ಮೈಸೂರು: ಮೈಸೂರಿನ ವಿಶ್ವೇಶ್ವರಯ್ಯ ನಗರದ ಅಪಾರ್ಟ್‌ಮೆಂಟ್ ವೊಂದರಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರನ್ನು ಚೇತನ್ (45), ಅವರ ಪತ್ನಿ ರೂಪಾಲಿ (43) ತಾಯಿ ಪ್ರಿಯಂವಧ (65) ಹಾಗೂ ಪುತ್ರ ಕುಶಾಲ್ (15) ಎಂದು ಗುರುತಿಸಲಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಚೇತನ್ ಶವ ಪತ್ತೆಯಾಗಿದ್ದರೆ ಉಳಿದವರ ಶವ ಮನೆಯಲ್ಲಿ ಪತ್ತೆಯಾಗಿವೆ. ಚೇತನ್ ಎಲ್ಲರಿಗೂ ವಿಷ ನೀಡಿ ನಂತರ ನೇಣು ಹಾಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಘಟನಾ ಸ್ಥಳಕ್ಕೆ ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೈಸೂರು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಡಿಸಿಪಿ ಜಾಹ್ನವಿ, ಇನ್ಸ್‌ಪೆಕ್ಟರ್ ಮೋಹಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಲ್ವರ ಸಾವಿನ ಕುರಿತು ತನಿಖೆ ಆರಂಭಿಸಿರುವ ಪೊಲೀಸರು ಡೆತ್‌ನೋಟ್ ಅನ್ನು ವಶಕ್ಕೆ ಪಡೆದಿದ್ದಾರೆ. ಪುತ್ರ ವಿಶಾಲ್ ಎಸ್ ಸ್ ಎಲ್ ಸಿ ಪರೀಕ್ಷೆ ಬರೆಯಬೇಕಿತ್ತು.
ಹಾಸನ ಮೂಲದ ಚೇತನ್ ಕೆಲವು ವರ್ಷ ವಿದೇಶದಲ್ಲಿದ್ದರು. ನಂತರ ಮೈಸೂರಿಗೆ ಆಗಮಿಸಿದ್ದರು. ಇವರು ಸೌದಿ ಅರೇಬಿಯಾಕ್ಕೆ ಕಾರ್ಮಿಕರನ್ನು ಕಳುಹಿಸುವ ಕೆಲಸ ಮಾಡುತ್ತಿದ್ದರು. ಜೀವನ ನಡೆಸಲು ಅಪಾರ ಸಾಲ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ವಿದೇಶದಿಂದ ಬಂದ ಬಳಿಕ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದರು. ಆದರೂ ಪರಿಸ್ಥಿತಿ ಸುಧಾರಿಸಲಿಲ್ಲ. ಕೋವಿಡ್ ಬಳಿಕ ಉಂಟಾಗಿದ್ದ ಸಂಕಷ್ಟದಿಂದ ಹೊರಬರಲಾಗದೇ ಹೆಣಗಾಡಿದ್ದರು. ಇದೇ ವಿಚಾರವಾಗಿ ಮನೆಯವರೊಂದಿಗೆ ಆಗಾಗ ಬೇಸರ ತೋಡಿಕೊಳ್ಳುತ್ತಿದ್ದರು. ಇನ್ನೊಬ್ಬ ಮಗ ಭರತ್ ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದು ಆತನ ಶಿಕ್ಷಣಕ್ಕೂ ಹಣ ಹೊಂದಿಸಲು ಕಷ್ಟಪಡುತ್ತಿದ್ದರು. ಭಾನುವಾರ ಸಂಜೆ ಇವರೆಲ್ಲರೂ ದೇವಸ್ಥಾನಕ್ಕೆ ಹೋಗಿ ಬಂದಿದ್ದಾರೆ.