ಗ್ಯಾರಂಟಿ ಯೋಜನೆಗಳು ಕರ್ನಾಟಕದ ಚುನಾವಣೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದು ಖಾತ್ರಿಯಾಗುತ್ತಲೇ ಇದೀಗ ದೇಶದ ಮಟ್ಟದಲ್ಲೂ ಗ್ಯಾರಂಟಿಗಳ ಸದ್ದು ಸುದ್ದಿ ಮಾಡುತ್ತಿದೆ. ಕರ್ನಾಟಕದ ಗ್ಯಾರಂಟಿಗಳನ್ನು ವಿರೋಧಿಸಿದ್ದ ನರೇಂದ್ರ ಮೋದಿಯವರೇ ಮೋದಿ ಕಾ ಗ್ಯಾರಂಟಿಗಳನ್ನು ಘೋಷಣೆ ಮಾಡುತ್ತಿದ್ದಾರೆ. ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಸರದಿ.
ಇಂದು (ಮಾರ್ಚ್ 13) ರಾಹುಲ್ ಗಾಂಧಿ ಐದು “ನಾರಿ ನ್ಯಾಯ್ ಗ್ಯಾರಂಟಿ”ಗಳನ್ನು ಘೋಷಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರಾ ನಡೆಸುತ್ತಿರುವ ವೇಳೆಯಲ್ಲಿ ಮಹಿಳಾ ಸಮ್ಮೇಳನವೊಂದನ್ನು ಉದ್ದೇಶಿದಿ ಭಾಷಣ ಮಾಡಿದ ವಯನಾಡ್ ಸಂಸದ ರಾಹುಲ್ ಗಾಂಧಿ ಮಹಿಳೆಯರಿಗಾಗಿ 5 ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಅವುಗಳಲ್ಲಿ ಬಡ ಮಹಿಳೆಯರ ಬ್ಯಾಂಕ್ ಅಕೌಂಟುಗಳಿಗ್ ವರ್ಷಕ್ಕೆ 1 ಲಕ್ಷ ನಗದು ಹಣ, ಸರ್ಕಾರಿ ನೌಕರಿಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ, ಒಳಗೊಂಡಿವೆ.
ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಪಕ್ಷದಲ್ಲಿ ಈ ಗ್ಯಾರಂಟಿಗಳನ್ನು ಈಡೇರಿಸುವುದಾಗಿ ರಾಹುಲ್ ಗಾಂಧಿ ಘೋಷಿಸಿದ್ದಾರೆ.
ರಾಹುಲ್ ಗಾಂಧಿ ಘೋಷಿಸಿರುವ 5 ಗ್ಯಾರಂಟಿಗಳೆಂದರೆ:
ಮಹಾಲಕ್ಷ್ಮೀ ಗ್ಯಾರಂಟಿ: ಬಡ ಮಹಿಳೆಯರ ಬ್ಯಾಂಕ್ ಅಕೌಂಟುಗಳಿಗೆ ವರ್ಷಕ್ಕೆ 1 ಲಕ್ಷ ನಗದು ಹಣ.
ಅರ್ಧ ಜನಸಂಖ್ಯೆ, ಪೂರ್ತಿ ಹಕ್ಕು: ಇದರಡಿಯಲ್ಲಿ ಎಲ್ಲಾ ಸರ್ಕಾರಿ ಉದ್ಯೋಗಗಳಲ್ಲಿ ಶೇಕಡಾ 50 ರಷ್ಟನ್ನು ಮಹಿಳೆಯರಿಗೆ ಮೀಸಲಿಡಲಾಗುವುದು.
ಶಕ್ತಿ ಕಾ ಸಮ್ಮಾನ್: ಅಂಗನವಾಡಿ, ಆಶಾ ಹಾಗೂ ಬಿಸಿಯೂಟ ಕಾರ್ಯಕರ್ತೆಯರ ವೇತವನ್ನು ದುಪ್ಪಟ್ಟು ಹೆಚ್ಚಿಸಲಾಗುವುದು.
ಅಧಿಕಾರ್ ಮೈತ್ರಿ: ಮಹಿಳೆಯರನ್ನು ತಮ್ಮ ಹಕ್ಕುಗಳ ಕುರಿತು ಜಾಗೃತಗೊಳಿಸಿ, ಸಹಾಯ ಒದಗಿಸುವ ನಿಟ್ಟಿನಲ್ಲಿ ಪ್ರತಿ ಪಂಚಾಯ್ತಿಯಲ್ಲಿ ಒಬ್ಬ ಪ್ಯಾರಾಲೀಗಲ್ ಸಹಾಯಕರನ್ನು ನೇಮಕಗೊಳಿಸಲಾಗುವುದು.
ಸಾವಿತ್ರಿಬಾಯಿ ಫುಲೆ ಮಹಿಳಾ ಹಾಸ್ಟೆಲ್: ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕನಿಷ್ಟ ಒಂದು ವರ್ಕಿಂಗ್ ವಿಮೆನ್ಸ್ ಹಾಸ್ಟೆಲ್ ಸ್ಥಾಪಿಸಿ ಇವುಗಳ ಸಂಖ್ಯೆನ್ನು ಎರಡು ಪಟ್ಟು ಹೆಚ್ಚಿಸುವುದು.