ನಿಖಿಲ್‌ ಕುಮಾರಸ್ವಾಮಿ‌ ಹೆಗಲಿಗೆ ಜೆಡಿಎಸ್ ಸಾರಥ್ಯ

Most read

ನವದೆಹಲಿ: ಜೆಡಿಎಸ್ ಸಾರಥ್ಯವನ್ನು ನಿಖಿಲ್ ಕುಮಾರಸ್ವಾಮಿ ಅವರ ಹೆಗಲಿಗೆ ವರ್ಗಾಯಿಸುವ ದಿನಗಳೂ ಹತ್ತಿರವಾಗುತ್ತಿವೆ. ಪಕ್ಷದ ಅಧ್ಯಕ್ಷರನ್ನಾಗಿ ನಿಖಿಲ್‌ ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಸ್ವತಃ ಪಕ್ಷದ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೇ ಸೂಚ್ಯವಾಗಿ ತಿಳಿಸಿದ್ದಾರೆ. ಇನ್ನು ಮುಂದೆ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ನಿಖಿಲ್‌ ಇದುವರೆಗೂ ಪಕ್ಷದ ಯುವ ಘಟಕದ ಅಧ್ಯಕ್ಷರಾಗಿ ಅನುಭವ ಪಡೆದಿದ್ದಾರೆ. ಆದರೂ ಅವರು ಚುನಾವಣಾ ರಾಜಕೀಯದಲ್ಲಿ ಗೆಲುವು ಪಡೆಯಲು ಸಾಧ್ಯವಾಗಿಲ್ಲ. ಹ್ಯಾಟ್ರಿಕ್‌ ಸೋಲಿನ ಸರದಾರ ಎಂಬ ಕುಖ್ಯಾತಿಗೆ ಒಳಗಾಗಿದ್ದಾರೆ. ತಿಂಗಳ ಹಿಂದೆ ನಡೆದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ಎದುರು ಸೋಲು ಕಂಡಿದ್ದರು. ಅದಕ್ಕೂ ಹಿಂದೆ 2023ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಲ್ಲಿ ಸೋತಿದ್ದರು. 2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಚುನಾವನೆಯಲ್ಲಿ ಚಿತ್ರನಟಿ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಎದುರು ಪರಾಭವಗೊಂಡಿದ್ದರು. ಇದೀಗ ಪಕ್ಷದ ಸಾರಥ್ಯವನ್ನು ವಹಿಸಿಕೊಳ್ಳಲು ಮುಂದಾಗಿದ್ದಾರೆ.

More articles

Latest article