ಹೊಷ ವರ್ಷಾಚರಣೆ; ಕಟ್ಟಚ್ಚೆರ ವಹಿಸಲು ಪೊಲೀಸ್‌ ಆಯುಕ್ತರ ಖಡಕ್​​ ಸೂಚನೆ‌

Most read

ಬೆಂಗಳೂರು: ಹೊಸ ವರ್ಷಾಚರಣೆ ಹತ್ತಿರವಾಗಿತ್ತಿರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಬೆಂಗಳೂರು ಪೊಲೀಸ್ ಆಯುಕ್ತ​ ಬಿ ದಯಾನಂದ್ ಅವರು ಪೊಲೀಸ್ ಅಧಿಕಾರಿಗಳಿಗೆ ಖಡಕ್​​ ಸೂಚನೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿದ್ದು, ಹೊಸ ವರ್ಷದ ಸಂದರ್ಭದಲ್ಲಿ ಶಾಂತಿಭಂಗವನ್ನುಂಟು ಮಾಡುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಕ್ರಮಿನಲ್‌ ಹಿನ್ನಲೆ ಹೊಂದಿರುವವರ ಮೇಲೆ ನಿಗಾವಹಿಸಿ, ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕೆಂದು ಸೂಚಿಸಿದ್ದಾರೆ.

ಹೊಸ ವರ್ಷಾಚರಣೆಯನ್ನು ವಿರೋಧಿಸುವ ಸಂಘ ಸಂಸ್ಥೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಮುನ್ನೆಚ್ಚರಿಕೆ ವಹಿಸಬೇಕು. ಮಾಲ್​ಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಸುಸ್ಥಿತಿಯಲ್ಲಿ ಇಡುವಂತೆ ಮಾಲ್​ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಹೇಳಿದ್ದಾರೆ. ಎಲ್ಲ ಅಧಿಕಾರಿಗಳು ಸರ್ವೀಸ್ ರಿವಾಲ್ವಾರ್ ಹೊಂದಿರಬೇಕು. ಪೊಲೀಸ್​​ ಸಿಬ್ಬಂದಿ ಹೆಲ್ಮೆಟ್, ಲಾಠಿಗಳನ್ನು ಕಡ್ಡಾಯವಾಗಿ ಕೊಂಡೊಯ್ಯಬೇಕು. ಹೆಣ್ಣು ಮಕ್ಕಳನ್ನು ಚುಡಾಯಿಸುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಮತ್ತು  ರಸ್ತೆ ಮೇಲೆ ಬಾಟಲಿ ಹೊಡೆದು ದಾಂಧಲೆ ಉಂಟುಮಾಡುವವರನ್ನು ವಶಕ್ಕೆ ಪಡೆದು ಕ್ರಮಕೈಗೊಳ್ಳಬೆಕು ಎಂದೂ ಆದೇಶ ನೀಡಿದ್ದಾರೆ.

ಮದ್ಯ ಮಾರಾಟ ಮಾಡುವ ಸ್ಥಳಗಳಲ್ಲಿ ಗಲಾಟೆ, ದೊಂಬಿ, ಮಹಿಳೆಯರನ್ನು ಚುಡಾಯಿಸುವಂತಹ ಘಟನೆಗಳು ಸಂಭವಿಸಿದರೆ ಮಾಲೀಕರೇ ಹೊಣೆಗಾರರಾಗುತ್ತಾರೆ. ಜನ ಸೇರುವ ರಸ್ತೆ ಮತ್ತು ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸಿ ರಸ್ತೆಗಳಲ್ಲಿ ವಿದ್ಯುತ್ ದೀಪಗಳು ಉರಿಯುತ್ತಿರುವಂತೆ ಎಚ್ಚರ ವಹಿಸಬೇಕು. ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಎಂ.ಜಿ.ರಸ್ತೆಗಳಲ್ಲಿ ಅಪಾರ ಪ್ರಮಾಣದ ಜ ಸೇರಲಿದ್ದು ಹದ್ದಿನ ಕಣ್ಣಿಡಬೇಕು ಎಂದು ತಿಳಿಸಿದ್ದಾರೆ.

ರೌಡಿಗಳ ಮೇಲೆ ನಿಗಾ ಇಡಬೇಕು. ವರ್ಷಾಂತ್ಯ ದಿನ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ ಮತ್ತು ಮೇಲ್ಸೇತುವೆಗಳ ಮೇಲೆ ವಾಹನ ಸಂಚಾರ ನಿಷೇಧಿಸಬೇಕು. ಪೊಲೀಸ್ ಠಾಣೆಗಳ ಹೊಯ್ಸಳ ಮತ್ತು ಚೀತಾ ವಾಹನಗಳು ಸದಾ ಗಸ್ತು ತಿರುಗುತ್ತಿರಬೇಕು ಎಂದೂ ಆಯುಕ್ತರು  ಸೂಚನೆ ನೀಡಿದ್ದಾರೆ.

More articles

Latest article