ಶಿವಮೊಗ್ಗ: ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಹಿರಿಯ ವಕೀಲ ಕೆ.ಪಿ. ಶ್ರೀಪಾಲ್, ಇಂಥ ಘಟನೆಗಳಾದಾಗ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಪದೇ ಪದೇ ಇಂಥವು ಮರುಕಳಿಸುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂತಹ ಕೃತ್ಯದಲ್ಲಿ ತೊಡಗುವವರಿಗೆ ಕಠಿಣ ಶಿಕ್ಷೆಯಾಗಬೇಕು, ಗಲ್ಲಿಗೆ ಹಾಕು ಎಂದು ಎಲ್ಲರೂ ಘಟನೆ ನಡೆದ ಸಮಯದಲ್ಲಿ ಆವೇಶದಲ್ಲಿ ಹೇಳುತ್ತಾರೆ, ದುರಂತವೆಂದರೆ ಮುಂದೆ ನ್ಯಾಯಾಲಯದಲ್ಲಿ ಸಾಕ್ಷಿ ವಿಚಾರಣೆ ಸಮಯದಲ್ಲಿ ಕೃತ್ಯವನ್ನು ಕಣ್ಣಾರೆ ಕಂಡವರೇ ನಾವು ಏನು ನೋಡಿಯೇ ಇಲ್ಲ ಎಂದು ಸಾಕ್ಷಿ ನುಡಿಯುತ್ತಾರೆ. ಹೀಗಾದಾಗ ಆರೋಪಿಗಳಿಗೆ ಶಿಕ್ಷೆ ಆಗುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿಯ ನೇಹಾ ಕೊಲೆ ಮತ್ತು ಗದಗದಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆಗಳು ಖಂಡನೀಯ, ನಾಗರಿಕ ಸಮಾಜ ತಲೆ ತಗ್ಗಿಸುವಂತ ಇಂತಹ ಘಟನೆಗಳು ಮರುಕಳಿಸುವುದು ನೋಡಿದರೆ ದಿನೆ ದಿನೆ ಮನುಷ್ಯನ ಮನೋಸ್ಥಿತಿ ಯಾವ ಹಂತಕ್ಕೆ ಹೋಗುತ್ತಿದೆ ಎಂಬ ಆತಂಕ ಮೂಡುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ವರ್ಷಗಳ ಹಿಂದೆ ತೀರ್ಥಹಳ್ಳಿ ಸರ್ಕಾರಿ ಕಾಲೇಜಿನಲ್ಲಿ ಇಂಥದ್ದೇ ಒಂದು ಪ್ರೇಮ ಪ್ರಕರಣ ನಡೆದು ತನ್ನನ್ನು ಪ್ರೇಮಿಸಲು ಒಪ್ಪಲಿಲ್ಲವೆಂದು ಕಾಲೇಜು ಆವರಣದಲ್ಲಿಯೇ ಒಬ್ಬ ಯುವಕ ಕಾಲೇಜು ಯುವತಿಯನ್ನು ಬೀಕರವಾಗಿ ಕೊಲೆಗೈದಿದ್ದ, ಈ ಪ್ರಕರಣವನ್ನು ಕಣ್ಣಾರೆ ಕಂಡ ಮೃತ ಹುಡುಗಿಯ ಗೆಳತಿಯರು, ಗೆಳೆಯರು ಯಾರು ಕೂಡ ನ್ಯಾಯಾಲಯದಲ್ಲಿ ಸಾಕ್ಷಿಯನ್ನೆ ಹೇಳಲಿಲ್ಲ. ನೋಡಿರುವ ಘಟನೆಯನ್ನು ನೋಡಿಯೇ ಇಲ್ಲವೆಂದು ಹೇಳಿ ಅವರು ಪ್ರತಿಕೂಲಸಾಕ್ಷಿಗಳಾದರು. ಸಾಕ್ಷಿ ಕೊರತೆಯಿಂದ ಆರೋಪಿ ಬಿಡುಗಡೆಯಾದ ಎಂದು ಅವರು ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.
ನಮ್ಮ ಸಮಾಜವೇ ಹೀಗೆ. ಘಟನೆ ನಡೆದಾಗ ಇರುವಷ್ಟು ಸಿಟ್ಟು ಮತ್ತು ಆಕ್ರೋಶಗಳು ನಂತರ ಬೇರೆ ಬೇರೆ ಕಾರಣಗಳಿಗಾಗಿ ಉಳಿಯುವುದಿಲ್ಲ. ಜಾತಿ ಮತ್ತು ಧರ್ಮಗಳು, ಹೊಂದಾಣಿಕೆ, ಭಯ, ಇವೆಲ್ಲವು ಸಾಕ್ಷಿಗಳು ಸಾಕ್ಷಿ ಹೇಳದೆ ಇರಲು ಮುಖ್ಯ ಕಾರಣವಾಗಿರುತ್ತವೆ ಎಂದು ಅವರು ಹೇಳಿದ್ದಾರೆ.
ಕೆಲವು ಕೊಲೆಗಳನ್ನು ಕೆಲವು ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ರಾಜಕೀಯವಾಗಿ ಲಾಭಕ್ಕೆ ಬಳಸಿಕೊಳ್ಳುತ್ತಾರೆ, ಆರೋಪಿಯ ಧರ್ಮ ಮತ್ತು ಜಾತಿಗಳು ಆಧಾರದ ಮೇಲೆ ಪ್ರಕರಣದ ತೀವ್ರತೆಯನ್ನು ಹೆಚ್ವಿಸಿ ರಾಜಕೀಯ ಲಾಭ ಪಡೆಯುತ್ತಾರೆ. ಇವರಿಗೆ ಸತ್ತವರ ಬಗ್ಗೆ ಮತ್ತು ಅವರ ಕುಟುಂಬದ ಬಗ್ಗೆ ಯಾವುದೇ ಸಹಾನುಭೂತಿ ಮತ್ತು ಕಾಳಜಿಗಳು ಇರುವುದಿಲ್ಲ. ತಮ್ಮ ಸ್ವಂತ ಲಾಭಕ್ಕಾಗಿ ಮಧ್ಯದಲ್ಲಿ ತೂರಿಕೊಂಡು ಸಾಮಾಜದ ಶಾಂತಿಯನ್ನು ಕದಡುವ ಕೆಲಸಗಳನ್ನು ಮಾಡುತ್ತಾರೆ. ಇಲ್ಲಿ ಆರೋಪಿಯ ಅಪರಾಧ ಕೃತ್ಯವನ್ನು ಖಂಡಿಸಿ, ಆರೋಪಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕೆ ಹೊರತು ಆರೋಪಿಯ ಜಾತಿ ಧರ್ಮಗಳ ಆಧಾರದ ಮೇಲೆ ಅಲ್ಲ ಎಂದು ಅವರು ಹೇಳಿದ್ದಾರೆ.