ಬೆಂಗಳೂರು: ನಾಡಿನ ಸಮಸ್ತ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಹೊಸ ವರ್ಷದ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.
ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ‘ಪ್ರೀತಿಯ ನಾಡಬಾಂಧವರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಹೊಸ ವರ್ಷವನ್ನು ಹೊಸ ಚಿಂತನೆ, ಹೊಸ ಭರವಸೆ ಹಾಗೂ ಹೊಸ ಉತ್ಸಾಹದೊಂದಿಗೆ ಬರಮಾಡಿಕೊಳ್ಳೋಣ’ ಎಂದು ಶುಭಾಶಯ ಕೋರಿದ್ದಾರೆ. ಜಾತಿ, ಧರ್ಮಗಳ ದ್ವೇಷ ತೊರೆದು ಎಲ್ಲರೂ ಒಂದಾಗಿ ಪ್ರೀತಿ-ಸಹಬಾಳ್ವೆಯ ಹಾದಿಯಲ್ಲಿ ಹೆಜ್ಜೆಹಾಕೋಣ. 2025ರ ನವ ವಸಂತ ತಮ್ಮೆಲ್ಲರ ಬಾಳಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ತರಲಿ’ ಎಂದು ಹಾರೈಸಿದ್ದಾರೆ. ಹೊಸ ವರ್ಷವು ಸಮೃದ್ಧಿಯನ್ನು ತರಲಿ, ಹೊಸ ಅವಕಾಶ ಸಾಧನೆಯೊಂದಿಗೆ ಗುರುತಿಸ್ಪಡಲಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶುಭ ಹಾರೈಸಿದ್ದಾರೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು 2025ನೇ ವರ್ಷ ಶುಭ ತರಲಿ, ಎಲ್ಲರ ಮನ ಮನೆಗಳಲ್ಲಿ ಸುಖ ಶಾಂತಿ, ನೆಮ್ಮದಿ ಸಮೃದ್ಧಿ ನೆಲೆಸಲಿ ಎಂದು ಹೇಳಿದ್ದಾರೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಈ ಹೊಸ ವರ್ಷ ಎಲ್ಲರ ಬಾಳಿನಲ್ಲಿ ಸುಖ, ಸಂತೋಷ, ಸಮೃದ್ಧಿ, ನೆಮ್ಮದಿ ಮತ್ತು ಯಶಸ್ಸನ್ನು ತರಲಿ ಎಂದು ಹಾರೈಸಿದ್ದಾರೆ. ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವರ್ಷಪೂರ್ತಿ ಕರುನಾಡ ತುಂಬೆಲ್ಲಾ ಹರುಷ ಪಸರಿಸಲಿ, ಅತಿವೃಷ್ಟಿ-ಅನಾವೃಷ್ಟಿಗಳು ರಾಜ್ಯವನ್ನು ಬಾಧಿಸದಿರಲಿ, ಯುವ ಜನರ ಬದುಕಿನಂಗಳದಲ್ಲಿ ಹೊಸ ಬೆಳಕು ಚೆಲ್ಲಲಿ, ಭರವಸೆಗಳು ಹೊಮ್ಮಲಿ ರೈತರು, ಕೃಷಿ ಕಾರ್ಮಿಕರು, ಶ್ರಮಿಕ ವರ್ಗದ ಜನರ ಬದುಕಿನಲ್ಲಿ ಹೊಸ ಚೈತನ್ಯ ಮೂಡಲಿ ಎಂದು ಶುಭ ಹಾರೈಸಿದ್ದಾರೆ.