ಕೂಡಲೇ ಸಕ್ಕರೆ MSP ಪರಿಷ್ಕರಣೆ, ಕಬ್ಬಿನ ಬೆಲೆ ನಿಗದಿ ಅಧಿಕಾರವನ್ನು ರಾಜ್ಯಗಳಿಗೆ ನೀಡುವಂತೆ ಪಿಎಂ ಮೋದಿಗೆ ಸಿಎಂ ಸಿದ್ದರಾಮಯ್ಯ ಮನವಿ

Most read

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿಯಲ್ಲಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಇಂದು ಸಂಜೆ ಭೇಟಿಯಾಗಿ ರಾಜ್ಯದ ಪ್ರಮುಖ ಐದು ಬೇಡಿಕೆಗಳನ್ನು ಕುರಿತು ಮನವಿಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಅವರು ಹಾಜರಿದ್ದರು.

ಸಕ್ಕರೆಯ ಕನಿಷ್ಠ ಬೆಂಬಲ ಬೆಲೆ (MSP) ಅನ್ನು ತಕ್ಷಣ ಪರಿಷ್ಕರಿಸಿದರೆ ಕಾರ್ಖಾನೆಗಳಲ್ಲಿ ಹಣದ ಹರಿವು ತಕ್ಷಣ ಸುಧಾರಿಸಿ, ಕೇಂದ್ರ ಅಥವಾ ರಾಜ್ಯದ ಸಹಾಯಧನದ ಅವಶ್ಯಕತೆ ಇಲ್ಲದೆ ರೈತರಿಗೆ ಅಗತ್ಯ ಬೆಲೆ ಪಾವತಿಸಲು ಸಾಧ್ಯವಾಗುತ್ತದೆ. ಕರ್ನಾಟಕದ ಸಕ್ಕರೆ ಆಧಾರಿತ ಡಿಸ್ಟಿಲರಿಗಳಿಂದ ಎಥನಾಲ್ ಖರೀದಿ ಮಂಜೂರಾತಿಯನ್ನು ಹೆಚ್ಚಿಸಿ ದೃಢಪಡಿಸುವಂತೆ ವಿನಂತಿಸುತ್ತೇವೆ. ಇದರಿಂದ ಕಾರ್ಖಾನೆಗಳಿಗೆ ಸ್ಥಿರ ಆದಾಯದ ಮೂಲ ಸಿಗುತ್ತದೆ. ರಾಜ್ಯಗಳಿಗೆ ಕಬ್ಬಿನ ಬೆಲೆಯನ್ನು ನಿಗದಿಪಡಿಸಲು ಅಥವಾ ಅನುಮೋದಿಸಲು ಅಧಿಕಾರ ನೀಡುವಂತಹ ಕೇಂದ್ರ ಅಧಿಸೂಚನೆಯನ್ನು ಹೊರಡಿಸಬೇಕು. ಇದರಿಂದ H&T ವೆಚ್ಚದ ಪಾರದರ್ಶಕತೆ ಸಾಧ್ಯವಾಗಿ, ರೈತರಿಗೆ FRP ಅಸಾಧ್ಯವಾಗದಂತೆ ನೋಡಿಕೊಳ್ಳಬಹುದು ಎಂಬ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಸಲ್ಲಿಸಿದರು.

ಮನವಿ ಪತ್ರದ ಸಾರಾಂಶ…

ಕರ್ನಾಟಕದ ಜನರ ಪರವಾಗಿ ನಿಮಗೆ ನನ್ನ ಹೃತ್ಪೂರ್ವಕ ವಂದನೆಗಳು. ರಾಜ್ಯದಲ್ಲಿ ನಡೆದ ಕೃಷಿಕರ ಆಂದೋಲನ ಕುರಿತು, ಈ ವಿಷಯಗಳನ್ನು ಚರ್ಚಿಸಲು ಸಮಯ ನೀಡುವಂತೆ ಕೋರಿ 06.11.2025 ಮತ್ತು 08.11.2025 ರಂದು ನಾನು ಬರೆದ ಪತ್ರಗಳನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಇಂದು ನಿಮ್ಮನ್ನು ಭೇಟಿಯಾಗಿ ಈ ವಿಷಯವನ್ನು ನೇರವಾಗಿ ಚರ್ಚಿಸಲು ಅವಕಾಶ ನೀಡಿದಕ್ಕಾಗಿ ನಿಮಗೆ ನಾನು ಕೃತಜ್ಞ.

ರಾಜ್ಯದಲ್ಲಿ ರೈತರ ಹೋರಾಟ ತೀವ್ರಗೊಂಡು ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಎದುರಾದಾಗ, ಅದರ ಮೂಲ ಕಾರಣವಾಗಿದ್ದ ಬೆಲೆ ಅಂತರದ ಸಮಸ್ಯೆಯನ್ನು ಪರಿಹರಿಸಲು ನಮ್ಮ ಸರ್ಕಾರವು ತಕ್ಷಣ ಕ್ರಮ ಕೈಗೊಳ್ಳಬೇಕಾಯಿತು.

2025ರ ನವೆಂಬರ್ 7ರಂದು ನಾನು ಸ್ವತಃ ರೈತ ನಾಯಕರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ನಿರಂತರವಾಗಿ ಸುದೀರ್ಘ ಸಭೆಗಳನ್ನು ನಡೆಸಿದ್ದೇನೆ ಎನ್ನುವ ವಿಚಾರವನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ. ಈ ಚರ್ಚೆಗಳ ನಂತರ, ಕಬ್ಬು ಬೆಳೆಗಾರರಿಗೆ ತುರ್ತು ಆರ್ಥಿಕ ನೆರವು ನೀಡಲು ಮತ್ತು ಹೆಚ್ಚಿನ ನಿವ್ವಳ ದರವನ್ನು ಖಚಿತಪಡಿಸಲು ಕರ್ನಾಟಕ ಸರ್ಕಾರವು (ಜಿ.ಒ. ಸಂಖ್ಯೆ: CI SGF 2025) ಆದೇಶವನ್ನು ಹೊರಡಿಸಿದೆ.

ನಮ್ಮ ಅಧಿಸೂಚನೆಯ ಪ್ರಕಾರ, ಕಾರ್ಖಾನೆಗಳು ಆರಂಭದಲ್ಲಿ ಒಪ್ಪಿಕೊಂಡಿದ್ದ ಬೆಲೆಯ ಮೇಲೆ ಪ್ರತಿ ಟನ್‌ಗೆ ಹೆಚ್ಚುವರಿ ₹100 ರೂ.ಗಳನ್ನು ದ್ವಿತೀಯ ಕಂತಾಗಿ ನೀಡುವುದು ಕಡ್ಡಾಯವಾಗಿದೆ. ಇದರ ಅನುಷ್ಠಾನವನ್ನು ಸಾಧ್ಯವಾಗಿಸಲು ರಾಜ್ಯ ಸರ್ಕಾರವು ಈ ಹೆಚ್ಚುವರಿ ಮೊತ್ತದ 50% (₹50 ಪ್ರತಿ ಟನ್‌ಗೆ) ಅನ್ನು ರಾಜ್ಯದ ಖಜಾನೆಯಿಂದ ಭರಿಸುವುದಾಗಿ ಮತ್ತು ಪ್ರತಿ ಟನ್‌ಗೆ ಉಳಿದ ₹50 ಅನ್ನು ಕಾರ್ಖಾನೆಗಳು ಭರಿಸಬೇಕೆಂದು ನಿರ್ಧರಿಸಲಾಗಿದೆ.

ಈ ಕ್ರಮವು 10.25% ರಿಕವರಿ ಮೇಲೆ ಟನ್‌ಗೆ ₹3,200 ಮತ್ತು 11.25% ರಿಕವರಿ ದರದ ಮೇಲೆ ಟನ್‌ಗೆ ₹3,300 ನಿವ್ವಳ ಬೆಲೆಯನ್ನು (ಕಟಾವು ಮತ್ತು ಸಾಗಾಟ ವೆಚ್ಚ ಹೊರತುಪಡಿಸಿ) ದೃಢಪಡಿಸುತ್ತದೆ. ರಾಜ್ಯದ ಅನುದಾನ ಬಳಸಿಕೊಂಡ ಈ ನಿರ್ಣಾಯಕ ಕ್ರಮವು ಎದುರಾದ ಸಂಕಷ್ಟವನ್ನು ತಾತ್ಕಾಲಿಕವಾಗಿ ನಿವಾರಿಸಿದ್ದು, ಸದ್ಯಕ್ಕೆ ಪ್ರತಿಭಟನೆಗಳನ್ನು ನಿಲ್ಲಿಸಿದೆ.

ಆದಾಗ್ಯೂ, ನಮ್ಮ ಸರ್ಕಾರದ ಆದೇಶವು ಅತ್ಯಗತ್ಯ ಪರಿಹಾರ ಒದಗಿಸಿದರೂ ಅದು ಬೆಲೆ ಅಂತರವನ್ನು ಸಂಪೂರ್ಣವಾಗಿ ನಿವಾರಿಸಿಲ್ಲ. ಯಾಕೆಂದರೆ ಸಕ್ಕರೆಯ ಕನಿಷ್ಠ ಬೆಂಬಲ ಬೆಲೆ (MSP) ಪ್ರತಿ ಕೆ.ಜಿಗೆ ₹31 ರಲ್ಲಿ ಸ್ಥಗಿತಗೊಂಡಿರುವುದೇ ಸಕ್ಕರೆ ಕಾರ್ಖಾನೆಗಳು ಈ ನಿಗದಿತ ಬೆಲೆಯನ್ನು ರೈತರಿಗೆ ನೀಡಲು ಸಾಧ್ಯವಾಗದಿರಲು ಕಾರಣ.

ಈ ಹಿನ್ನೆಲೆಯಲ್ಲಿ, ಕೆಳಗಿನ ನಮ್ಮ ಮೂಲ ಬೇಡಿಕೆಗಳನ್ನು ಮತ್ತೊಮ್ಮೆ ತುರ್ತಾಗಿ ಒತ್ತಿ ಹೇಳಬೇಕಾಗಿದೆ. ಇವುಗಳೇ ಈ ಸಂಕಷ್ಟಕ್ಕೆ ಶಾಶ್ವತ ಮತ್ತು ಸಮರ್ಥ ಪರಿಹಾರವಾಗಿವೆ:

ಸಕ್ಕರೆ ಕನಿಷ್ಠ ಬೆಂಬಲ ಬೆಲೆ (MSP) ಪರಿಷ್ಕರಣೆ: ಸಕ್ಕರೆಯ ಎಂಎಸ್‌ಪಿ ಅನ್ನು ತಕ್ಷಣ ಪರಿಷ್ಕರಿಸುವುದು ಈ ಸಂಕಷ್ಟಕ್ಕೆ ಅತ್ಯಂತ ಪರಿಣಾಮಕಾರಿ ಪರಿಹಾರ. ಇದರಿಂದ ಕಾರ್ಖಾನೆಗಳಲ್ಲಿ ಹಣದ ಹರಿವು ತಕ್ಷಣ ಸುಧಾರಿಸಿ, ಕೇಂದ್ರ ಅಥವಾ ರಾಜ್ಯದ ಸಹಾಯಧನದ ಅವಶ್ಯಕತೆ ಇಲ್ಲದೆ ರೈತರಿಗೆ ಅಗತ್ಯ ಬೆಲೆ ಪಾವತಿಸಲು ಸಾಧ್ಯವಾಗುತ್ತದೆ.

ಎಥನಾಲ್ ಖರೀದಿಯ ಖಚಿತತೆ: ಕರ್ನಾಟಕದ ಸಕ್ಕರೆ ಆಧಾರಿತ ಡಿಸ್ಟಿಲರಿಗಳಿಂದ ಎಥನಾಲ್ ಖರೀದಿ ಮಂಜೂರಾತಿಯನ್ನು ಹೆಚ್ಚಿಸಿ ದೃಢಪಡಿಸುವಂತೆ ವಿನಂತಿಸುತ್ತೇವೆ. ಇದರಿಂದ ಕಾರ್ಖಾನೆಗಳಿಗೆ ಸ್ಥಿರ ಆದಾಯದ ಮೂಲ ಸಿಗುತ್ತದೆ.

ಕಟಾವು ಮತ್ತು ಸಾಗಾಟ ವೆಚ್ಚದ ಅಧಿಸೂಚನೆ: ರಾಜ್ಯಗಳಿಗೆ ಕಬ್ಬಿನ ಬೆಲೆಯನ್ನು ನಿಗದಿಪಡಿಸಲು ಅಥವಾ ಅನುಮೋದಿಸಲು ಅಧಿಕಾರ ನೀಡುವಂತಹ ಕೇಂದ್ರ ಅಧಿಸೂಚನೆಯನ್ನು ಹೊರಡಿಸುವಂತೆ ವಿನಂತಿಸುತ್ತೇನೆ. ಇದರಿಂದ H&T ವೆಚ್ಚದ ಪಾರದರ್ಶಕತೆ ಸಾಧ್ಯವಾಗಿ, ರೈತರಿಗೆ FRP ಅಸಾಧ್ಯವಾಗದಂತೆ ನೋಡಿಕೊಳ್ಳಬಹುದು.

ನಮ್ಮ ಸರ್ಕಾರವು ಸದುದ್ದೇಶದಿಂದ, ತನ್ನ ಸ್ವಂತ ಸಂಪನ್ಮೂಲಗಳನ್ನು ಬಳಸಿ ತುರ್ತು ಪರಿಹಾರ ಒದಗಿಸಿದೆ. ಈಗ ಈ ವಿಷಯಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ, ಮೇಲಿನ ಅತ್ಯಂತ ಮಹತ್ವದ ವಿಷಯಗಳನ್ನು ಪರಿಹರಿಸಲು ನಿಮ್ಮ ಹಸ್ತಕ್ಷೇಪವನ್ನು ನಾನು ವಿಶ್ವಾಸದಿಂದ ನಿರೀಕ್ಷಿಸುತ್ತೇನೆ. ನಿಮ್ಮ ಘನ ಹಸ್ತಕ್ಷೇಪವು ನಮ್ಮ ಕೃಷಿಕ ಸಮುದಾಯಕ್ಕೆ ಶಾಶ್ವತ, ಸ್ಥಿರ ಮತ್ತು ನ್ಯಾಯಸಮ್ಮತ ಪರಿಹಾರ ಒದಗಿಸುವುದರಲ್ಲಿ ಅನುಮಾನವಿಲ್ಲ ಎಂದು ನಂಬಿದ್ದೇನೆ ಎಂದು ಹೇಳಿದ್ದಾರೆ.

More articles

Latest article