ಹೌರಾ-ಮುಂಬೈ ನಡುವೆ ಸಂಚರಿಸುತ್ತಿದ್ದ ಪ್ಯಾಸೆಂಜರ್ (ರೈಲು ಸಂಖ್ಯೆ 12810) ಹಳಿ ತಪ್ಪಿರುವ ಘಟನೆ ಜಾರ್ಖಂಡ್‌ನ ಸೆರೈಕೆಲಾ-ಖಾರ್ಸಾವನ್ ಜಿಲ್ಲೆಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ. ಈ ಘಟನೆಯಲ್ಲಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ.
ಗೂಡ್ಸ್ ರೈಲು ಹಳಿತಪ್ಪಿ ಎದುರಿನಿಂದ ಹಾದು ಹೋಗುತ್ತಿದ್ದ ಹೌರಾ-ಮುಂಬೈ ಮೇಲ್ ಗೆ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ರೈಲಿನ ನಾಲ್ಕು ಸಾಮಾನ್ಯ ಬೋಗಿಗಳನ್ನು ಹೊರತುಪಡಿಸಿ ಉಳಿದೆಲ್ಲ 18 ಬೋಗಿಗಳು ಹಳಿತಪ್ಪಿವೆ. ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು, ರಕ್ಷಣಾ ತಂಡಗಳು ಧಾವಿಸಿದ್ದು ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ. ಗಾಯಗೊಂಡ ಎಲ್ಲ ಪ್ರಯಾಣಿಕರನ್ನು ಜಮ್ಶೆಡ್‌ಪುರದ ಟಾಟಾ ಮುಖ್ಯ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯ ನಂತರ, ಭಾರತೀಯ ರೈಲ್ವೇಯು ಹೌರಾ-ತಿಟಲ್‌ಗಢ-ಕಾಂತಬಾಂಜಿ ಎಕ್ಸ್‌ಪ್ರೆಸ್, ಖರಗ್‌ಪುರ-ಜಾರ್‌ಗ್ರಾಮ್-ಧನ್‌ಬಾದ್ ಎಕ್ಸ್‌ಪ್ರೆಸ್, ಹೌರಾ-ಬಾರ್ಬಿಲ್-ಹೌರಾ ಜನ್ ಶತಾಬ್ದಿ ಎಕ್ಸ್‌ಪ್ರೆಸ್, ಟಾಟಾನಗರ-ಇಟ್ವಾರಿ ಎಕ್ಸ್‌ಪ್ರೆಸ್ ಮತ್ತು ಎಲ್‌ಟಿಟಿ-ಎಕ್ಸ್‌ಪ್ರೆಸ್ ಸೇರಿದಂತೆ ಐದು ರೈಲುಗಳನ್ನು ರದ್ದುಗೊಳಿಸಿದೆ.
ಘಟನೆ ನಡೆದ ಬಳಿಕ ಸಹಾಯವಾಣಿ ಆರಂಭಿಸಿದ್ದು, ಮಹಾರಾಷ್ಟ್ರದಲ್ಲಿ ಸಹಾಯವಾಣಿ ಸಂಖ್ಯೆಗಳನ್ನು ಸಹ ನೀಡಿದೆ – ಮುಂಬೈ ಸಹಾಯವಾಣಿ: 022-22694040; ನಾಗ್ಪುರ ಸಹಾಯವಾಣಿ ಸಂಖ್ಯೆ: 7757912790; ಭೂಸಾವಲ್ ಸಹಾಯವಾಣಿ ಸಂಖ್ಯೆ: 08799982712 ಕರೆ ಮಾಡಬಹುದು ಎಂದು ತಿಳಿಸಿದೆ.