ಕೋಲಾರ : ದೇಶ ವಿದೇಶಗಳಿಗೆ ಟಮೋಟೋ ರಫ್ತು ಮಾಡುವಲ್ಲಿ ನಾಸಿಕ್ ನಂತರ ಏಷ್ಯಾದಲ್ಲಿಯೇ ಎರಡನೇ ಸ್ಥಾನದಲ್ಲಿರುವುದೇ ರಾಜ್ಯದ ಕೋಲಾರ ಕೃಷಿ ಪತ್ತಿನ ಮಾರುಕಟ್ಟೆಯಾಗಿದೆ.
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹೆಚ್ಚಿನ ಸ್ಥಳ ಹಾಗೂ ಹೈಟೆಕ್ ಮಾರುಕಟ್ಟೆ ನಿರ್ಮಿಸಲಾಗುವುದೆಂದು ಬಂದು ಹೋದ ಸರ್ಕಾರಗಳೂ ಸೇರಿದಂತೆ ಜನ ಪ್ರತಿನಿಧಿಗಳೂ ಸಹ ಆಶ್ವಾಸನೆ ನೀಡುತ್ತಲೇ ಬರುತ್ತಿದ್ದಾರೆ.
1997 ರಿಂದ ಕೇವಲ ಹದಿನೆಂಟು ಎಕರೆಯಷ್ಟು ವಿಸ್ತೀರ್ಣವಿರುವ ಎಪಿಎಂಸಿ ಮಾರುಕಟ್ಟೆಯು ಕಳೆದ ಕೆಲವು ವರುಷಗಳಿಂದ ಎಲ್ಲಾ ರೀತಿಯ ತರಕಾರಿ, ಹಣ್ಣುಗಳ ಮಾರಾಟಕ್ಕೂ ಅತಿ ಹೆಚ್ಚು ಜನಪ್ರಿಯತೆ ಗಳಿಸಿರುತ್ತದೆ. ಈ ಕಾರಣದಿಂದ ಸಹಜವಾಗಿಯೇ ವಾಹನಗಳ ಸಂಚಾರ ಹಾಗೂ ನಿಲುಗಡೆಗೆ ಸ್ಥಳಾವಕಾಶ ಸಿಗದೇ ರಾಷ್ರ್ಟೀಯ ಹೆದ್ಧಾರಿಗಳಲ್ಲೇ ವ್ಯಾಪಾರ ವಹಿವಾಟು ನಡೆಯುತ್ತಿದೆ. ಹೀಗಾಗಿ ದಿನನಿತ್ಯ ಒಂದಲ್ಲಾ ಒಂದು ಕಾರಣಕ್ಕೆ ರಸ್ತೆ ಅಪಘಾತಗಳು, ಸಾವು ನೋವುಗಳು ಸಂಭವಿಸುತ್ತಲೇ ಇರುತ್ತದೆ.
ಅಲ್ಲದೇ ಜೂನ್ ತಿಂಗಳಿನಿಂದ ನವೆಂಬರ್ ತಿಂಗಳಲ್ಲಿ ದೇಶ ವಿದೇಶಗಳಿಗೆ ಅತಿ ಹೆಚ್ಚು ಟಮೋಟೋ ರಫ್ತಾಗುವ ಸಂದರ್ಭಗಳಲ್ಲಿ ಹೊರ ರಾಜ್ಯಗಳಿಂದ ಕೂಲಿಗಾಗಿ ಬರುವ ಸುಮಾರು ನಾಲ್ಕು ಸಾವಿರ ಮಂದಿ ಕೂಲಿ ಕಾರ್ಮಿಕರೂ ಸೇರಿದಂತೆ ಇಲ್ಲಿ ಬದುಕನ್ನರಸಿ ಬರುತ್ತಾರೆ.
ಅಲ್ಲದೇ ಸರಕು ಸಾಗಾಣಿಕೆಯ ಭಾರಿ ವಾಹನಗಳು ನಿಲ್ಲಲು ಸ್ಥಳಾವಕಾಶ ಇಲ್ಲದೇ ರಾಷ್ರ್ಟೀಯ ಹೆದ್ಧಾರಿಯಲ್ಲೇ ನಿಲ್ಲಿಸುವುದರಿಂದ ಭೀಕರ ರಸ್ತೆ ಅಪಘಾತಗಳು ಸಂಭವಿಸುತ್ತಲಿವೆ. ಈ ಕಾರಣದಿಂದ ಸಾರಿಗೆ ವಾಹನಗಳು ದಿನನಿತ್ಯ ಕಿಲೋ ಮೀಟರುಗಳಷ್ಟು ಸಾಲುಗಟ್ಟಿ ನಿಲ್ಲುವಂತಾಗಿದೆ.
ಇನ್ನು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಏನಾದರೂ ಗಂಭೀರ ಸಮಸ್ಯೆ ಉದ್ಭವಿಸಿದಾಗ ಮಾತ್ರ ಮಾರುಕಟ್ಟೆ ಪ್ರಾಂಗಣದಲ್ಲಿ ಒಂದೆರಡು ಸಭೆಗಳು ನಡೆಸುತ್ತಾರಷ್ಟೇˌ
ರಾಷ್ರ್ಟೀಯ ಹೆದ್ಧಾರಿ ಸಮೀಪವೇ ಇನ್ನೂರು ಎಕರೆ ಪ್ರದೇಶವನ್ನು ಗುರುತಿಸಿ, ಹೈಟೆಕ್ ಮಾರುಕಟ್ಟೆ ನಿರ್ಮಾಣ ಮಾಡಲಾಗುವುದೆಂಬ ಭರವಸೆಯನ್ನು ಕಳೆದ ಇಪ್ಪತ್ತೈದು ವರುಷಗಳಿಂದ ಸರ್ಕಾರಗಳು ನೀಡುತ್ತಲೇ ಬಂದಿವೆ. ಇದುವರೆಗೂ ಯಾವುದೇ ಕೆಲಸಗಳು ಆರಂಭವಾಗಿಲ್ಲ.
ವರದಿ: ಸಾಯಿನಾಥ್ ದರ್ಗಾ