ಬೆಂಗಳೂರು: ವಾರ್ಷಿಕ ರೂ. 40 ಲಕ್ಷ ವಹಿವಾಟು ನಡೆಸುವ ಸಣ್ಣ ವ್ಯಾಪಾರಿಗಳಿಗೆ ಯಾವುದೇ ಮುನ್ಸೂಚನೆಯಿಲ್ಲದ ಭಾರಿ ಮೊತ್ತದ ತೆರಿಗೆ ಪಾವತಿಗೆ ನೋಟಿಸ್ ಜಾರಿ ಮಾಡಿರುವ ವಾಣಿಜ್ಯ ತೆರಿಗೆ ಇಲಾಖೆಯ ಕ್ರಮ ವಿರೋಧಿಸಿ, ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಜುಲೈ 23 ಮತ್ತು 24ರಂದು ಎರಡು ದಿನಗಳ ಬಂದ್‌ಗೆ ಕರೆ ನೀಡಿದೆ.
ಬಂದ್ ಅವಧಿಯಲ್ಲಿ ಹಾಲು ಬೇಕರಿ ಉತ್ಪನ್ನಗಳು, ಬೀಡಿ, ಸಿಗರೇಟ್ ಮಾರಾಟವನ್ನು ಸ್ಥಗಿತಗೊಳಿಸುವುದಾಗಿ ಸಣ್ಣ ವ್ಯಾಪಾರಿಗಳು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು ಮಾತನಾಡಿ, ಜುಲೈ 23 ಮತ್ತು 24ರಂದು ಕೇಂದ್ರ ಸರ್ಕಾರದ ವಿರುದ್ಧ ಇಡೀ ರಾಜ್ಯದಲ್ಲಿ ದೊಡ್ಡ ಮಟ್ಟದ ಹೋರಾಟ ಕೈಗೊಳ್ಳಲಾಗುವುದು. ಜುಲೈ 25ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಯಾವುದೇ ಮುನ್ಸೂಚನೆ ನೀಡದೆ ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ನೀಡಿರುವುದಕ್ಕೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.
ಚಾಲಕರ ಸಂಘದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಮಾತನಾಡಿ, ಜಿಎಸ್ ಟಿ ಮಂಡಳಿ ಅಧ್ಯಕ್ಷರೂ ಆಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡಲೇ ಮಧ್ಯಪ್ರವೇಶಿಸಿ ನೋಟಿಸ್ ಹಿಂಪಡೆಯಬೇಕು. ಜಿ.ಎಸ್.ಟಿ ಮಂಡಳಿ ಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆಸಿ ತಕ್ಷಣವೇ ಸಣ್ಣ ಉದ್ದಿಮೆದಾರರ ಪರವಾದ ತೀರ್ಮಾನ ತೆಗೆದುಕೊಳ್ಳಬೇಕು. ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ನಿರ್ಮಲಾ ಸೀತಾರಾಮನ್ ಉದ್ದಿಮೆದಾರರ ಪರವಾಗಿರಬೇಕು. ನಮ್ಮ ಹಿತಾಸಕ್ತಿಗೆ ವಿರುದ್ಧವಾಗಿ ಕ್ರಮ ಕೈಗೊಂಡರೆ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದರು.