ಮೈಸೂರು, ಕಲಬುರಗಿ, ವಿಜಯಪುರ ವಿಮಾನನಿಲ್ದಾಣ ಅಭಿವೃದ್ಧಿಗೆ ಸಿಎಂ ಮನವಿ

Most read

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಇಂದು ಕೇಂದ್ರ  ನಾಗರಿಕ ವಿಮಾನ ಯಾನ  ಖಾತೆ ಸಚಿವ ಕಿಂಜರಾಪು ರಾಮಮೋಹನ ನಾಯ್ಡು ಅವರನ್ನು ಭೇಟಿ ಮಾಡಿ ಮೈಸೂರು, ಕಲಬುರಗಿ, ವಿಜಯಪುರ ವಿಮಾನ ನಿಲ್ದಾಣಗಳ ಅಭಿವೃದ್ಧಿ ಕುರಿತು ಚರ್ಚೆ ನಡೆಸಿ ಮನವಿ ಪತ್ರ ಸಲ್ಲಿಸಿದರು.

ಮನವಿ ಪತ್ರದ ವಿವರ ಹೀಗಿದೆ:

ಮೈಸೂರು ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗೆ ರಾಜ್ಯ ಸರ್ಕಾರವು ದಿನಾಂಕ 6-10-2005 ರಂದು ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದ ನಿಯಮ  ಬಿ (2) (v)  ಪ್ರಕಾರ ಕಾರ್ಯನಿಯೋಜಕರು ವಿಮಾನ ನಿಲ್ದಾಣದ ವಿಸ್ತರಣೆಗಾಗಿ ಅಗತ್ಯ ವಿರುವ ಹೆಚ್ಚುವರಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಯಾವುದೇ ಋಣಭಾರವಿಲ್ಲದೆ ನಿಯೋಜಿತರಿಗೆ ಉಚಿತವಾಗಿ ವರ್ಗಾಯಿಸಬೇಕು. ಅದರಂತೆ, ಅಗತ್ಯವಿರುವ ಭೂಮಿಯನ್ನು  ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಉಚಿತವಾಗಿ ವರ್ಗಾಯಿಸಲಾಗಿದೆ. ಒಪ್ಪಂದದ ಷರತ್ತು ಬಿ 2 (VI) ಪ್ರಕಾರ, ನಿಯೋಜಿತರು  ಮೈಸೂರು ವಿಮಾನ ನಿಲ್ದಾಣದ ಹೆಚ್ಚಿನ ಅಭಿವೃದ್ಧಿಯ ಬಂಡವಾಳ ವೆಚ್ಚ, ಮಾರ್ಪಾಡುಗಳು, ಬಲಪಡಿಸುವಿಕೆ ಮತ್ತು ಮೇಲ್ದರ್ಜೆಗೇರಿಸುವ ಎಲ್ಲಾ ವೆಚ್ಚಗಳನ್ನು ಭರಿಸಬೇಕು. ಅದರಂತೆ, ಮೈಸೂರು ವಿಮಾನ ನಿಲ್ದಾಣದ ವಿಸ್ತರಣೆಗೆ ಅಗತ್ಯವಿರುವ ಬಂಡವಾಳ  ಹಾಗೂ ಇನ್ನಿತರೆ ವೆಚ್ಚಗಳನ್ನು  ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವೇ ಭರಿಸಬೇಕಿದೆ.

ಈ ಹಿನ್ನೆಲೆಯಲ್ಲಿ, ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ ಅಗತ್ಯವಿರುವ 240 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರವು 319.14 ಕೋಟಿಗಳ ಅನುದಾನವನ್ನು  ಬಿಡುಗಡೆ ಮಾಡಿದೆ. ಭೂ ಸ್ವಾಧೀನ ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ.

ನವೆಂಬರ್ 2024 ರಲ್ಲಿ ಕಾವೇರಿ ನೀರಾವರಿ ನಿಗಮ ನಿಯಮಿತವು(ಸಿ. ಎನ್.ಎನ್.ಎಲ್) ವಿಮಾನ ನಿಲ್ದಾಣ ವಿಸ್ತರಣೆ ಪ್ರದೇಶದಲ್ಲಿ ಎರಡು ಕಂದಕಗಳ  ಮತ್ತು 7 ಕಾಲುವೆಗಳ ಸ್ಥಳಾಂತರಕ್ಕೆ ವರದಿಯನ್ನು ಸಲ್ಲಿಸಿದ್ದು, ಇದಕ್ಕೆ 70 ಕೋಟಿಗಳ ವೆಚ್ಚವಾಗಲಿದೆ. ಅಂತೆಯೇ, ಕೆ. ಪಿ.ಟಿ.ಸಿಎಲ್  ಕೂಡ ಹೈ-ಟೆನ್ಷನ್ ಲೈನ್ ಗಳ   ಮತ್ತು  ಚೆಸ್ಕಾಂ ಲೋ ಟೆನ್ಶನ್ ವೈರ್ ಗಳ    ಮಾರ್ಗ ಬದಲಾವಣೆಗೆ  31.82 ಕೋಟಿಗಳ ಅಂದಾಜು ವೆಚ್ಚವಾಗಲಿದೆ ಎಂದು ತಿಳಿಸಿದ್ದು, ಒಟ್ಟಾರೆ ಸದರಿ ಕಾಮಗಾರಿಗೆ 101.82 ಕೋಟಿಗಳ ಅನುದಾನದ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಆದ್ದರಿಂದ,  ರಾಜ್ಯ ಸರ್ಕಾರವು ಮೈಸೂರು ವಿಮಾನ ನಿಲ್ದಾಣದ ರನ್  ವೇ  ವಿಸ್ತರಣೆಗೆ 240 ಎಕರೆ  ಭೂ ಸ್ವಾಧೀನಕ್ಕೆ ತಗಲುವ 319.14 ಕೋಟಿಗಳ ಭೂ ಸ್ವಾಧೀನದ ವೆಚ್ಚವನ್ನು ಭರಿಸಿದ್ದು, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ವಿಸ್ತರಣೆಯ ಅಂದಾಜು ವೆಚ್ಚ 101.84 ಕೋಟಿಗಳ ಯುಟಿಲಿಟಿ ಸ್ಥಳಾಂತರದ ಯೋಜನೆಯನ್ನು ರೂಪಿಸಿ ಶ್ರೀಘ್ರವಾಗಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕೆಂದು ರಾಜ್ಯ ಕೋರಿದೆ.

 ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ರಾಜಕೀಯ ಕಾರ್ಯದರ್ಶಿ  ಗೋವಿಂದರಾಜು, ಕಾನೂನು ಸಲಹೆಗಾರ ಪೊನ್ನಣ್ಣ,  ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಹಾಜರಿದ್ದರು.

More articles

Latest article