ನವದೆಹಲಿ: ಗಿಗ್ ಕಾರ್ಮಿಕರ ಸುರಕ್ಷತೆಯ ದೃಷ್ಟಿಯಿಂದ ’10 ಮಿನಿಟ್ಸ್ ಡೆಲಿವರಿ” ಸೇವೆಯನ್ನು ರದ್ದುಗೊಳಿಸಬೇಕು ಎಂದು ಕ್ವಿಕ್ ಕಾಮರ್ಸ್ ಕಂಪನಿಗಳಿಗೆ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಬ್ಲಿಂಕ್ ಇಟ್ 10 ನಿಮಿಷಗಳ ವಿತರಣೆ ಸೇವೆ’ಯನ್ನು ರದ್ದುಗೊಳಿಸಿದೆ.
ಗ್ರಾಹಕರಿಗೆ 10 ನಿಮಿಷಗಳಲ್ಲಿ ವಿತರಣೆ ಮಾಡಬೇಕು ಎಂಬ ಒತ್ತಡದಲ್ಲಿ ಗಿಗ್ ಕಾರ್ಮಿಕರು ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದು ಎಎಪಿ ಸಂಸದ ರಾಘವ ಛಡ್ಡಾ ಸೇರಿದಂತೆ ಅನೇಕ ಸಂಸದರು ಕೇಂದ್ರ ಸರ್ಕಾರದ ಗಮನ ಸೆಳೆದಿದ್ದರು. ಈ ನಿಟ್ಟಿನಲ್ಲಿ ಸಚಿವರು ಕ್ವಿಕ್ ಕಾಮರ್ಸ್ ಕಂಪನಿಗಳಾದ ಬ್ಲಿಂಕ್ ಇಟ್, ಜೆಕ್ಟ್, ಸ್ಟಿಗ್ಗಿ ಮತ್ತು ಜೊಮಾಟೊ ಜತೆ ಸಭೆ ನಡೆಸಿದ್ದರು. ಸಭೆಯಲ್ಲಿ ಸಚಿವ ಮಾಂಡವಿಯಾ ಅವರು ಹತ್ತು ನಿಮಿಷಗಳಲ್ಲಿ ಡೆಲಿವರಿ ಮಾಡಬೇಕೆಂಬ ಗಡುವು ನೀಡುವುದನ್ನು ನಿಲ್ಲಿಸಿಸುವಂತೆ ಸೂಚನೆ ನೀಡಿದ್ದಾರೆ.
ಬ್ಲಿಂಕ್ ಇಟ್ ಹೆಜ್ಜೆಯನ್ನು ಸ್ವಾಗತಿಸಿರುವ ಸಚಿವರು, ಗಿಗ್ ಕಾರ್ಮಿಕರ ಟಿ-ಶರ್ಟ್, ಜಾಕೆಟ್, ಬ್ಯಾಗ್ ಮೇಲೆ ’10 ಮಿನಿಟ್ಸ್ ಡೆಲಿವರಿʼ ಎಂದು ಮುದ್ರಿಸಿರುವುದು, ಮತ್ತೊಂದು ಕಡೆ ಗ್ರಾಹಕರಿಗೆ ಡೆಲಿವರಿ ಕೊಡಲು ಕಾರ್ಮಿಕರ ಮೇಲೆ ಒತ್ತಡವನ್ನು ಹೇರುತ್ತಿತ್ತು. ಇದರಿಂದ ಅವರು ಪ್ರಾಣವನ್ನೂ ಒತ್ತೆ ಇಟ್ಟು ವಾಹನ ಓಡಿಸಬೇಕಾಗಿತ್ತು ಎಂದು ಹೇಳಿದ್ದಾರೆ.

