ಬೆಳಗಾವಿ: ಬೆಳಗಾವಿ ಜಿಲ್ಲೆ ಗೋಕಾಕ್ ನಲ್ಲಿರುವ ಮಹಾಲಕ್ಷ್ಮೀ ಅರ್ಬನ್ ಕೋ ಆಪರೇಟಿವ್ ಸೊಸೈಟಿಯಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಬಬಲಾದಿ ಮಠದ ಸ್ವಾಮೀಜಿ ವಿಚಾರಣೆ ನಡೆಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿರುವ ಹೊಸ ಬಬಲಾದಿ ಮಠ ಸದಾಶಿವ ಮುತ್ತ್ಯಾ ಅವರನ್ನು ವಶಕ್ಕೆ ಪಡೆದು ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ಆರ್ಥಿಕವಾಗಿ ದಿವಾಳಿಯಾಗಿರುವ ಮಹಾಲಕ್ಷ್ಮೀ ಸಹಕಾರ ಬ್ಯಾಂಕ್ನ ಹಣ ಲಪಟಾಯಿಸಿದ್ದ ಆರೋಪಿಯಿಂದ ಸ್ವಾಮೀಜಿ 80 ಲಕ್ಷ ರೂಪಾಯಿ ದೇಣಿಗೆ ಪಡೆದುಕೊಂಡಿದ್ದರೆಂಬ ಮಾಹಿತಿ ಸಿಐಡಿ ತನಿಖೆ ವೇಳೆ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ವಿಚಾರಣೆ ಮಾಡಲಾಗಿದೆ. ಮೂರನೇ ಬಾರಿಗೆ ಸದಾಶಿವ ಮುತ್ತ್ಯಾರನ್ನು ವಿಚಾರಣೆ ಮಾಡಲಾಗಿದೆ.
ಮೂರ್ನಾಲ್ಕು ತಿಂಗಳ ಹಿಂದೆ ಸೊಸೈಟಿಯ ವಂಚನೆ ಪ್ರಕರಣ ಬಯಲಾಗಿತ್ತು. ಇದರಿಂದ ನೂರಾರು ಗ್ರಾಹಕರು ಸೊಸೈಟಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದರು. ಬಳಿಕ ಪ್ರಕರಣವನ್ನ ಬೆಳಗಾವಿ ಪೊಲೀಸರು ಸಿಐಡಿಗೆ ವರ್ಗಾವಣೆ ಮಾಡಿದ್ದರು. ಬಹುಕೋಟಿ ವಂಚನೆ ಪ್ರಕರಣದ ಆರೋಪಿಯಿಂದಲೇ ಸದಾಶಿವ ಹಿರೇಮಠ ಸ್ವಾಮೀಜಿ ಖಾತೆಗೆ ಲಕ್ಷ ಲಕ್ಷ ರೂ. ಹಣ ವರ್ಗಾವಣೆ ಆಗಿದೆ ಎಂದು ಗೊತ್ತಾಗಿದೆ. ಸುಮಾರು 80 ಲಕ್ಷಕ್ಕೂ ಅಧಿಕ ಹಣ ಸ್ವಾಮೀಜಿ ಹಾಗೂ ಅವರ ಕುಟುಂಬದ ಸದಸ್ಯರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂಬ ಮಾಹಿತಿ ಇದೆ. ಇದೇ ಹಣದಲ್ಲಿ ಸ್ವಾಮೀಜಿ ನಿವೇಶನ ಖರೀದಿಸಿದ್ದಾರೆಂಬ ಮಾಹಿತಿ ಇದ್ದು, ಸಿಐಡಿ ಅಧಿಕಾರಿಗಳು ಶ್ರೀಗಳನ್ನ ವಶಕ್ಕೆ ಪಡೆದು ತನಿಖೆ ಮಾಡಿದ್ದಾರೆ.
ನಿವೇಶನ ಖರೀದಿಗಷ್ಟೇ ಅಲ್ಲದೆ ಹೊಸ ಬಬಲಾದಿ ಮಠದ ಜಾತ್ರೆ ಹಾಗೂ ಅನ್ನ ಸಂತರ್ಪಣೆಗೂ ಲಕ್ಷಾಂತರ ಹಣವನ್ನು ಆರೋಪಿ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆಯೇ ಸದಾಶಿವ ಹಿರೇಮಠ ಸ್ವಾಮೀಜಿ ವಶಕ್ಕೆ ಪಡೆದಿದ್ದರು.
ಮಹಾಲಕ್ಷ್ಮಿ ಕೋ ಆಪರೇಟಿವ್ ಸೊಸೈಟಿಯಲ್ಲಿ ಗುಮಾಸ್ತನಾಗಿದ್ದ ಸಾಗರ ಸಬಕಾಳೆ ಹಾಗೂ ಇತರೆ ಸಿಬ್ಬಂದಿ ವಂಚನೆ ಮಾಡಿದ್ದರು. ಬ್ಯಾಂಕ್ ನಲ್ಲಿ ಅಕ್ರಮವಾಗಿ 76 ಕೋಟಿ ರೂ ಸಾಲ ಪಡೆದು ಮರಳಿಸದೇ ವಂಚನೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಆರ್ ಬಿಐ ಅಧಿಕಾರಿಗಳೇ ದಂಗಾಗಿದ್ದರು. ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಗೋಕಾಕ್ ಪೊಲೀಸರು ಯಶಸ್ವಿಯಾಗಿದ್ದರು. ಕೋಟ್ಯಾಂತರ ರೂಪಾಯಿ ವಂಚನೆ ಹಿನ್ನೆಲೆ ಬೆಳಗಾವಿ ಎಸ್ ಪಿ ಡಾ.ಭೀಮಾಶಂಕರ್ ಗುಳೇದ್ ಸಿಐಡಿಗೆ ವಹಿಸಿದ್ದರು. ಇದೀಗ ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಸಿಐಡಿ ತಂಡ ತನಿಖೆಯನ್ನು ಚುರುಕುಗೊಳಿಸಿದೆ.