ಬೆಂಗಳೂರು: ಡಿಜಿಟಲ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ದೃಷ್ಟಿಯಿಂದ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ ಸಿಎಲ್) ಓಪನ್ ನೆಟ್ ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಓಎನ್ ಡಿಸಿ) ಮೂಲಕ ಕ್ಯೂಆರ್ ಟಿಕೆಟ್ ಸೇವೆ ನೀಡಲು ಮುಂದಾಗಿದೆ.
ಇದುವರೆಗೂ ಪ್ರಯಾಣದ ಟಿಕೆಟ್ ಗಳನ್ನು ಒಂದೆರಡು ಆಪ್ ಗಳಲ್ಲಿ ಮಾತ್ರ ಖರೀದಿಸಬಹುದಾಗಿತ್ತು. ಇನ್ನು ಮುಂದೆ ಓಲಾ, ರಾಪಿಡೋ ಹಾಗೂ ನಮ್ಮ ಯಾತ್ರಿ ಸೇರಿದಂತೆ 9 ಜನಪ್ರಿಯ ಆಪ್ ಗಳಲ್ಲಿಯೂ ಪಡೆಯಬಹುದಾಗಿದೆ.
ಈಜ್ ಮೈ ಟ್ರಿಪ್, ಹೈವೇ ಡಿಲೈಟ್, ಮೈಲ್ಸ್ ಅಂಡ್ ಕಿಲೋಮೀಟರ್ಸ್, ನಮ್ಮ ಯಾತ್ರಿ, ವನ್ ಟಿಕೆಟ್, ರಾಪಿಡೋ, ರೆಡ್ ಬಸ್, ಟಮ್ಮಾಕ್
ಮತ್ತು ಯಾತ್ರಿ – ಸಿಟಿ ಟ್ರಾವೆಲ್ ಗೈಡ್ ಅಪ್ಲಿಕೇಶನ್ ಗಳ ಮೂಲಕ ಬಿಎಂ ಆರ್ ಸಿಎಲ್ ಕ್ಯೂಆರ್ ಟಿಕೆಟ್ ಗಳನ್ನು ಖರೀದಿಸಬಹುದಾಗಿದೆ.
ಈಗಾಗಲೇ ಲಭ್ಯವಿರುವ ಟಿಕೆಟ್ ಬುಕ್ಕಿಂಗ್ ಆಯ್ಕೆ ಮಾರ್ಗಗಳಾದ ನಮ್ಮ ಮೆಟ್ರೋ ಮೊಬೈಲ್ ಆಪ್, ಬಿಎಂಆರ್‌ಸಿಎಲ್ ವಾಟ್ಸಾಪ್ ಚಾಟ್‌ಬಾಟ್ (8105556677), ಮತ್ತು ಪೇಟಿಎಂ ಜತೆ ಹೊಸ ಆಪ್ ಗಳು ಸೇರ್ಪಡೆಯಾಗಿವೆ. ಈ ಕುರಿತು ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್, ಭಾ.ಆ.ಸೇ. ಅವರು ಮಾತನಾಡಿ, ‘ಡಿಜಿಟಲ್ ಟಿಕೆಟ್ ವ್ಯವಸ್ಥೆಯ ಈ ವಿಸ್ತರಣೆಯು ಮೊದಲ ಹಂತದಿಂದ ಕೊನೆಯ ಹಂತದ ಸಂಪರ್ಕವರೆಗೆ (ಫಸ್ಟ್. ಮಿಡ್ ಮತ್ತು ಲಾಸ್ಟ್ ಮೈಲ್ ಕನೆಕ್ಟಿವಿಟಿ) ಏಕೀಕೃತಗೊಳಿಸುವ ನಮ್ಮ ದೀರ್ಘಕಾಲಿಕ ಪ್ರಯತ್ನದ ಭಾಗವಾಗಿದೆ. ಈಗಾಗಲೇ 2023ರಿಂದ ಒಎನ್ ಡಿಸಿ ನೆಟ್ ವರ್ಕ್ ನಲ್ಲಿ ಆಟೋ ಮತ್ತು ಟ್ಯಾಕ್ಸಿ ಸೇವೆಗಳು ಲಭ್ಯವಿರುವ ಹಿನ್ನೆಲೆಯಲ್ಲಿ, ಮೆಟ್ರೋ ಟಿಕೆಟ್ ಗಳ ಸೇರ್ಪಡೆ ಬಹುಮಾದ್ಯಮ ಸಂಚಾರ ವ್ಯವಸ್ಥೆಯ ಪ್ರಮುಖ ಅಂಗವಾಗುತ್ತಿದೆ. ಪ್ರಯಾಣಿಕರು ಇದೀಗ ಒಂದೇ ಅಪ್ಲಿಕೇಶನ್ ನಿಂದ ತಮ್ಮ ಮನೆಯಿಂದ ಗಮ್ಯ ಸ್ಥಳದವರೆಗೆ ತಮ್ಮ ಪ್ರಯಾಣವನ್ನು ಸುಲಭವಾಗಿ ಯೋಜಿಸಬಹುದಾಗಿದ್ದು, ಇದು ಸಮಯ ಮತ್ತು ಶ್ರಮವನ್ನು ದ್ವಿಗುಣವಾಗಿ ಉಳಿಸುತ್ತದೆ. ಬಿಎಂಆರ್‌ಸಿಎಲ್ ಈ ಮೂಲಕ ಒಂದು ಮುಕ್ತ, ಒಳಗೊಳ್ಳುವಿಕೆಯಿಂದ ಕೂಡಿದ, ತಂತ್ರಜ್ಞಾನಾಧಾರಿತ ಭವಿಷ್ಯದ ನಗದುರಹಿತ ನಗರ ಸಂಚಾರ ವ್ಯವಸ್ಥೆ ಕಡೆಗೆ ನಿರ್ಣಾಯಕ ಹೆಜ್ಜೆ ಇಡುತ್ತಿದೆ ಎಂದು ಹೇಳಿದ್ದಾರೆ.
ವಾರದ ದಿನಗಳಲ್ಲಿ ಪ್ರತಿ ದಿನ 8.5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ನಮ್ಮ ಮೆಟ್ರೋ ಸೇವೆ ಬಳಸುತ್ತಿದ್ದಾರೆ.