ಮುಡಾ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ದೂರು ದಾಖಲಾಗಿದೆ.
ನಕಲಿ ದಾಖಲೆ ಸೃಷ್ಟಿಸುವ ಮೂಲಕ ಮುಡಾ ವಂಚಿಸಿ ಕೋಟ್ಯಂತರ ಬೆಲೆಯ ನಿವೇಶನ ಪಡೆದ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನಸ್ವಾಮಿ, ಭೂ ಮಾಲೀಕ ಎಂದು ಹೇಳುವ ದೇವರಾಜು ಹಾಗೂ ಕುಟುಂಬದವರ ವಿರುದ್ಧ ದೂರು ದಾಖಲಾಗಿದೆ. ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿ, ತಹಸೀಲ್ದಾರ್, ಉಪ ನೊಂದಣಾಧಿಕಾರಿ ಹಾಗೂ ಮುಡಾ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಸ್ನೇಹಮಯಿಕೃಷ್ಣ ಎಂಬುವವರು ದೂರು ದಾಖಲಿಸಿದ್ದಾರೆ.
ರಾಜ್ಯಪಾಲ, ರಾಜ್ಯ ಮುಖ್ಯಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೂ ಪತ್ರ ಬರೆದು ಹಲವು ಪ್ರಶ್ನೆಗಳನ್ನು ಹಾಕಿದ್ದಾರೆ. ಪಾರ್ವತಿ ಪ್ರಕರಣದಲ್ಲಿ ಭೂ ಸ್ವಾಧೀನದಿಂದ ಕೈಬಿಟ್ಟಿರುವ ರಾಜ್ಯಪತ್ರದ ಬಗ್ಗೆಯೇ ಅನುಮಾನ? ಮಲ್ಲಿಕಾರ್ಜುನ ಸ್ವಾಮಿಗೆ ಭೂಮಿ ಮಾರಿರುವ ದೇವರಾಜು ಕುಟುಂಬದ ವಿಳಾಸವೇ ಅಸ್ತಿತ್ವದಲ್ಲಿ ಇಲ್ಲದಿರುವ ಬಗ್ಗೆ ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ.
ಈ ಪ್ರಕರಣದ ಕುರಿತು ಸಮಗ್ರ ತನಿಖೆಯಾಗಬೇಕು ಮತ್ತು ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಹತ್ತು ದಿನಗಳಲ್ಲಿ ಉತ್ತರಿಸಲು ಸ್ನೇಹಮಯಿಕೃಷ್ಣ ಕೇಳಿದ್ದಾರೆ.