ಬೆಂಗಳೂರು: ದಶಕಗಳ ಹಿಂದಿನ ಭೂಗತ ಲೋಕದ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ನಡುರಾತ್ರಿಯಲ್ಲಿ ಗುಂಡಿನ ದಾಳಿ ನಡೆದಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ರಾಮನಗರ ತಾಲೂಕಿನ ಬಿಡದಿಯ ಅವರ ಭವ್ಯ ಏಳು ಸುತ್ತಿನ ಕೋಟೆಯಂತಹ ಬಂಗಲೆಯ ಸಮೀಪವೇ ಈ ದಾಳಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ರಿಕ್ಕಿ ರೈಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆಗೆ ಸಂಬಂಧಿಸಿದಂತೆ ರಿಕ್ಕಿ ಕಾರು ಚಾಲಕ ಬಸವರಾಜು ಬಿಡದಿ ಠಾಣೆಗೆ ದೂರು ನೀಡಿದ್ದಾರೆ. ರಿಕ್ಕಿ ರೈ ಮೊದಲ ಪತ್ನಿ ಅನ್ನಪೂರ್ಣ, ರಾಕೇಶ್ ಮಲ್ಲಿ ಹಾಗೂ ನಿತೇಶ್ ರಿಯಲ್ ಎಸ್ಟೇಟ್ ಕಂಪನಿ ವಿರುದ್ಧ ದೂರು ದಾಖಲಿಸಲಾಗಿದೆ.
ಘಟನೆಯ ವಿವರ:
ಸಾಮಾನ್ಯವಾಗಿ ಯಾವತ್ತೂ ರಿಕ್ಕಿ ಕಾರು ಚಾಲನೆ ಮಾಡುತ್ತಿದ್ದರು. ಆದರೆ ಇಂದು ಮಾತ್ರ ಕಾರು ಚಾಲಕ ಬಸವರಾಜು ಡ್ರೈವಿಂಗ್ ಮಾಡುತ್ತಿದ್ದರು. ಗೇಟ್ ನಿಂದ ಹೊರಬರುತ್ತಿದ್ದಂತೆ ಏಕಾಏಕಿ ಗುಂಡು ಹಾರಿಸಲಾಗಿದೆ. ಆಗ ಬಸವರಾಜು ಮುಂದೆ ಬಾಗಿ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಗುಂಡು ಪಕ್ಕದಲ್ಲಿ ಕುಳಿತಿದ್ದ ರಿಕ್ಕಿಗೆ ತಗುಲಿದ್ದು, ಅವರ ಕೈ ಮತ್ತು ಮೂಗಿಗೆ ಗಂಭೀರ ಗಾಯಗಳಾಗಿವೆ.
ರೈ ಕುಟುಂಬದ ವಕೀಲ ನಾರಾಯಣಸ್ವಾಮಿ ಪ್ರತಿಕ್ರಿಯಿಸಿ ರಿಕ್ಕಿ ರೈಗೆ ಬೆದರಿಕೆ ಇತ್ತು, ಕೆಲವರ ಮೇಲೆ ಅನುಮಾನವಿದೆ. ಆಸ್ತಿ ವಿಚಾರವಾಗಿ ಗೊಂದಲ ಇತ್ತು. ಮುತ್ತಪ್ಪ ರೈ ಅವರ ಎರಡನೇ ಪತ್ನಿಗೆ ಸಂಬಂದಿಸಿದ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಉದ್ದೇಶಪೂರ್ವಕವಾಗಿಯೇ ಈ ದಾಳಿ ನಡೆದಿದೆ ಎಂದು ಹೇಳಿದ್ದಾರೆ. ಈ ದಾಳಿ ಹಿಂದೆ ಭೂಗತ ಲೋಕದ ಕೈವಾಡ ಇರುವ ಅನುಮಾಗಳು ವ್ಯಕ್ತವಾಗಿವೆ. ರಿಕ್ಕಿ ತಂದೆ ಮುತ್ತಪ್ಪ ರೈ ಅವರ ಮೇಲಿನ ದ್ವೇಷ, ರಿಕ್ಕಿ ಮೇಲಿನ ವೈಯಕ್ತಿಕ ದ್ವೇಷಕ್ಕೆ ದಾಳಿ ನಡೆದಿದೆ ಎನ್ನಲಾಗಿದೆ.
ರಾಮನಗರ ಎಸ್.ಪಿ ಶ್ರೀನಿವಾಸಗೌಡ ಮಾತನಾಡಿ ಆರೋಪಿಗಳ ಪತ್ತೆಗಾಗಿ 4 ವಿಶೇಷ ತಂಡಗಳನ್ನು ರಚಿಸಲಾಗಿದೆ. ಬಿಡದಿ ಇನ್ಸ್ ಪೆಕ್ಟರ್ ಶಂಕರ್ ಸ್ಥಳ ಪರಿಶೀಲನೆ ಮಾಡಿದ್ದಾರೆ. ಘಟನಾ ಸ್ಥಳದಲ್ಲಿ ಸಿಕ್ಕ ವಸ್ತುಗಳನ್ನು ಎಫ್ ಎಸ್ ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ. ರಿಕ್ಕಿ ರೈಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ರಿಕ್ಕಿ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಬೇಕಾಗಿದೆ. ಮೇಲ್ನೋಟಕ್ಕೆ ಒಂದು ಸುತ್ತು ಫೈರ್ ಆಗಿರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಮುತ್ತಪ್ಪ ರೈ ಸಾವಿನ ಬಳಿಕ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕಲಹವಿತ್ತು. ಮುತ್ತಪ್ಪ ರೈ ಅವರ ಮೊದಲ ಪತ್ನಿ, ಎರಡನೇ ಪತ್ನಿ ಮಕ್ಕಳ ನಡುವೆ ಆಸ್ತಿ ವಿಚಾರಕ್ಕೆ ಜಗಳವಿತ್ತು ಎಂದು ತಿಲೀದು ಬಂದಿದೆ.
ಬಿಡದಿಯಲ್ಲಿ ಮುತ್ತಪ್ಪ ರೈ ಸಂಬಂಧಿ ಪ್ರಕಾಶ್ ರೈ ಮಾಹಿತಿ ನೀಡಿ ಸೆಕ್ಯುರಿಟಿ ಗಾರ್ಡ್ ರಾತ್ರಿಯೇ ಮಾಹಿತಿ ನೀಡಿದ್ದರು. ಮುತ್ತಪ್ಪ ರೈ ಕುಟುಂಬದ ಮೇಲೆ ಕೆಲವರಿಗೆ ದ್ವೇಷ ಇದೆ. ಆಸ್ತಿ ವಿಚಾರಕ್ಕೂ ಸಂಬಂಧಿಸಿದಂತೆ ವಿವಾದಗಳಿವೆ. ಬೆಂಗಳೂರಿನಲ್ಲಿದ್ದಾಗ ರಿಕ್ಕಿ ಬಹುತೇಕ ಸಮಯವನ್ನು ಬಿಡದಿಯಲ್ಲಿ ಕಳೆಯುತ್ತಿದ್ದ. ಬೆಂಗಳೂರಿನ ಸದಾಶಿವ ನಗರದಲ್ಲೂ ಮನೆ ಇದ್ದು ಬಹುಶಃ ಅಲ್ಲಿಗೆ ಹೊರಟಿದ್ದಾಗ ಈ ದಾಳಿ ನಡೆದಿರಬಹುದು ಎಂದು ಶಂಕಿಸಿದ್ದಾರೆ.
ಮುತ್ತಪ್ಪ ರೈ ಬದುಕಿರುವಾಗಲೇ ರಿಕ್ಕಿ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದುಕೊಂಡಿದ್ದರು. ಎರಡನೇ ಪತ್ನಿ ವಿದೇಶದವರಾಗಿದ್ದು, ಅವರು ಮಗು ಜತೆ ಅವರ ದೇಶದಲ್ಲಿಯೇ ಉಳಿದುಕೊಂಡಿದ್ದಾರೆ. ರಿಕ್ಕಿಯೂ ಹೆಚ್ಚಿನ ಸಮಯವನ್ನು ಅಲ್ಲಿಯೇ ಕಳೆಯುತ್ತಿದ್ದರು.