚಟುವಟಿಕೆಗಳಲ್ಲಿ ಬಾಗಪ್ಪ ಭಾಗಿಯಾಗಿದ್ದ.

2017ರಲ್ಲಿ ವಿಜಯಪುರ ಜಿಲ್ಲಾ ಸೆಷನ್ಸ್‌ ಕೋರ್ಟ್‌ ಆವರಣದಲ್ಲೇ ಬಾಗಪ್ಪ ಹರಿಜನನ ಮೇಲೆ ಗುಂಡಿನ ದಾಳಿ ನಡೆದಿತ್ತು. ಆರು ಗುಂಡುಗಳು ತಗುಲಿದ್ದರೂ ಬಾಗಪ್ಪ ಬದುಕುಳಿದಿದ್ದ. ಈ ಘಟನೆ ನಡೆದ ನಂತರ ಬಾಗಪ್ಪ ಭೂಗತನಾಗಿದ್ದ. ಹಂತಕರ ಪತ್ತೆಗೆ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ.

ವಕೀಲ ರವಿ ಅಗರಖೇಡ್ ಹತ್ಯೆಗೆ ಪ್ರತಿಕಾರವಾಗಿ ಬಾಗಪ್ಪನನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಕೊಲೆಯಾಗಿರುವ ವಕೀಲ ರವಿ ಸಹೋದರ ಪ್ರಕಾಶ್ ಆಲಿಯಾಸ್ ಪಿಂಟ್ಯಾ ಮತ್ತು ಸಹಚರರಿಂದ ಕೃತ್ಯ ನಡೆದಿದೆ ಎಂದು ಊಹಿಸಲಾಗಿದೆ. ಬಾಗಪ್ಪ ಪುತ್ರಿ ಗಂಗೂಬಾಯಿ ಗಾಂಧಿಚೌಕ ಠಾಣೆಗೆ ದೂರು ನೀಡಿದ್ದು, ಪಿಂಟ್ಯಾ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಬಾಗಪ್ಪ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ. ವಕೀಲ ರವಿ ಮೂಲಕ ವ್ಯವಹಾರವನನು ನಿರ್ವಹಿಸುತ್ತಿದ್ದ. ಆದರೆ ರವಿ ಬಾಗಪ್ಪ ನಡುವೆ ವ್ಯವಹಾರದಲ್ಲಿ ಒಡಕು ಮೂಡಿತ್ತು. ಬಾಗಪ್ಪ ವ್ಯವಹಾರದಲ್ಲಿ ಶೇ.50 ರಷ್ಟು ಪಾಲು ಕೇಳಿದ್ದಕ್ಕೆ ರವಿ ಒಪ್ಪಿರಲಿಲ್ಲ. ನಂತರ 5 ತಿಂಗಳ ಹಿಂದೆ ರವಿ ಮೇಲೆ ಕಾರು ಹರಿಸಿ ಬೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಬಾಗಪ್ಪ ಸಹಚರರನ್ನು ಬಂಧಿಸಲಾಗಿದ್ದು, ಜೈಲಿನಲ್ಲಿದ್ದಾರೆ.

ಸಹೋದರನ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಪಿಂಟ್ಯಾ ಸಂಚು ರೂಪಿಸಿದ್ದ.  ತನ್ನ ನಾಲ್ವರು ಗೆಳೆಯರೊಂದಿಗೆ ಸೇರಿ ಬಾಗಪ್ಪನ ಕೊಲೆ ಮಾಡಿದ್ದಾನೆ. ಪಿಂಟ್ಯಾ ಇದೇ ಮೊದಲ ಬಾರಿಗೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಉಳಿದ ನಾಲ್ವರು ಆರೋಪಿಗಳು ಯಾರೆಂದು ಪತ್ತೆಯಾಗಿಲ್ಲ. ಸದ್ಯ ತಲೆಮರೆಸಿಕೊಂಡ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

More articles

Latest article