ಮಕ್ಕಳ ಕಳ್ಳಸಾಗಾಣೆ; ಕಳವಳ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್‌; ಉ.ಪ್ರ.ಸರ್ಕಾರಕ್ಕೆ ತರಾಟೆ

Most read

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಮಕ್ಕಳ ಕಳ್ಳಸಾಗಾಣೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸಿದರೆ, ಅಂತಹ ಆಸ್ಪತ್ರೆಗಳ ಪರವಾನಗಿಯನ್ನು ನಿರ್ದಾಕ್ಷಿಣ್ಯವಾಗಿ ರದ್ದುಗೊಳಿಸಬೇಕು ಎಂದು ಎಲ್ಲಾ ರಾಜ್ಯಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಮಕ್ಕಳ ಕಳ್ಳಸಾಗಾಣಿಕೆ ಪ್ರಕರಣಗಳ ನಿರ್ವಹಣೆ ಕುರಿತು ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತಗೆದುಕೊಂಡ ಸುಪ್ರೀಂ ಕೋರ್ಟ್, ಅಂತಹ ಅಪರಾಧಗಳನ್ನು ತಡೆಯಲು ರಾಜ್ಯಗಳು ಅನುಸರಿಸಬೇಕಾದ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಪಾಲಿಸುವಂತೆಯೂ ತಾಕೀತು ಮಾಡಿದೆ.

ಮಕ್ಕಳ ಕಳ್ಳಸಾಗಣೆ ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್.ಮಹಾದೇವನ್ ಅವರಿದ್ದ ಪೀಠವು ಅಂತಹ ಪ್ರಕರಣಗಳ ವಿಚಾರಣೆಯನ್ನು ಆರು ತಿಂಗಳ ಒಳಗಾಗಿ ಪೂರ್ಣಗೊಳಿಸುವಂತೆ ಕೆಳ ನ್ಯಾಯಾಲಯಗಳಿಗೆ ಆದೇಶಿಸಿದೆ. ಯಾವುದೇ ನವಜಾತ ಶಿಶುವನ್ನು ಕಳ್ಳಸಾಗಣೆ ಮಾಡಿದರೆ ಆಸ್ಪತ್ರೆಗಳ ಪರವಾನಗಿಯನ್ನು ಮುಲಾಜಿಲ್ಲದೆ ಅಮಾನತುಪಡಿಸುವಂತೆಯೂ ಎಲ್ಲಾ ರಾಜ್ಯಗಳಿಗೆ ಆದೇಶ ಮಾಡಿದೆ.

ಆಸ್ಪತ್ರೆಯಿಂದ ನವಜಾತ ಶಿಶುವನ್ನು ಕಳ್ಳಸಾಗಣೆ ಮಾಡಿದರೆ ಮೊದಲ ಹಂತವಾಗಿ ಅಂತಹ ಆಸ್ಪತ್ರೆಗಳ ಪರವಾನಿಗೆಯನ್ನು ಅಮಾನತುಗೊಳಿಸಬೇಕು. ಇದನ್ನು ಹಗುರವಾಗಿ ಪರಿಗಣಿಸಿದರೆ, ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುವುದು ಎಂದೂ ಎಚ್ಚರಿಕೆಯನ್ನು ನೀಡಿದೆ.

ಮಕ್ಕಳ ಕಳ್ಳಸಾಗಣೆ ಪ್ರಕರಣಗಳಲ್ಲಿ ಬಾಕಿ ಉಳಿದಿರುವ ವಿಚಾರಣೆ ನಡೆಸಲು ಹೈಕೋರ್ಟ್  ಗಳಿಗೆ ನಿರ್ದೇಶಿಸಲಾಗಿದೆ.

ಉತ್ತರಪ್ರದೇಶದಲ್ಲಿ ಗಂಡು ಮಗು ಬೇಕೆಂದು ದಂಪತಿಗೆ ಕಳ್ಳಸಾಗಣೆ ಮಾಡಲಾದ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ಆರೋಪಿಗಳಿಗೆ ಅಲಹಾಬಾದ್ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಆರೋಪಿಗಳ ಜಾಮೀನು ರದ್ದುಗೊಳಿಸುವಾಗ, ಅಲಹಾಬಾದ್ ಹೈಕೋರ್ಟ್ ಮತ್ತು ಉತ್ತರಪ್ರದೇಶ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.

4 ಲಕ್ಷ ರೂ. ನೀಡಿ ಮಗನನ್ನು ಬಯಸಲು ಸಾಧ್ಯವೇ? ನೀವು ಕಳ್ಳಸಾಗಣೆ ಮಾಡಿದ ಮಗುವಿಗೆ ನೈಜ ತಂದೆ ತಾಯಿ ಆಗಲು ಸಾಧ್ಯವೇ? ಮಗುವನ್ನು ಕದ್ದಿದ್ದೇವೆ ಎಂಬ ಪಾಪ ಪ್ರಜ್ಞೆ ನಿಮಗೆ ಕಾಡುವುದಿಲ್ಲವೇ ? ಎಂದು ಸುಪ್ರೀಂ ಕೋರ್ಟ್‍ ಖಾರವಾಗಿ ಪ್ರಶ್ನಿಸಿದ್ದು, ಹೈಕೋರ್ಟ್ ಜಾಮೀನು ಅರ್ಜಿಗಳನ್ನು ವಿಚಾರಣೆ ನಡೆಸುವಾಗ ಕಠಿಣವಾಗಿ ವರ್ತಿಸಬೇಕಿತ್ತು ಎಂದು ಹೇಳಿದೆ.

ಇಂತಹ ಪ್ರಕರಣಗಳಲ್ಲಿ ಅನೇಕ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳು ಸಮಾಜಕ್ಕೆ ಗಂಭೀರ ಬೆದರಿಕೆ ಹಾಕುತ್ತಿದ್ದಾರೆ. ಜಾಮೀನು ನೀಡುವಾಗ ಹೈಕೋರ್ಟ್‌ ನಿಂದ ಕನಿಷ್ಠ ಷರತ್ತುಗಳನ್ನು ವಿಧಿಸಿಲ್ಲ, ಪ್ರತಿ ವಾರ ಪೊಲೀಸ್ ಠಾಣೆಗೆ ಹಾಜರಾಗಬೇಕು ಎಂಬ ನಿಯಮವನ್ನು ಪಾಲನೆ ಮಾಡಿಲ್ಲ.  ಪೊಲೀಸರು ಆರೋಪಿಗಳ ಚಲನವಲನದ ಮೇಲೆ ನಿಗಾವಹಿಸಿಲ್ಲ ಎಂದು ನ್ಯಾಯಾಲಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಮಕ್ಕಳ ಕಳ್ಳಸಾಗಾಣಿಕೆಯನ್ನು ನಿಭಾಯಿಸುವ ಕುರಿತು ತೀರ್ಪಿನಲ್ಲಿ ವಿವರವಾದ ಶಿಫಾರಸುಗಳಿವೆ ಮತ್ತು ಅವುಗಳನ್ನು ಶೀಘ್ರವಾಗಿ ಜಾರಿಗೆ ತರಲು ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ ಎಂದು ನ್ಯಾಯಮೂರ್ತಿ ಪರ್ದಿವಾಲಾ ಹೇಳಿದರು.

ಭಾರತದಲ್ಲಿ ಪ್ರತಿ ವರ್ಷ ಸುಮಾರು 2,000 ಮಕ್ಕಳ ಕಳ್ಳಸಾಗಣೆ ಪ್ರಕರಣಗಳು ವರದಿಯಾಗುತ್ತವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿಯ ಪ್ರಕಾರ, 2022 ರಲ್ಲಿ ಇಂತಹ 2250 ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ ಹೆಚ್ಚಿನ ಪ್ರಕರಣಗಳು ತೆಲಂಗಾಣ, ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ವರದಿಯಾಗಿವೆ.

More articles

Latest article