ಬೆಂಗಳೂರು: ಕೆ ಆರ್ ಎಸ್ ಅಣೆಕಟ್ಟಿನಲ್ಲಿ 27 ಟಿಎಂಸಿ ಅಡಿ ನೀರು ಲಭ್ಯವಿದ್ದು, ಈ ಬಾರಿಯ ಬೇಸಿಗೆಯಲ್ಲಿ ಬೆಂಗಳೂರಿನಲ್ಲಿ ನೀರಿನ ಕೊರತೆ ಎದುರಾಗುವುದಿಲ್ಲ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿ ಡಬ್ಲ್ಯೂ ಎಸ್ ಎಸ್ ಬಿ) ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.
ಈ ಬಾರಿಯ ಬೇಸಿಗೆಯಲ್ಲಿ ಕುಡಿಯುವ ನೀರಿನ ಬಗ್ಗೆ ಬೆಂಗಳೂರಿಗರು ಆತಂಕಪಡಬೇಕಿಲ್ಲ. ಬೆಂಗಳೂರಿಗೆ ಮುಖ್ಯ ನೀರಿನ ಮೂಲವಾದ ಕೆ ಆರ್ ಎಸ್ ಅಣೆಕಟ್ಟಿನಲ್ಲಿ 6 ಟಿಎಂಸಿ ಅಡಿ ನೀರಿನ ಅವಶ್ಯಕತೆಗೂ ಹೆಚ್ಚಾಗಿ 27 ಟಿಎಂಸಿ ಅಡಿ ನೀರು ಲಭ್ಯವಿದೆ. ಅಕ್ಟೋಬರ್ 2024 ರಲ್ಲಿ ಜಲಮಂಡಳಿ ಪ್ರತಿದಿನ 775 ಮಿಲಿಯನ್ ಲೀಟರ್ (ಎಂಎಲ್ ಡಿ) ನೀರನ್ನು ಪೂರೈಕೆ ಮಾಡಿದೆ. ನಗರದ ಹೊರ ಪ್ರದೇಶಗಳಲ್ಲಿ ಮಾತ್ರ ನೀರು ಸರಬರಾಜಿನಲ್ಲಿ ಕೆಲವು ಸಮಸ್ಯೆಗಳಿದ್ದು, ಪೈಪ್ ಲೈನ್ ಸಂಪರ್ಕ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದೆ ಎಂದು ತಿಳಿಸಿದರು.
ಕಳೆದ ವರ್ಷ ಏಪ್ರಿಲ್ 1ಕ್ಕೆ ಹೋಲಿಸಿದರೆ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೆಚ್ಚಿದೆ. ಕೆ ಆರ್ ಎಸ್ ನಲ್ಲಿ 35 ಟಿಎಂಸಿ ಮತ್ತು ಕಬಿನಿಯಲ್ಲಿ 29 ಟಿಎಂಸಿ ನೀರಿನ ಸಂಗ್ರಹವಿದೆ. ಪ್ರಸ್ತುತ ಲಭ್ಯವಿರುವ ನೀರಿನ ಸಂಗ್ರಹವು ಎರಡು ಋತುಗಳವರೆಗೂ ಪೂರೈಕೆ ಮಾಡಬಹುದು. ಆದರೆ, ಅಂತರ್ಜಲ ಕುಸಿತವಾಗುತ್ತಿರುವುದು ಕಳವಳಕಾರಿ ವಿಚಾರವಾಗಿದೆ. ಮಹದೇವಪುರ ಮತ್ತು ವೈಟ್ ಫೀಲ್ಡ್ ಪ್ರದೇಶಗಳಲ್ಲಿ ಅಂತರ್ಜಲ ಕುಸಿತ ಹೆಚ್ಚಿರುವುದು ಆತಂಕ ಮೂಡಿಸಿದೆ. ಹೀಗಾಗಿ ಈ ಪ್ರದೇಶಗಳಲ್ಲಿ ಬೋರ್ ವೆಲ್ ಕೊರೆಯಲು ಅನುಮತಿಯನ್ನು ಸೀಮಿತಗೊಳಿಸಲಾಗಿದೆ ಎಂದರು,
ಬೆಂಗಳೂರು ಉತ್ತರ, ಮಹದೇವಪುರ ಮತ್ತು ವೈಟ್ ಪೀಲ್ಡ್ ನ 80 ವಾರ್ಡ್ ಗಳಲ್ಲಿ ಅಂತರ್ಜಲ ಮಟ್ಟ ಅತ್ಯಂತ ಕಡಿಮೆಯಾಗಿದ್ದು, ‘ಸಂಚಾರಿ ಕಾವೇರಿ ನೀರು ಸರಬರಾಜು’ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಕೈಗೆಟುಕುವ ದರದಲ್ಲಿ ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.