ಅನಂತ್‌ ಕುಮಾರ್‌ ಹೆಗಡೆ, ಶೋಭಾ ಕರಂದ್ಲಾಜೆ, ನಳೀನ್‌ ಕಟೀಲ್‌, ಪ್ರತಾಪ್‌ ಸಿಂಹ, ಜಿ.ಎಂ.ಸಿದ್ಧೇಶ್ವರ, ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣಗೆ ಟಿಕೆಟ್‌ ಇಲ್ಲ!

Most read

ಹೊಸದಿಲ್ಲಿ: ನಿರೀಕ್ಷೆಯಂತೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹಲವು ಹೊಸ ಮುಖಗಳನ್ನು ಬಿಜೆಪಿ ಸ್ಪರ್ಧೆಗೆ ಇಳಿಸಲಿದ್ದು, ಹಲವು ಹಾಲಿ ಸಂಸದರು ಟಿಕೆಟ್‌ ಪಡೆಯುವಲ್ಲಿ ವಿಫಲರಾಗಿದ್ದರೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.

ʻಗೋಬ್ಯಾಕ್‌ ಶೋಭಾʼ ಎಂಬ ಬಿಜೆಪಿ ಕಾರ್ಯಕರ್ತರ ಅಭಿಯಾನದಿಂದ ಕಂಗೆಟ್ಟಿರುವ ಕೇಂದ್ರ ಸಚಿವೆ ಹಾಗು ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಟಿಕೆಟ್‌ ಕಳೆದುಕೊಳ್ಳಲಿರುವವರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಬಿಜೆಪಿ 400 ಸ್ಥಾನ ಗೆದ್ದರೆ ಸಂವಿಧಾನ ಬದಲಿಸುತ್ತೇವೆ ಎಂದು ಸಂವಿಧಾನ ವಿರೋಧಿ ಹೇಳಿಕೆ ನೀಡಿ ಬಿಜೆಪಿ ಉನ್ನತ ನಾಯಕರಿಗೆ ಮುಜುಗರ ತಂದಿರುವ ಉತ್ತರ ಕನ್ನಡ ಸಂಸದ ಅನಂತ್‌ ಕುಮಾರ್‌ ಹೆಗಡೆಗೆ ಈ ಬಾರಿ ಟಿಕೆಟ್‌ ನೀಡದೇ ಇರಲು ಬಿಜೆಪಿ ಹೈಕಮಾಂಡ್‌ ನಿರ್ಧರಿಸಿದೆ.

ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ಹಲವು ಬಿಜೆಪಿ ನಾಯಕರನ್ನು ಎದುರು ಹಾಕಿಕೊಂಡ ಪರಿಣಾಮವಾಗಿ ಈ ಬಾರಿ ಟಿಕೆಟ್‌ ಕಳೆದುಕೊಳ್ಳಲಿದ್ದು, ಅವರ ಸ್ಥಾನದಲ್ಲಿ ರಾಜವಂಶಸ್ಥ ಯದುವೀರ ಒಡೆಯರ್‌ ಅವರಿಗೆ ಟಿಕೆಟ್‌ ನೀಡಲು ಬಿಜೆಪಿ ಹೈಕಮಾಂಡ್‌ ನಿರ್ಧರಿಸಿದೆ.

ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್ ಸಹ ಟಿಕೆಟ್‌ ಕಳೆದುಕೊಳ್ಳಲಿದ್ದಾರೆ. ಕ್ಷೇತ್ರದಲ್ಲಿ ನಳೀನ್‌ ಕಾರ್ಯವೈಖರಿ ಕುರಿತು ಜನರು ಅಸಮಾಧಾನಗೊಂಡಿರುವ ಹಿನ್ನೆಲೆಯಲ್ಲಿ ನಳೀನ್‌ ಬದಲು ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತಿದೆ. ಟಿಕೆಟ್‌ ಕಳೆದುಕೊಳ್ಳಲಿರುವ ಮುನ್ಸೂಚನೆ ಪಡೆದಿರುವ ನಳೀನ್‌ ಕುಮಾರ್‌ ಪಕ್ಷ ಹೇಳಿದರೆ ಕಸ ಗುಡಿಸಿಕೊಂಡು, ಕಚೇರಿ ಒರೆಸಿಕೊಂಡಿರಲು ಸಿದ್ಧ ಎಂದು ಹತಾಶೆಯ ಹೇಳಿಕೆ ನೀಡಿದ್ದಾರೆ. ಇನ್ನೊಂದೆಡೆ ಈ ಬಾರಿ ಟಿಕೆಟ್‌ ಇಲ್ಲ ಎಂಬ ಸೂಚನೆ ಪಡೆದಿರುವ ಪ್ರತಾಪ್‌ ಸಿಂಹ ನಿನ್ನೆ ಫೇಸ್‌ ಬುಕ್‌ ಲೈವ್‌ ಬಂದು ಕಣ್ಣೀರಿಟ್ಟಿದ್ದಾರೆ.

ಸಂಸದರಾಗಿ ಸರಿಯಾಗಿ ಕಾರ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ, ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ, ಕೊಪ್ಪಳ ಸಂಸದ ಕರಡಿ ಸಂಗಣ್ಣ ಅಮರಪ್ಪ ಅವರುಗಳು ಸಹ ಹೈಕಮಾಂಡ್‌ ಕೆಂಗಣ್ಣಿಗೆ ಗುರಿಯಾಗಿದ್ದು, ಈ ಎಲ್ಲರೂ ಬಿಜೆಪಿಯಿಂದ ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳಲಿದ್ದಾರೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.

ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಟಿಕೆಟ್‌ ಕಳೆದುಕೊಳ್ಳಲಿರುವವರ ಪೈಕಿ ಹೈಕಮಾಂಡ್‌ ಮನವೊಲಿಸಿ ಕಡೆ ಕ್ಷಣದಲ್ಲಿ ಟಿಕೆಟ್‌ ಪಡೆಯಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

More articles

Latest article