ಅಪ್ಪ-ಮಕ್ಕಳ ರಾಜಕಾರಣ ಮುಗಿಸಲು ನನ್ನ ಹೋರಾಟ – ಕೆ.ಎಸ್.‌ ಈಶ್ವರಪ್ಪ

Most read

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಮಕ್ಕಳ ಕುಟುಂಬ ರಾಜಕಾರಣ ಮುಗಿಸಲು ಹೋರಾಟಕ್ಕಿಳಿದಿದ್ದೇನೆ ಎಂದು ಬಿಜೆಪಿಯಲ್ಲಿ ಬಂಡಾಯ ಎದ್ದಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಘೋಷಿಸಿದ್ದಾರೆ.

ಈಶ್ವರಪ್ಪನವರ ಬೆಂಬಲಿಸುವ ಯಾವುದೇ ಮಠಾಧೀಶರಿಗೆ, ಬೆಂಬಲಿಗರಿಗೆ ಬೆದರಿಕೆ ಹಾಕಿಲ್ಲ. ಇಂತಹ ಆರೋಪ ಮಾಡುತ್ತಿರುವ ಈಶ್ವರಪ್ಪನವರು ಚಂದ್ರಗುತ್ತಿ ರೇಣುಕಾ ದೇವಿ ದೇವಸ್ತಾನದಲ್ಲಿ ಬಂದು ಗಂಟೆ ಹೊಡೆದು ಪ್ರಮಾಣ ಮಾಡಲಿ ಎಂಬ ಬಿಜೆಪಿ ಲೋಕಸಭಾ ಅಭ್ಯರ್ಥಿ ಬಿ. ವೈ ರಾಘವೇಂದ್ರ ಅವರ ಆಹ್ವಾನಕ್ಕೆ ಸುದ್ದಿಗೋಷ್ಟಿಯಲ್ಲಿಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪನವರು ರಾಘವೇಂದ್ರ ಮತ್ತು ಅವರಪ್ಪನಿಗೆ (ಯಡಿಯೂರಪ್ಪ) ಸುಳ್ಳು ಹೇಳುವುದು ಅಭ್ಯಾಸವಾಗಿದೆ.

ಯಡಿಯೂರಪ್ಪನವರು ಹಾವೇರಿಯಲ್ಲಿ ಕಾಂತೇಶ್ ಗೆ ಟಿಕೆಟ್ ಕೊಡಿಸುತ್ತೇನೆ, ನಾನೇ ಬಂದು ಕ್ಷೇತ್ರದಲ್ಲಿ ಓಡಾಡಿ ಗೆಲ್ಲಿಸುತ್ತೇನೆ ಅಂತ ಹೇಳಿರಲಿಲ್ಲ ಎಂದು ಯಡಿಯೂರಪ್ಪ ಅವರು ಗಂಟೆ ಹೊಡೆದು ಪ್ರಮಾಣ ಮಾಡುತ್ತಾರಾ? ಸಾಧುಸಂತರಿಗೆ ನೋವುಂಟು ಮಾಡಿಲ್ಲ, ಬೆದರಿಕೆ ಹಾಕಿಲ್ಲ ಎಂದು ರಾಘವೇಂದ್ರ ಗಂಟೆ ಹೊಡೆದು ಪ್ರಮಾಣ ಮಾಡುತ್ತಾನಾ? ನನಗಂತೂ ಇಂತಹ ಪ್ರಮಾಣಗಳ ಬಗ್ಗೆ ನಂಬಿಕೆ ಇಲ್ಲ. ಆದರೆ ನನ್ನಷ್ಟು ದೈವ ಭಕ್ತಿ ಯಡಿಯೂರಪ್ಪನವರ ಕುಟುಂಬಕ್ಕಿಲ್ಲ. ನಾನು ಮಠಾಧೀಶರಿಗೆ, ಹೆಣ್ಮಕ್ಕಳಿಗೆ ನೋವಾಗುವಂತೆ ಮಾತನಾಡಿಲ್ಲ ಎಂದು ಅವರು ಗಂಟೆ ಹೊಡೆಯಬೇಕಲ್ಲ. ನಾನು ಅವರು ಹೇಳಿದ ಸಮಯಕ್ಕೆ ಬರ‍್ತಿನಿ, ಚಂದ್ರುಗುತ್ತಿಗಷ್ಟೆ ಅಲ್ಲ. ಅಯೋಧ್ಯೆ ಪ್ರಭು ಶ್ರೀರಾಮಚಂದ್ರನ ಮುಂದೆಯೇ ನಾನು ಪ್ರಮಾಣಕ್ಕೆ ಸಿದ್ದ ಎಂದು ಎದಿರೇಟು ನೀಡಿದರು.

ಅಪ್ಪ-ಮಕ್ಕಳಿಗೆ ಸುಳ್ಳು ಹೇಳಿ ಹೇಳಿ ಅಭ್ಯಾಸವಾಗಿದೆ. ನನಗೆ ನನ್ನ ಮೇಲಿನ ಕೇಸ್ನಲ್ಲಿ ಕ್ಲೀನ್ ಚಿಟ್ ಸಿಕ್ಕಿದ ಮೂರು ದಿನದಲ್ಲಿ ಮತ್ತೆ ಸಚಿವರನ್ನಾಗಿ ಮಾಡ್ತಿನಿ ಎಂದಿರಲಿಲ್ಲವೆ? ಇಡೀ ಅವಧಿಯೇ ಕಳೆದು ಹೋಯ್ತು ಮಂತ್ರಿ ಮಾಡಲೇಇಲ್ಲ. ನನಗೆ ಸುಳ್ಳು ಹೇಳುವ ಅಭ್ಯಾಸವಿಲ್ಲ. ಅವರು ಅಪೇಕ್ಷೆ ಪಟ್ಟರೆ ಎಲ್ಲಿ ಬೇಕಾದರೂ ಪ್ರಮಾಣ ಮಾಡುತ್ತೇನೆ ಎಂದರು.

ನನಗೆ ಮೋದಿ, ಅಮಿತ್ ಷಾ ಅವರಿಂದ ಪೋನ್ ಬರಲಿಲ್ಲ. ಆದರೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರಿಂದ ಮೊಬೈಲ್ ಕರೆ ಬಂದಿತ್ತು, ಆದರೆ ನಾನು ಅದನ್ನು ಸ್ವೀಕರಿಸಲಿಲ್ಲ. ನನ್ನ ಪಕ್ಷಕ್ಕೆ ಆಹ್ವಾನಿಸುವ ಉದ್ದೇಶ ಅವರದಿತ್ತು.
-ಕೆ.ಎಸ್ ಈಶ್ವರಪ್ಪ

ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಫೇಲ್ಡ್ ಮುಖ್ಯಮಂತ್ರಿ ಅವರಿಗೆ ಯಾರು ಟಿಕೆಟ್ ಕೊಡುತ್ತಾರೆ? ಕಾಂತೇಶನಿಗೆ ಟಿಕೆಟ್ ಕೊಡಿಸುತ್ತೇನೆ ಎಂದು ಯಡಿಯೂರಪ್ಪನವರು ಹೇಳಿರಲಿಲ್ಲವೆ? ಬಿಜೆಪಿಯ ಹೆಚ್ಚಿನ ಕಾರ್ಯಕರ್ತರು ನನ್ನ ಪರವಾಗಿದ್ದಾರೆ. ಮುಂದಿನ ಬಾರಿ ನಾನೇ ಕಾರ್ಪೋರೇಶನ್ ಟಿಕೆಟ್ ಕೊಡುವ ಸಮಿತಿಯಲ್ಲಿ ನಾನಿರುತ್ತೇನೆ. ನನ್ನ ಸ್ಪರ್ಧೆ ನೊಂದವರ ಪರವಾಗಿದೆ. ಇನ್ನೂ ಮುಂದೆ ಈಶ್ವರಪ್ಪ ಅವರ ಜೊತೆ ಮಾತಿಲ್ಲ ಎಂದು ಅಮಿತ್ ಷಾ ಹೇಳಿದ್ದಾರೆ. ನಾನು ಗೆಲ್ಲಬೇಕು ಎಂಬುದು ಅಮಿತ್‌ಷಾ, ನರೇಂದ್ರ ಮೋದಿ ಅವರ ಆಸೆಯೂ ಇರಬೇಕು. ಅದಕ್ಕಾಗಿ ಅವರಾರು ನನಗೆ ಪೋನ್ ಮಾಡಿಲ್ಲ. ನನ್ನ ಎದೆಯಲ್ಲಿ ಒಂದು ಕಡೆ ರಾಮ, ಮತ್ತೊಂದು ಕಡೆ ಮೋದಿ ಅವರಿದ್ದಾರೆ. ಮೋದಿ ಅವರು ನನಗೆ ಸ್ಪೂರ್ತಿ ನಾನು ದುರ್ಬಲ ಎಂದು ಅವರ ಪೋಟೋ ಹಾಕಿಕೊಂಡಿಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ಮತ್ತವರ ಮಕ್ಕಳ ರಾಜಕಾರಣ ಅಂತ್ಯ ಆಗಬೇಕು ಎಂಬ ಆಸೆ ಅವರಿಗೂ ಸಾವಿರಾರು ಹಿಂದೂ ಕಾರ್ಯಕರ್ತರ ಅಭಿಪ್ರಾಯವೂ ಇದೆ ಆಗಿದೆ. ಮೋದಿ ಅಮಿತ್ ಷಾ ಅವರೆ ನನ್ನನ್ನು ನಿಲ್ಲಿಸಿದ್ದಾರೆ ಎಂಬ ಅಭಿಪ್ರಾಯ ನನ್ನ ಬೆಂಬಲಿಸುತ್ತಿರುವವರಿಗೂ ಬಂದಿರಬಹುದು. ನನ್ನ ಸ್ಪರ್ಧೆಯಿಂದ ಇತರೆ ಯಾವ ಯಾವ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಪರಿಣಾಮ ಬೀರುತ್ತೋ ಗೊತ್ತಿಲ್ಲ . ಹಿಂದೂತ್ವ ಉಳಿಸುವ ವ್ಯಕ್ತಿ ನಾನೆಂದು ಇಡೀ ಕ್ಷೇತ್ರಾದ್ಯಂತ ನನಗೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಯಡಿಯೂರಪ್ಪನವರ ಜಾತಿ ಮತ್ತು ಹಣ ಬಲ ಮತ್ತು ಧರ್ಮದ ನಡುವೆ ಯುದ್ಧ ನಡೆಯುತ್ತಿದೆ. ಅಂತಿಮವಾಗಿ ಧರ್ಮ ಗೆಲ್ಲುತ್ತದೆ ಎಂದು ಈಶ್ವರಪ್ಪ ಗುಡುಗಿದರು.

ಪಕ್ಷ ಬಿಟ್ಟು ಹೋಗಿದ್ದ ಯಡಿಯೂರಪ್ಪನವರು ಮೋಸ ಮಾಡಿರಲಿಲ್ಲವೇ? ಯಡಿಯೂರಪ್ಪನವರು ಯಾವ ಮುಖ ಇಟ್ಟುಕೊಂಡು ನನ್ನ ಜೊತೆ ಮಾತುಕತೆಗೆ ಬರುತ್ತಾರೆ? ಇಷ್ಟು ಮೋಸ ಮಾಡಿದಿನಿ ಅನ್ನೋದು ಮನಸ್ಸಿದ್ದರೆ ನನ್ನತ್ರ ಬರೋದಿಲ್ಲ. ನಲವತ್ತು ವರ್ಷ ಸಂಘಟನೆಯಲ್ಲಿದಿನಿ, ಸಾಯೋವರೆಗೂ ಇರ‍್ತಿನಿ. ಅಧಿಕಾರಕ್ಕಾಗಿ ತಾಯಿಯಂತಹ ಪಾರ್ಟಿಗೆ ದ್ರೋಹ ಮಾಡಿ ಹೋಗಿ ಕೆಜೆಪಿ ಕಟ್ಟಿರಲಿಲ್ಲವಾ? ಅವರ ಶಕ್ತಿ ಏನು? ಕೇವಲ 6 ಸೀಟು ಗೆದ್ದಿದ್ದು, ಮತ್ತೆ ವಾಪಸ್ ಬಿಜೆಪಿಗೆ ಕರೆತಂದು ಸೇರಿಸಿದ್ದೇ ನಾನು. ಹಠ ಮಾಡಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಕೊಡಿಸಲಾಗುತ್ತದೆ. ಅದೇ ಹಠ ಮಾಡಿ ಕಾಂತೇಶ್ ಗೆ ಟಿಕೆಟ್ ಕೊಡಿಸಲಾಗುತ್ತಿರಲಿಲ್ಲವೇ? ಎಂದು ಯಡಿಯೂರಪ್ಪನವರ ವಿರುದ್ದ ಪ್ರಶ್ನೆಗಳ ಸುರಿಯಮಳೆಯನ್ನೆ ಸುರಿಸಿದ ಈಶ್ವರಪ್ಪ ಅವರಿಗೆ ನನ್ನ ಜೊತೆ ಮಾತಿಗೆ ಬರಲು ಮುಖವಿಲ್ಲ ಎಂದರು.

ನನ್ನ ಸ್ಪರ್ಧೆ ಖಚಿತ. ಭದ್ರಾವತಿಯ ರಂಗನಾಥ್ ಸ್ವಾಮಿ ದೇವಸ್ಥಾನದಲ್ಲಿ ಪ್ರಸಾದ ಆಗಿದೆ. ನಾನು ಧರ್ಮದ ಪರವಾಗಿದ್ದೇನೆ. ಯಡಿಯೂರಪ್ಪನವರ ಜಾತಿ ಮತ್ತು ದುಡ್ಡಿನ ಎದುರು ಧರ್ಮ ಗೆಲ್ಲುತ್ತದೆ. ಅಪ್ಪ-ಮಕ್ಕಳ ರಾಜಕಾರಣ ಕೊನೆಯಾಗುತ್ತದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

More articles

Latest article