ಲಕ್ನೋ: ಮೂರನೇ ಬಾರಿ ಮಥುರಾದಿಂದ ಲೋಕಸಭೆಗೆ ಆಯ್ಕೆ ಬಯಸಿರುವ ಹೇಮಾಮಾಲಿನಿ ಪ್ರತಿ ಚುನಾವಣೆ ಬಂದಾಗಲೂ ಒಂದಲ್ಲ ಒಂದು ಗಿಮಿಕ್ ಮಾಡಿ ಟ್ರಾಲ್ ಆಗುತ್ತಿರುತ್ತಾರೆ. ಈ ಬಾರಿಯೂ ಅವರು ಗೋಧಿ ಕೊಯ್ಲಿನ ಫೊಟೋ ಶೂಟ್ ಒಂದನ್ನು ಮಾಡಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಟ್ರಾಲ್ ಆಗಿದ್ದಾರೆ.
ಹತ್ತು ವರ್ಷಗಳಿಂದ ನಾನು ರೈತರ ಬಳಿ ಹೋಗಿ ಅವರ ಕಷ್ಟ ಸುಖ ಕೇಳುತ್ತೇನೆ. ಈಗಲೂ ಅವರ ಬಳಿ ಹೋಗಿ ಬಂದೆ ಎಂದು ಹೇಮಾಮಾಲಿನಿ ಭತ್ತ ಕೊಯ್ಲಿನ ಹಲವು ಫೊಟೋಗಳನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ಇದಕ್ಕೆ ನೆಟಿಜನ್ ಗಳು ಕಮೆಂಟ್ ಮಾಡಿದ್ದು, ಎಲೆಕ್ಷನ್ ಸಮಯದಲ್ಲಿ ಪ್ರತಿ ಬಾರಿ ಈ ರೀತಿಯ ಗಿಮಿಕ್ ಬೇಕಾ ಎಂದು ಪ್ರಶ್ನಿಸಿದ್ದಾರೆ.
ಏಪ್ರಿಲ್ ಮಧ್ಯ ಭಾಗದಲ್ಲಿ ಕಾಂಜೀವರಂ ಸೀರೆ, ಕಟ್ಟಿಕೊಳ್ಳದ ಕೂದಲು ಹೇಗೆ ಸಾಧ್ಯ ಎಂದು ಅನು ಎಂಬುವವರು ಪ್ರಶ್ನಿಸಿದ್ದಾರೆ.
ಮೈ ಭೀ ಚೌಕೀದಾರ್ ಎಂಬ ಹ್ಯಾಂಡಲ್ ಹೊಂದಿರುವವರು ನೀವು ಹೆಲಿಕಾಪ್ಟರ್ ಬಳಸದೇ ಅಲ್ಲಿಗೆ ಹೋಗಿದ್ದಿದೆಯೇ? ಸ್ವಲ್ಪನಾದ್ರೂ ನಾಚಿಕೆ ಇಟ್ಟುಕೊಳ್ಳಿ. ಚುನಾವಣೆಯಲ್ಲಿ ಸ್ಪರ್ಧಿಸುವ ಯೋಗ್ಯತೆಯೇ ನಿಮಗಿಲ್ಲ, ಸಾಧ್ಯವಾದರೆ ಬಿಜೆಪಿ ಬಿಟ್ಟು ಸ್ಪರ್ಧೆ ಮಾಡಿ ನೋಡಿ ಎಂದಿದ್ದಾರೆ.
ರೈತರ ಆದಾಯ ಕುಸಿಯುತ್ತಿದೆ, ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ, ಅವರ ಬೆಳೆಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಆದರೆ ನಮ್ಮ ಎಂಪಿಗಳು ಫೋಟೋ ಶೂಟ್ ಮಾಡಿಸಿಕೊಂಡು ಈ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾರೆ ಎಂದು ಓಪನ್ ಲೆಟರ್ ಎಂಬ ಹ್ಯಾಂಡಲ್ ನಿಂದ ಟೀಕೆ ಮಾಡಲಾಗಿದೆ.
ಸಂಸದರಾಗಿ ನೀವು ಫೊಟೋಶೂಟ್ ಮಾಡಿಸಿಕೊಳ್ಳುವುದೇ ಕರ್ತವ್ಯ ಎಂದುಕೊಂಡಿದ್ದೀರಾ? ರೈತರನ್ನು ಅಪಮಾನಿಸಬೇಡಿ ಎಂದು ಪ್ರಿಯಂವದಾ ಎಂಬುವವರು ಪೋಸ್ಟ್ ಮಾಡಿದ್ದಾರೆ.