ಬೆಂಗಳೂರು:ನಮ್ಮ ಮೆಟ್ರೋ ಲಕ್ಷಾಂತರ ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ಒದಗಿಸುತ್ತಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಮೆಟ್ರೋ ಪ್ರಯಾಣಿಕರು ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿ ಮುಖ್ಯವಾದದ್ದು
ಪಾರ್ಕಿಂಗ್ ಸಮಸ್ಯೆ. ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ದ್ವಿಚಕ್ರ ಮತ್ತು ಕಾರುಗಳಿಗೆ ಪಾರ್ಕಿಂಗ್ ಸ್ಥಳದ ಕೊರತೆ ಇದೆ.
ಪ್ರತಿದಿನ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಪಾರ್ಕಿಂಗ್ ಜಾಗ ಕನಿಷ್ಠ ಪ್ರಮಾಣದಲ್ಲಿದೆ. ಕೆಲವು ನಿಲ್ದಾಣಗಳಲ್ಲಿ ಇಲ್ಲವೇ ಇಲ್ಲ ಎಂದು ಹೇಳಬಹುದು.
ಉದಾಹರಣೆಗೆ ಜಯನಗರ, ಜೆ ಪಿ ನಗರ, ವಿಜಯನಗರ, ಇಂದಿರಾನಗರ ಮೊದಲಾದ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಬಹುತೇಕ ಪ್ರಯಾಣಿಕರು ತಮ್ಮ ಕಾರು ದ್ವಿಚಕ್ರ ವಾಹನಗಳನ್ನು ರಸ್ತೆ, ಫೂಟ್ ಪಾತ್, ಇಲ್ಲವೇ ಅಂಗಡಿ, ಹೋಟೆಲ್ ಇಲ್ಲವೇ ಬೇರೆಯವರ ಮನೆಗಳ ಮುಂದೆ ನಿಲ್ಲಿಸಿ ಹೋಗಬೇಕಾದ ಪರಿಸ್ಥಿತಿ ಇದೆ. ಪ್ರಯಾಣಕ್ಕೆ 30 ರೂ. ಕೊಟ್ಟರೆ ಪಾರ್ಕಿಂಗ್ ಗೂ 30 ರೂ. ವಸೂಲಿ ಮಾಡಲಾಗುತ್ತಿದೆ. ಆದರೂ ಸುರಕ್ಷಿತವಲ್ಲದ ಸ್ಥಳಗಳಲ್ಲಿ ಗಂಟೆಗಟ್ಟಲೆ ವಾಹನ ನಿಲುಗಡೆ ಮಾಡುವುದು ಕ್ಷೇಮವೂ ಅಲ್ಲ. ಕಳ್ಳಕಾಕರ ಭಯ ಇದ್ದೇ ಇರುತ್ತದೆ.
ಮತ್ತೊಂದು ಕಡೆ ನಿಲ್ದಾಣದ ಸುತ್ತಮುತ್ತಲಿನ ವ್ಯಾಪಾರಿಗಳು ಮತ್ತು ನಿವಾಸಿಗಳಿಗೂ ಕಷ್ಟ. ಬೆಳಗ್ಗೆ ದ್ವಿಚಕ್ರ ವಾಹನ ಅಥವಾ ಕಾರು ನಿಲ್ಲಿಸಿ ಹೋಗುತ್ತಾರೆ. ನಮ್ಮ ವ್ಯಾಪಾರಕ್ಕೆ ಅಡ್ಡಿ ಉಂಟಾಗುತ್ತದೆ. ಬರುವ ಗ್ರಾಹಕರಿಗೆ ಪಾರ್ಕಿಂಗ್ ಇಲ್ಲದಂತಾಗುತ್ತದೆ ಎಂದು ಹೇಳುತ್ತಾರೆ. ಮನೆ ಮುಂದೆ ವಾಹನಗಳನ್ನು ನಿಲ್ಲಿಸಿ ಹೋಗುತ್ತಾರೆ. ನಮ್ಮ ವಾಹನಗಳಿಗೆ ಅಡಚಣೆ ಉಂಟಾಗುತ್ತದೆ ಎನ್ನುತ್ತಾರೆ.
ಮಾಲ್ ಗಳಲ್ಲಿ ಪಾರ್ಕಿಂಗ್ ಶುಲ್ಕ ದುಬಾರಿ. ಮಾಲ್ ಗಳ ನೂರಾರು ಶಾಪ್ ಮಾಲೀಕರು ಮತ್ತು ಗ್ರಾಹಕರು ಮೆಟ್ರೋ ಸ್ಟೇಷನ್ ಗಳ ಪಾರ್ಕಿಂಗ್ ನಲ್ಲಿ ವಾಹನ ನಿಲ್ಲಿಸಿ ಹೋಗುತ್ತಾರೆ. ಮೆಟ್ರೋ ಪ್ರಯಾಣಿಕರಿಗೆ ವಾಹನ ನಿಲುಗಡೆಗೆ ಸ್ಥಳವೇ ಇರುವುದಿಲ್ಲ. ಮಾಲ್ ಗಳ ನೂರಾರು ಶಾಪ್ ಮಾಲೀಕರು ಮತ್ತು
ಕಬ್ಬನ್ ಪಾರ್ಕ್ ಎಂ ಜಿ ರಸ್ತೆ ನಿಲ್ದಾಣಗಳಲ್ಲಿ ನಿರ್ದಿಷ್ಟ ಸ್ಥಳವೇ ಇಲ್ಲ. ಎಲ್ಲೆಂದರಲ್ಲಿ ವಾಹನ ನಿಲ್ಲಿಸಲಾಗುತ್ತದೆ. ಒಮ್ಮೊಮ್ಮೆ ವಾಹನಗಳು ಕಳುವಾದ ಉದಾಹರಣೆಗಳೂ ಉಂಟು. ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಕೆಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಹೊರ ವಲಯದ ನಿಲ್ದಾಣಗಳಲ್ಲಿ ಪಾರ್ಕಿಂಗ್ ಮೊದಲಾದ ಸೌಕರ್ಯಗಳನ್ನು ಒದಗಿಸಬಹುದು. ಆದರೆ ಹೃದಯ ಭಾಗದಲ್ಲಿರುವ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡುವುದು ಕಷ್ಟ. ಪ್ರಯಾಣಿಕರೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ ಮಾರ್ಗ ಎನ್ನಬಹುದು.