ನೆಲಮಂಗಲದಲ್ಲಿ ರೇಣುಕಾಸ್ವಾಮಿ ಹಲ್ಲೆ ಪ್ರಕರಣದ ಮಾದರಿ: ಮಾಜಿ ಪ್ರೇಯಸಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ವಿವಸ್ತ್ರಗೊಳಿಸಿ ಹಲ್ಲೆ

Most read

ನೆಲಮಂಗಲ:ಚಿತ್ರನಟ ದರ್ಶನ್‌ ಮತ್ತು ಅವರ ತಂಡ ಚಿತ್ರದುರ್ಗದ ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿದ ಮಾದರಿಯಲ್ಲಿ ಯುವಕನೊಬ್ಬನನ್ನು ಬೆತ್ತಲೆಗೊಳಿಸಿ ಚಿತ್ರಹಿಂಸೆ ನೀಡಿರುವ ಪ್ರಕರಣ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ನಡೆದಿದೆ.

ತನ್ನ ಪ್ರೇಯಸಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂಬ ಕಾರಣಕ್ಕೆ ಯುವಕನನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ವಿಡಿಯೊ ಮಾಡಲಾಗಿದೆ. ಕುಶಾಲ್‌ ಹಲ್ಲೆಗೊಳಗಾದ ಯುವಕ. ಈ ಪ್ರಕರಣ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ.

ಕುಶಾಲ್‌ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಕಾರಣಾಂತರಗಳಿಂದ ಇಬ್ಬರ ನಡುವೆ ಬ್ರೇಕ್‌ ಅಪ್‌ ಆಗಿತ್ತು. ನಂತರ ಆ ಯುವತಿ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ತಿಳಿದ ಕುಶಾಲ್‌ ಆಕೆಗೆ ಮೊಬೈಲ್‌ ಮೂಲಕ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ. ಈ ಸಂದೇಶವನ್ನು ಯುವತಿ ಪ್ರಿಯಕರನಿಗೆ ತೋರಿಸಿದ್ದಾಳೆ. ಇದರಿಂದ ಕುಪಿತಗೊಂಡ ಆತ ತನ್ನ ಸ್ನೇಹಿತರೊಂದಿಗೆ ಕುಶಾಲ್‌ ನನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಥಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಶಾಲ್‌ ನನ್ನು ವಿವಸ್ತ್ರಗೊಳಿಸಿ ಮರ್ಮಾಂಗಕ್ಕೆ ತುಳಿದು ಚಿತ್ರಹಿಂಸೆ ನೀಡುತ್ತಿರುವ ದೃಶ್ಯವನ್ನು ಮೊಬೈಲ್‌ ನಲ್ಲಿ ದಾಖಲಾಗಿದೆ. ಅವರಲ್ಲಿ ಒಬ್ಬ ರೇಣುಕಾಸ್ವಾಮಿ ಕೊಲೆ ಪ್ರಕರಣದಂತೆ ಇದು ಆಗುತ್ತದೆ ಎಂದು ಹೇಳಿರುವುದು ರೆಕಾರ್ಡ್‌ ಆಗಿದೆ. ರೇಣುಕಾಸ್ವಾಮಿ ತನ್ನ ಪ್ರಿಯತಮೆಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂದು ದರ್ಶನ್‌ ತೂಗುದೀಪ ತನ್ನ ಗ್ಯಾಂಗ್‌ ಜತೆ ಸೇರಿ ಆತನಿಗೆ ಚಿತ್ರಹಿಂಸೆ ನೀಡಿದ್ದ. ಈ ಪ್ರಕರಣ ರೇಣುಕಾಸ್ವಾಮಿ ಕೊಲೆಯಲ್ಲಿ ಅಂತ್ಯವಾಗಿತ್ತು.

ಅದೇ ಮಾದರಿಯಲ್ಲಿ ಈ ಯುವಕರೂ ದರ್ಶನ್‌ ನನ್ನು ಅನುಕರಿಸಿ ಇದೀಗ ಜೈಲುಪಾಲಾಗಿದ್ದಾರೆ.

More articles

Latest article