ಬೆಂಗಳೂರು: ನಮ್ಮ ಮೆಟ್ರೋ ರೈಲು ಟಿಕೆಟ್ ದರ ಏರಿಕೆ ಕುರಿತು ಸಾರ್ವಜನಿಕರಿಂದ ತೀವ್ರ ಅಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪ್ರಯಾಣ ದರವನ್ನು ಇಳಿಸಲು ಬಿಎಂಆರ್ ಸಿಎಲ್ ಮುಂದಾಗಿದೆ. ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಸುದ್ದಿಗೋಷ್ಠಿ ನಡೆಸಿ ಪ್ರಯಾಣ ದರ ಇಳಿಸುವ ಮುನ್ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳೂ ಸಹ ಪ್ರಯಾಣ ದರ ಇಳಿಸಲು ನಮ್ಮ ಮೆಟ್ರೊಗೆ ಸಲಹೆ ನೀಡಿದ್ದರು.
ಪ್ರಯಾಣ ದರ ಇಳಿಕೆ ಕುರಿತು ಮಾಹಿತಿ ನೀಡಿದ ಅವರು ಪ್ರಯಾಣಿಕರಿಗೆ ಆಗಿರುವ ತೊಂದರೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ನಮ್ಮ ಮೆಟ್ರೋ ಸಾರಿಗೆಯ ನಿಗದಿತ ಅಂತರದಲ್ಲಿ ಸಾಧ್ಯವಿರುವ ಅಂತರದ ಪ್ರಯಾಣದ ದರಗಳನ್ನು ಇಳಿಕೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ನಮ್ಮ ಮೆಟ್ರೋ ನಿರ್ವಹಣೆಯ ವೆಚ್ಚ, ಸಾಲ ಹಾಗೂ ಅದರ ಬಡ್ಡಿ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಟಿಕೆಟ್ ಬೆಲೆ ಏರಿಕೆ ಮಾಡಲಾಗಿದೆ. ನಮ್ಮ ಮೆಟ್ರೋ ನಿರ್ವಹಣಾ ವೆಚ್ಚ ಹೆಚ್ಚುತಿದೆ. ಸುಮಾರು 10 ಸಾವಿರ ಕೋಟಿ ರೂ.ಗಳಿಗೂ ಅಧಿಕ ಸಾಲ ಮತ್ತು ಬಡ್ಡಿಯನ್ನು ಮುಂದಿನ ಆರೇಳು ವರ್ಷಗಳಲ್ಲಿ ತೀರಿಸಬೇಕಿದೆ ಎಂದರು. ಈಗ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ನಾವು ದರಗಳನ್ನು ಕಡಿಮೆ ಮಾಡುವ ಬಗ್ಗೆ ಚರ್ಚೆ ಮಾಡುತ್ತೇವೆ. ಶೀಘ್ರದಲ್ಲೇ ಈ ಬಗ್ಗೆ ಪ್ರಕಟಣೆ ಹೊರಡಿಸಲಾಗುತ್ತದೆ. ಪ್ರಯಾಣದ ದರ ಕನಿಷ್ಟ 10 ರೂ. , ಗರಿಷ್ಟ 90 ರೂ. ದರ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಈ ಎರಡೂ ದರಗಳ ನಡುವಿನ ದರಗಳನ್ನು ಅಧ್ಯಯನ ಮಾಡಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಕಡಿಮೆ ಮಾಡುತ್ತೇವೆ ಎಂದು ಮಹೇಶ್ವರ್ ರಾವ್ ಭರವಸೆ ನೀಡಿದರು.
ಬಿಎಂಆರ್ ಸಿಎಲ್ ಶೇ.47ರಷ್ಟು ಪ್ರಯಾಣ ದರ ಏರಿಸಿತ್ತು. ಕೆಲವು ಅಂತರಗಳಲ್ಲಿ ಶೇ.80ರಿಂದ 100ರಷ್ಟು ದರ ಹೆಚ್ಚಳ ಮಾಡಲಾಗಿತ್ತು. ಕಡಿಮೆ ಅಂತರದ ಪ್ರಯಾಣಕ್ಕೆ ಶೇ.100ರಷ್ಟು ಏರಿಕೆ ಮಾಡಲಾಗಿತ್ತು. 30 ಕಿ.ಮೀ.ಗಿಂತಲೂ ದೂರ ಪ್ರಯಾಣಿಸುವವರಿಗೆ ಶೇ. 70ರಷ್ಟು ಏರಿಕೆಯಾಗಿತ್ತು. 30 ರೂ. ಪಾವತಿಸುವ ಕಡೆ ರೂ.50 ಅಥವಾ 58 ರೂ. ತೆತ್ತು ಪ್ರಯಾಣಿಸಬೇಕಾಗಿದೆ.