ಸಹದ್ಯೋಗಿಗಳಿಗೆ ಪತ್ರ ಬರೆದ ನೂತನ ಪೊಲೀಸ್‌ ಮಹಾ ನಿರ್ದೇಶಕ ಎಂಎ.ಸಲೀಂ; ಶಾಂತಿ, ಸೌಹಾರ್ದತೆ ಕಾಪಾಡಲು ಕರೆ

Most read

ಬೆಂಗಳೂರು: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಸೌಹಾರ್ದತೆ ಕಾಪಾಡಲು ಪೊಲೀಸ್‌‍ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದಕ್ಷತೆಯಿಂದ ಕೆಲಸ ಮಾಡಬೇಕು ಮತ್ತು ಅಪರಾಧಿ ಕೇಂದ್ರಿತ ವ್ಯವಸ್ಥೆಯನ್ನು ಸಂತ್ರಸ್ತ ಕೇಂದ್ರಿತ ವ್ಯವಸ್ಥೆಯನ್ನಾಗಿ ಪರಿವರ್ತಿಸಬೇಕು ಎಂದು ನೂತನ ಪೊಲೀಸ್‌‍ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಹೇಳಿದ್ದಾರೆ.

ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ ಪೊಲೀಸ್‌ ಅಧಿಕಾರಿಗಳಿಗೆ ಪತ್ರ ಬರೆದಿರುವ ಅವರು, ಕಿರಿಯ ಪೊಲೀಸ್‌‍ ಅಧಿಕಾರಿ ಸಿಬ್ಬಂದಿಯಿಂದ ಹಿಡಿದು ಹಿರಿಯ ಪೊಲೀಸ್‌‍ ಅಧಿಕಾರಿಗಳವರೆಗಿನ ಎಲ್ಲಾ ಸಹದ್ಯೋಗಿಗಳಿಂದಲೂ ಸದಾಕಾಲ ನಿರಂತರ ಬೆಂಬಲ ಅಪೇಕ್ಷಿಸುವುದಾಗಿ ತಿಳಿಸಿದ್ದಾರೆ.

ನಾಡಿನಲ್ಲಿ ಶಾಂತಿ, ಸೌಹಾರ್ದತೆ, ಸುರಕ್ಷತೆಯ ವಾತಾವರಣ ನಿರ್ಮಿಸಲು ಇಲಾಖೆಯನ್ನು ಸಮಾಜಸ್ನೇಹಿಯಾಗಿ ಬದಲಾಯಿಸಲು ಎಲ್ಲರೂ ಸಹಮತದಿಂದ ಕಾರ್ಯನಿರ್ವಹಿಸಬೇಕು. ಕಾನೂನು ಸುವ್ಯವಸ್ಥೆ ಮತ್ತು ಸೌಹಾರ್ದತೆ ಪಾಲನೆಗೆ ಆದ್ಯತೆ ನೀಡಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲದಂತೆ ಪರಿಣಾಮಕಾರಿ ಹಾಗೂ ಸಮಯೋಚಿತ ಕ್ರಮಗಳನ್ನು ಕೈಗೊಳ್ಳಬೇಕು. ಕಾನೂನು ಸುವ್ಯವಸ್ಥೆ ಸೌಹಾರ್ದತೆಗೆ ಅಪಾಯ ಒಡ್ಡುವ ವ್ಯಕ್ತಿಗಳು ಹಾಗೂ ಶಕ್ತಿಗಳ ವಿರುದ್ಧ ಅವಶ್ಯಕ ಮುನ್ನೆಚ್ಚರಿಕೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಅಪರಾಧಗಳನ್ನು ವ್ಯವಸ್ಥಿತವಾಗಿ ತಡೆಯುವ ಕ್ರಮಗಳನ್ನು ಕೈಗೊಳ್ಳುವುದು ಅಪರಾಧಗಳ ನಿಖರ ತನಿಖೆ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು. ನೊಂದವರಿಗೂ ನ್ಯಾಯ ದೊರಕಿಸಬೇಕು. ಈವರೆಗೂ ಅಪರಾಧಗಳ ತನಿಖೆಯಲ್ಲಿ ಅಪರಾಧಿ ಕೇಂದ್ರಿತ ವ್ಯವಸ್ಥೆ ಅನುಸರಿಸಲಾಗುತ್ತಿದೆ. ಇನ್ನು ಮುಂದೆ ಸಂತ್ರಸ್ತ ಕೇಂದ್ರಿತ ಪಥವನ್ನಾಗಿ ಬದಲಿಸಿಕೊಂಡು ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಅರ್ಹ ಸವಲತ್ತುಗಳನ್ನು ಕೊಡಿಸುವ ಮೂಲಕ ಪುನಶ್ಚೇತನಗೊಳಿಸಬೇಕು. ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.

ಪೊಲೀಸ್‌‍ ಅಧಿಕಾರಿಗಳು ಪ್ರಾಮಾಣಿಕತೆಯಲ್ಲಿ ಯಾವತ್ತಿಗೂ ರಾಜಿಯಾಗಬಾರದು. ಪಾರದರ್ಶಕತೆಗೆ ಒತ್ತು ನೀಡಬೇಕು. ಸಾರ್ವಜನಿಕರಲ್ಲಿ ವಿಶ್ವಾಸಾರ್ಹತೆಯನ್ನು ಮೂಡಿಸಿ ದುರ್ಬಲ ವರ್ಗ, ಆರ್ಥಿಕವಾಗಿ ಹಿಂದುಳಿದವರಿಗೆ ನ್ಯಾಯ ಕೊಡಿಸಲು ಪ್ರಯತ್ನಿಸುವುದರಿಂದ ನಮ್ಮ ನೈತಿಕತೆ ಹಾಗೂ ಆತ್ಮತೃಪ್ತಿಯನ್ನು ಇಮ್ಮಡಿಗೊಳಿಸುತ್ತವೆ ಎಂದು ತಿಳಿಸಿದ್ದಾರೆ.

ಉತ್ತಮ ಮಾನವ ಸಂಪನೂಲ ಪೊಲೀಸ್‌‍ ಇಲಾಖೆಯ ಆಸ್ತಿ. ಸಹದ್ಯೋಗಿಗಳು ಸದೃಢವಾಗಿರಲು ನಿಯಮಿತ ವ್ಯಾಯಾಮ, ಕೆಲಸದ ಒತ್ತಡ ನಿವಾರಣೆ, ದೀರ್ಘಕಾಲದ ಕರ್ತವ್ಯಗಳ ವಿಭಜನೆ, ಉತ್ತಮ ಕರ್ತವ್ಯದ ವಾತಾವರಣ, ನೈತಿಕ ಉತ್ಸಾಹ ಹೆಚ್ಚಿಸುವ ಕ್ರಮಗಳು, ವಿನಾಕಾರಣ ರಜೆ ನಿರಾಕರಣೆ ಮಾಡದಿರುವುದು, ಉತ್ತಮ ಸೇವೆ ಗುರುತಿಸಿ ಪುರಸ್ಕರಿಸುವಂತಹ ಕ್ರಮಗಳನ್ನು ಹಾಗೂ ಕುಟುಂಬದ ಕ್ಷೇಮಾಭಿವೃದ್ಧಿಗೆ ಒತ್ತು ನೀಡುವ ಆಚರಣೆಗಳನ್ನು ಪಾಲಿಸಬೇಕು ಎಂದಿದ್ದಾರೆ.

ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಆದ್ಯತೆ ನೀಡಬೇಕು. ಚಾಲ್ತಿಯಲ್ಲಿರುವ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ಸುರಕ್ಷಿತ ವಾತಾವರಣ ನಿರ್ಮಿಸಬೇಕು. ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದಿದ್ದಾರೆ.

ಮಾದಕ ವಸ್ತುಗಳ ಉತ್ಪಾದನೆ, ಸಾಗಾಣೆ ಮತ್ತು ಮಾರಾಟದ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಜೂಜು, ಮಟ್ಕಾ, ವೇಶ್ಯಾವಾಟಿಕೆಯಂತಹ ಅನೈತಿಕ ಚಟುವಟಿಕೆಗಳು ನಡೆಯದಂತೆ ಹದ್ದಿನ ಕಣ್ಣಿಡಬೇಕು. ರೌಡಿಸಂ, ಸಮಾಜಘಾತಕ ಶಕ್ತಿಗಳು ಹಾಗೂ ಇತರೆ ಸಂಘಟಿತ ಅಪರಾಧಗಳನ್ನು ತಡೆಯಲು ಪರಿಣಾಮಕಾರಿ ಕಾನೂನು ಬಳಕೆ ಮಾಡಬೇಕು. ಭೌತಿಕ ಅಪರಾಧಗಳನ್ನು ಹಿಮೆಟ್ಟಿಸಿ ಸೈಬರ್‌ ಅಪರಾಧಗಳನ್ನು ಸಮರ್ಥವಾಗಿ ತಡೆದು ವಂಚಿತರಿಗೆ ಶೀಘ್ರವಾಗಿ ಹಣ ತಲುಪಿಸಲು ಕ್ರಮ ಕೈಗೊಳ್ಳಬೇಕು. ಸಂಚಾರ ನಿರ್ವಹಣೆ ಸುಧಾರಿಸಬೇಕು. ರಸ್ತೆ ಅಪರಾಧಗಳ ಪರಿಣಾಮಕಾರಿ ನಿಯಂತ್ರಣದ ಮೂಲಕ ಅಮಾಯಕರ ಜೀವ ರಕ್ಷಣೆ ಮಾಡಬೇಕು ಎಂದು ಡಾ.ಎಂ.ಎ.ಸಲೀಂ ಕರೆ ನೀಡಿದ್ದಾರೆ.

More articles

Latest article