ಪಾಟ್ನಾ: ಹಿಜಾಬ್ ಮತ್ತು ನಿಖಾಬ್ ಧರಿಸಿದವರೂ ಸೇರಿದಂತೆ ಮುಖ ಮುಚ್ಚಿಕೊಂಡು ಆಗಮಿಸುವ ಗ್ರಾಹಕರಿಗೆ ಪ್ರವೇಶ ನೀಡದಿರಲು ಬಿಹಾರದ ಆಭರಣ ಮಳಿಗೆಗಳ ಮಾಲೀಕರ ಸಂಘ ನಿರ್ಧರಿಸಿರುವುದು ಹೊಸ ವಿವಾದವನ್ನು ಹುಟ್ಟು ಹಾಕಿದೆ.
ಆಭರಣ ಮಳಿಗೆಗಳಲ್ಲಿ ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ಕ್ರಮವನ್ನು ಅನುಸರಿಸಲು ತೀರ್ಮಾನಿಸಲಾಗಿದೆ ಎಂದು ಅಂಗಡಿ ಮಾಲೀಕರು ಪ್ರತಿಪಾದಿಸುತ್ತಿದ್ದರೂ ರಾಜ್ಯದ ಪ್ರಮುಖ ಪ್ರತಿಪಕ್ಷ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಈ ಕ್ರಮವನ್ನು ಬಲವಾಗಿ ವಿರೋಧಿಸಿದೆ. ಈ ಕ್ರಮ ಸಂವಿಧಾನಬಾಹಿರ ಮತ್ತು ನಿರ್ದಿಷ್ಟ ಸಮುದಾಯದ ಧಾರ್ಮಿಕ ಭಾವನೆಗಳ ಮೇಲಿನ ದಾಳಿಯಾಗಿದೆ ಎಂದು ಟೀಕಿಸಿದೆ.
ಆರ್ ಜೆಡಿ ವಕ್ತಾರ ಎಜಾಜ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದು, ಇದೇ ಮೊದಲ ಬಾರಿಗೆ ಬಿಹಾರದಲ್ಲಿ ಇಂತಹ ಕ್ರಮ ಜಾರಿಗೆ ತರಲಾಗುತ್ತಿದೆ. ಈ ಕ್ರಮವು ಕೆಲವು ಧರ್ಮೀಯರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಮತ್ತು ಸಂವಿಧಾನದ ಅಡಿಯಲ್ಲಿ ನೀಡಲಾದ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಮೊಟಕುಗೊಳಿಸುವ ಪ್ರಯತ್ನವಾಗಿದೆ ಎಂದು ಆಪಾದಿಸಿದ್ದಾರೆ. ಇಂತಹ ತೀರ್ಮಾನಕ್ಕೆ ಬರಲು ಬಿಜೆಪಿ ಮತ್ತು ಆರ್‌ಎಸ್‌ಎಸ್ ಕುಮ್ಮಕ್ಕು ನೀಡಿದೆ ಎಂದೂ ಆಪಾದಿಸಿದ್ದಾರೆ.
ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಆಭರಣ ಮಳಿಗೆಗಳ ಮಾಲೀಕರ ಜತೆ ಚರ್ಚಿಸಿ ಈ ಕ್ರಮವನ್ನು ಹಿಂತೆಗೆದುಕೊಳ್ಳಲು ಸೂಚಿಸಬೇಕು. ಮೇಲಾಗಿ ಅಪರಾಧಗಳನ್ನು ತಡೆಯಲು ಸಾಕಷ್ಟು ಕ್ರಮಗಳಿವೆ ಎಂದು ಅವರು ಹೇಳಿದ್ದಾರೆ.
ಅಖಿಲ ಭಾರತ ಆಭರಣ ವ್ಯಾಪಾರಿಗಳು ಮತ್ತು ಚಿನ್ನದ ಒಕ್ಕೂಟ(ಎಐಜಿಜೆಎಫ್) ಹಿಜಾಬ್, ಬುರ್ಖಾ, ಸ್ಕಾರ್ಫ್, ಹೆಲ್ಮೆಟ್ ಅಥವಾ ಯಾವುದೇ ರೀತಿಯ ಬಟ್ಟೆ ಅಥವಾ ವಸ್ತುಗಳಿಂದ ಮುಖ ಮುಚ್ಚಿಕೊಂಡಿರುವ ಗ್ರಾಹಕರನ್ನು ಚಿನ್ನಾಭರಣ ಶೋ ರೂಂಗಳ ಪ್ರವೇಶಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಪ್ರಕಟಣೆ ನೀಡಿದೆ.
ಹೊಸ ನಿಯಮದ ಅಡಿಯಲ್ಲಿ, ಸೂಕ್ತ ಮುಖ ಗುರುತಿಸುವಿಕೆಯ ನಂತರವೇ ಗ್ರಾಹಕರಿಗೆ ಪ್ರವೇಶ ನೀಡಲಾಗುತ್ತದೆ. ಇಂತಹ ನಿರ್ಧಾರವನ್ನು ಜಾರಿಗೆ ತಂದ ಮೊದಲ ರಾಜ್ಯ ಬಿಹಾರವಾಗಿದೆ ಎಂದು AIGJF ತಿಳಿಸಿದೆ.
AIGJFನ ಬಿಹಾರ ಅಧ್ಯಕ್ಷ ಅಶೋಕ್ ಕುಮಾರ್ ವರ್ಮಾ ಮಾತನಾಡಿ, ಆಭರಣ ಮಳಿಗೆಗಳಲ್ಲಿ ಕಳ್ಳತನ, ದರೋಡೆ ಮತ್ತು ಡಕಾಯಿತಿಯಂತಹ ಅಪರಾಧಗಳನ್ನು ನಿಯಂತ್ರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಖ ಮುಚ್ಚಿಕೊಂಡು ಚಿನ್ನಾಭರಣ ಮಳಿಗೆಗಳಿಗೆ ನುಗ್ಗಿ ದರೋಡೆ ಮಾಡಿರುವ ಹಲವಾರು ನಿದರ್ಶನಗಳು ನಮ್ಮಲ್ಲಿವೆ ಎಂದು ವರ್ಮಾ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

