ಬೆಂಗಳೂರು: ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಜತೆಗೆ ಯಾವ ಕಾಲಕ್ಕೂ ವಿದ್ಯುತ್ ಕೊರತೆಯಾಗದಂತೆ ನೋಡಿಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ 56 ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯುತ್ ಉತ್ಪಾದನೆಯಲ್ಲಿ ರಾಜ್ಯವು ಸ್ವಾವಲಂಬನೆ ಸಾಧಿಸಿದೆ. ಮುಂದಿನ ದಿನಗಳಲ್ಲಿ ಯಾವ ಸಂದರ್ಭದಲ್ಲೂ ವಿದ್ಯುತ್ ಕೊರತೆ ಆಗಬಾರದು. ಆ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದರು. ಸಚಿವ ಕೆ.ಜೆ.ಜಾರ್ಜ್ ನೇತೃತ್ವದಲ್ಲಿ ಕೆಪಿಸಿಎಲ್‌ಸಿಬ್ಬಂದಿ ಮತ್ತು ಅಧಿಕಾರಿಗಳ ತಂಡ ಉತ್ತಮವಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ ಎಂದರು.
ಜಲ, ಉಷ್ಣ, ಸೌರ, ಪವನ, ಅನಿಲ ಮಾತ್ರವಲ್ಲ, ತ್ಯಾಜ್ಯದಿಂದಲೂ ವಿದ್ಯುತ್ ಉತ್ಪಾದಿಸುವ ಮೂಲಕ ಕೆಪಿಸಿಎಲ್ ಅತ್ಯುತ್ತಮ ಸಾಧನೆ ಮಾಡಿದೆ. ಆ ಮೂಲಕ ಅತಿ ಹೆಚ್ಚು ಮೂಲಗಳಿಂದ ವಿದ್ಯುತ್ ಉತ್ಪಾದಿಸುವ ರಾಜ್ಯವಾಗಿ ಕರ್ನಾಟಕವನ್ನು ದೇಶದಲ್ಲೇ ಮುಂಚೂಣಿಯಲ್ಲಿ ನಿಲ್ಲಿಸಿದೆ ಎಂದು ಹೇಳಿದರು.
ಈಗ ವರ್ಷಕ್ಕೆ 20 ಸಾವಿರ ಕೋಟಿ ರೂಪಾಯಿ ಪಂಪ್ ಸೆಟ್ ಸಬ್ಸಿಡಿ ಹಣವನ್ನು ರೈತರ ಪರವಾಗಿ ಸರ್ಕಾರ ಕೊಡುತ್ತಿದೆ. ಕೆಪಿಸಿಎಲ್ ನೌಕರರ ಶ್ರಮದಿಂದ ವಿದ್ಯುತ್ ರೈತರಿಗೆ ತಲುಪುತ್ತಿದೆ. ಪವನ, ಸೌರ, ಉಷ್ಣ, ಜಲ ವಿದ್ಯುತ್ ಉತ್ಪಾದನೆ ಜೊತೆಗೆ ತ್ಯಾಜ್ಯದಿಂದಲೂ ವಿದ್ಯುತ್ ಉತ್ಪಾದನೆ ಮಾಡುತ್ತಾ ದೇಶದಲ್ಲೇ ಪ್ರಮುಖ ಸ್ಥಾನದಲ್ಲಿದ್ದು ಸ್ವಾವಲಂಬನೆ ಸಾಧಿಸಿದ್ದೀವಿ. 60 ಸಾವಿರ ಮೆ.ವ್ಯಾ ಉತ್ಪಾದನೆ ಮಾಡುವ ಗುರಿ ಎಡೆಗೆ ನಾವು ಸಾಗುತ್ತಿದ್ದೇವೆ ಎಂದರು.
ಕೆಪಿಸಿಎಲ್ ನಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಇದರಿಂದ ಕೆಲಸಕ್ಕೆ ಸಮಸ್ಯೆಯಾಗುತ್ತಿದೆ ಎಂಬ ಮನವಿಗಳು ಬಂದಿವೆ. ಖಾಲಿ ಹುದ್ದೆಗಳ ಕುರಿತು ಇಂಧನ ಇಲಾಖೆ ಸಚಿವರು ಮತ್ತು ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಮಾಲೋಚನೆ ನಡೆಸಿ ಶೀಘ್ರದಲ್ಲೇ ಅವುಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
ನಮ್ಮಲ್ಲಿ ಅಸಮಾನತೆ, ಜಾತಿ ವ್ಯವಸ್ಥೆ ಇದೆ. ಇದು ಹೋಗಬೇಕಾದರೆ ಎಲ್ಲರಿಗೂ ಆರ್ಥಿಕ ಶಕ್ತಿ ಬರಬೇಕು. ನಮಗೆ ಶಿಕ್ಷಣ ಸಿಕ್ಕ ಮೇಲೆ ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಳ್ಳಬೇಕು. ಶಿಕ್ಷಣ ಕಲಿತವರೂ ಜಾತಿವಾದಿಗಳಾಗಿ, ದ್ವೇಷವಾದಿಗಳಾಗುತ್ತಿದ್ದಾರೆ. ಮನುಷ್ಯರ ನಡುವೆ ಜಾತಿ, ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತಿ ಸಮಾಜವನ್ನು ವಿಭಜಿಸುವವರಿಂದ ನೀವೆಲ್ಲರೂ ದೂರವಿರಿ. ಕುವೆಂಪು ಅವರ ಆಶಯದಂತೆ ವಿಶ್ವ ಮಾನವರಾಗೋಣ ಎಂದು ಕರೆ ನೀಡಿದರು.
ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, “ರಾಜ್ಯದಲ್ಲಿ ಸಾಕಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದ್ದರೂ ಸಂಗ್ರಹಣಾ ವ್ಯವಸ್ಥೆ ಇಲ್ಲ. ಹೀಗಾಗಿ ಶರಾವತಿಯಲ್ಲಿ 2000 ಮೆಗಾವ್ಯಾಟ್ ಹಾಗೂ ವಾರಾಹಿಯಲ್ಲಿ 1500 ಮೆಗಾವ್ಯಾಟ್ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಆ ಮೂಲಕ ವಿದ್ಯುತ್ ಸಂಗ್ರಹಿಸಿ ಹೆಚ್ಚು ಬೇಡಿಕೆ ಸಂದರ್ಭದಲ್ಲಿ ಪೂರೈಸಲಾಗುವುದು. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ರಾಜ್ಯ ಮತ್ತು ಕೇಂದ್ರ ವನ್ಯಜೀವಿ ಮಂಡಳಿಗಳಿಂದ ಈಗಾಗಲೇ ಅನುಮತಿ ಸಿಕ್ಕಿದೆ” ಎಂದು ತಿಳಿಸಿದರು.
“ವಿದ್ಯುತ್ ಉತ್ಪಾದನೆಯಲ್ಲಿ ಕೆಪಿಸಿಎಲ್ 2024-25ನೇ ಸಾಲಿನಲ್ಲಿ 37,009 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಪ್ರಸ್ತುತ ರಾಜ್ಯದ ಬೇಡಿಕೆಯ ಶೇ. 40ರಷ್ಟು ವಿದ್ಯುತ್ ಉತ್ಪಾದಿಸುವ ನಿಗಮದ ಉತ್ಪಾದನೆಯನ್ನು ಶೇ. 50ಕ್ಕೆ ಹೆಚ್ಚಿಸಲು ಕ್ರಮ ವಹಿಸಲಾಗುತ್ತಿದೆ” ಎಂದು ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತ ತಿಳಿಸಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್, ಶಾಸಕರಾದ ಬಸವನಗೌಡ ದದ್ದಲ್, ಪ್ರಸಾದ್ ಅಬ್ಬಯ್ಯ, ಇಂಧನ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಹಾಗೂ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತ, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಮನೋಹರ್, ಕೆಪಿಸಿಎಲ್ ಹಣಕಾಸು ನಿರ್ದೇಶಕ ಆರ್.ನಾಗರಾಜ, ತಾಂತ್ರಿಕ ನಿರ್ದೇಶಕ ಎಸ್.ಕೃಷ್ಣಮೂರ್ತಿ, ಮುಖ್ಯ ಜಾಗೃತ ಅಧಿಕಾರಿ ಟಿ.ಪಿ.ಶಿವಕುಮಾರ್ ಮತ್ತಿತರರು ಇದ್ದರು.