ವಾಷಿಂಗ್ ಟನ್: “ಇರಾನ್‌ನ ತೈಲವನ್ನು ವಶಕ್ಕೆ ಪಡೆಯುವುದೇ ನನ್ನ ಮೆಚ್ಚಿನ ಯೋಜನೆ! ಇದಕ್ಕಾಗಿ ಇರಾನ್ ನ ಖಾರ್ಗ್ ಐಲ್ಯಾಂಡ್ ಆಕ್ರಮಣಕ್ಕೆ ಅಮೆರಿಕ ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಾಯಿ ಬಿಟ್ಟಿದ್ದಾರೆ
ಇರಾನ್ ವಿರುದ್ಧ ಯುದ್ಧಕ್ಕೆ ನಾನಾ ಕಾರಣಗಳನ್ನು ಹೇಳುತ್ತಿದ್ದ ಅಮೆರಿಕ ಇದೇ ಮೊದಲ ಬಾರಿ ಇರಾನ್ ನಲ್ಲಿರುವ ಅಪಾರ ತೈಲ ನಿಕ್ಷೇಪ ತನ್ನ ಗುರಿ ಎಂದು ಬಹಿರಂಗವಾಗಿ ಹೇಳಿಕೊಳ್ಳುವುದರೊಂದಿಗೆ ಭಾರಿ ವಿವಾದ ಸೃಷ್ಟಿಯಾಗಿದೆ.
ಇರಾನ್‌ನ ಮುಖ್ಯ ತೈಲ ರಫ್ತು ಕೇಂದ್ರವಾದ ಖಾರ್ಗ್ ಐಲ್ಯಾಂಡ್ ಅನ್ನು ಅಮೆರಿಕಾ ವಶಕ್ಕೆ ಪಡೆಯಬಹುದು ಎಂದು ಅವರು ಫೈನಾನ್ಷಿಯಲ್ ಟೈಮ್ಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
“ನನ್ನ ಇಷ್ಟವಾದ ವಿಷಯವೇನೆಂದರೆ ಇರಾನ್‌ನ ತೈಲವನ್ನು ವಶಕ್ಕೆ ಪಡೆಯುವುದು. ಖಾರ್ಗ್ ಐಲ್ಯಾಂಡ್ ಅನ್ನು ನಾವು ತೆಗೆದುಕೊಳ್ಳಬಹುದು, ಬಿಡಬಹುದು. ನಮಗೆ ಅನೇಕ ಆಯ್ಕೆಗಳಿವೆ. ಇದನ್ನು ತುಂಬಾ ಸುಲಭವಾಗಿ ಮಾಡಬಹುದು” ಎಂದು ಅವರು ಹೇಳಿಕೊಂಡಿದ್ದಾರೆ. ಇರಾನ್‌ನ ತೈಲ ರಫ್ತಿನಲ್ಲಿ ಸುಮಾರು ಶೇ.90ರಷ್ಟು ಭಾಗವನ್ನು ಖಾರ್ಗ್ ಐಲ್ಯಾಂಡ್ ನಿರ್ವಹಿಸುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ. ಅಮೆರಿಕಾ ಈಗಾಗಲೇ ಪರ್ಷಿಯನ್ ಗಲ್ಫ್ ಪ್ರದೇಶಕ್ಕೆ 2500 ಮರೀನ್ ಸೈನಿಕರನ್ನು ಕಳುಹಿಸಿದೆ ಮತ್ತು ಹೆಚ್ಚಿನ ಸೈನ್ಯವನ್ನು ಸಿದ್ಧಪಡಿಸುತ್ತಿರುವ ಬೆನ್ನಲ್ಲೇ ಈ ಹೇಳಿಕೆ ಹೊರಬಂದಿದೆ.
ಈ ನಡುವೆ ಇರಾನ್ ಕುವೈತ್‌ನ ಒಂದು ಪ್ರಮುಖ ವಿದ್ಯುತ್ ಉತ್ಪಾದನಾ ಕೇಂದ್ರ ಮತ್ತು ನೀರು ಶುದ್ಧೀಕರಣ (ಡಿಸಾಲಿನೇಷನ್) ಘಟಕದ ಮೇಲೆ ಡ್ರೋನ್/ಮಿಸೈಲ್ ದಾಳಿ ನಡೆಸಿದೆ. ಕುವೈತ್‌ನ ವಿದ್ಯುತ್ ಮತ್ತು ನೀರು ಸಚಿವಾಲಯವು ಈ ದಾಳಿಯನ್ನು “ಇರಾನ್ ನ ಪಾಪಕೃತ್ಯ” ಎಂದು ಖಂಡಿಸಿದೆ. ದಾಳಿಯಲ್ಲಿ ಒಂದು ಸರ್ವಿಸ್ ಬಿಲ್ಡಿಂಗ್ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ವಿದ್ಯುತ್ ಸರಬರಾಜು ಸ್ವಲ್ಪ ಸಮಯಕ್ಕೆ ನಿಂತುಹೋಗಿತ್ತು, ನಂತರ ಮರುಸ್ಥಾಪಿಸಲಾಗಿದೆ. ಈ ದಾಳಿಯಲ್ಲಿ ಒಬ್ಬ ಭಾರತೀಯ ಕಾರ್ಮಿಕ ಸಾವಿಗೀಡಾಗಿದ್ದಾನೆ ಎಂದು ಕುವೈತ್ ಸಚಿವಾಲಯವು ತನ್ನ ಅಧಿಕೃತ X ಖಾತೆಯಲ್ಲಿ ತಿಳಿಸಿದೆ.
ಕುವೈತ್ ಸಚಿವಾಲಯದ ವಕ್ತಾರೆ ಫಾತಿಮಾ ಅಬ್ಬಾಸ್ ಜವಾರ್ ಹಯಾತ್ ಅವರು ಈ ದಾಳಿಯನ್ನು “ಇರಾನ್‌ನ ಆಕ್ರಮಣಾತ್ಮಕ ಕ್ರಿಯೆ” ಎಂದು ವಿವರಿಸಿದ್ದಾರೆ. ಗಲ್ಫ್ ದೇಶಗಳಲ್ಲಿ ನೀರು ಶುದ್ಧೀಕರಣ ಘಟಕಗಳು ಕುಡಿಯುವ ನೀರಿನ ೯೦%ಕ್ಕಿಂತ ಹೆಚ್ಚು ಪೂರೈಸುತ್ತವೆ. ಇಂತಹ ಘಟಕಗಳ ಮೇಲಿನ ದಾಳಿ ಪ್ರದೇಶದಲ್ಲಿ ತೀವ್ರ ನೀರು-ವಿದ್ಯುತ್ ಕೊರತೆಯನ್ನು ಉಂಟುಮಾಡುವ ಸಾಧ್ಯತೆ ಇದೆ.
ಅಮೆರಿಕ-ಇಸ್ರೇಲ್ ಒಕ್ಕೂಟದ ಇರಾನ್ ವಿರುದ್ಧದ ಯುದ್ಧ ಈಗ ಐದನೇ ವಾರಕ್ಕೆ ಕಾಲಿಟ್ಟಿದೆ. ಇರಾನ್ ತನ್ನ ಪ್ರತೀಕಾರದ ಭಾಗವಾಗಿ ಗಲ್ಫ್ ದೇಶಗಳ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುತ್ತಿದೆ. ಟ್ರಂಪ್ ಅವರ ಹೇಳಿಕೆಯು ಯುದ್ಧವನ್ನು ಇನ್ನಷ್ಟು ತೀವ್ರಗೊಳಿಸುವ ಸಾಧ್ಯತೆಯನ್ನು ಹೆಚ್ಚಿಸಿದೆ. ತೈಲ ಬೆಲೆಗಳು ಜಾಗತಿಕ ಮಾರುಕಟ್ಟೆಯಲ್ಲಿ ಏರಿಕೆಯಾಗುತ್ತಿವೆ. ಗಲ್ಫ್ ದೇಶಗಳಲ್ಲಿ ಭೀತಿಯ ವಾತಾವರಣ ಮುಂದುವರೆದಿದೆ.

