ಬೆಂಗಳೂರು: ರಾಜ್ಯದಲ್ಲಿ ತಾಯಿ ಮತ್ತು ನವಜಾತ ಶಿಶುಗಳ ಮರಣ ಪ್ರಮಾಣವನ್ನು ಗಣನೀಯವಾಗಿ ಇಳಿಸಲು ಆರೋಗ್ಯ ಇಲಾಖೆಯ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ತ್ರಿವಳಿ ತಜ್ಞರ ಹುದ್ದೆಗಳನ್ನು ಕ್ರಮಬದ್ಧಗೊಳಿಸಲು ತೀರ್ಮಾನಿಸಲಾಗಿದೆ.
ಈ ಕುರಿತು ನಗರದ ವಿಕಾಸ ಸೌಧದಲ್ಲಿ ಇಲಾಖೆಯ ಸಭೆ ನಡೆಸಿ ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ 2024ರ (335 ಸಾವು) ಮರಣ ಸೂಚ್ಯಂಕಕ್ಕೆ ಹೋಲಿಸಿದರೆ 2025ರ ಅಕ್ಟೋಬರ್ ತನಕ (264 ಸಾವು) ಸಾವುಗಳ ಪ್ರಮಾಣ 24% ಇಳಿಕೆಯಾಗಿದೆ. ಆದರೆ, ಈ ಪ್ರಮಾಣವನ್ನು “0” ಸೊನ್ನೆಗೆ ಇಳಿಸಬೇಕೆಂಬ ಉದ್ದೇಶ-ಗುರಿಯನ್ನು ಹೊಂದಲಾಗಿದೆ.
ಈಗಾಗಲೇ ರಾಜ್ಯದಲ್ಲಿ 89 ತಾಯಿ ಮಕ್ಕಳ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ವರ್ಷಗಳಲ್ಲಿ 100ರ ಗಡಿ ದಾಟುವಂತೆ ಯೋಜಿಸಲಾಗಿದ್ದು, ಪ್ರತಿ ತಾಲೂಕಿನಲ್ಲೂ ಪ್ರತ್ಯೇಕ ತಾಯಿ-ಮಕ್ಕಳ ಆಸ್ಪತ್ರೆಗಳಾಗುತ್ತವೆ. ಆದರೆ, ಅದಕ್ಕೆ ಪೂರಕವಾಗಿ ಮತ್ತು ಪೂರ್ವಭಾವಿಯಾಗಿ ಕೆಲವು ಬದಲಾವಣೆ ಮಾಡುತ್ತಿದ್ದೇವೆ.
ಪ್ರಮುಖ ತೀರ್ಮಾನಗಳು:
* ತಾಯಿ-ಮಕ್ಕಳ ಆಸ್ಪತ್ರೆಯಿರುವ ತಾಲೂಕು ಆಸ್ಪತ್ರೆಗಳಲ್ಲಿ ಒಬ್ಬರು ರೇಡಿಯೋಲಜಿಸ್ಟ್, ಇಬ್ಬರು ಪ್ರಸೂತಿ ತಜ್ಞರು, ಇಬ್ಬರು ಅರವಳಿಕೆ ತಜ್ಞರು 24*7 ಲಭ್ಯವಾಗುವಂತೆ ಕಾರ್ಯನಿರ್ವಹಿಸಲು ನಿಯೋಜಿಸಲಾಗುತ್ತದೆ.
* ಕಡ್ಡಾಯ ವೈದ್ಯಕೀಯ ಸೇವಾ ಯೋಜನೆಯಡಿಯಲ್ಲಿ ಸುಧಾರಿತ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಮತ್ತು ತೊಡಕುಗಳನ್ನು ನಿರ್ವಹಿಸಲು 125 ಸೂಪರ್ ಸ್ಪೇಷಲಿಸ್ಟ್ ಹುದ್ದೆಗಳನ್ನು ರೂಪಿಸಿ ಅರ್ಹ ವೈದ್ಯರನ್ನು ನೇಮಕ ಮಾಡಲಾಗುತ್ತದೆ.
* ಹೆಚ್ಚುವರಿಯಾಗಿ 104 ರೇಡಿಯಾಲಜಿಸ್ಟ್ ಗಳನ್ನು ಮತ್ತು 23 ವೈದ್ಯರ ಹುದ್ದೆಗಳನ್ನು ಸೃಜಿಸಲಾಗಿದೆ.
ನಿರೀಕ್ಷಿತ ಪರಿಣಾಮ:
* ಎಲ್ಲಾ ಜಿಲ್ಲೆಗಳಲ್ಲಿ ತುರ್ತು ಪ್ರಸೂತಿ ಮತ್ತು ನವಜಾತ ಶಿಶು ಆರೈಕೆಗಾಗಿ 24×7 ತಜ್ಞರ ಲಭ್ಯತೆ.
* ಸಕಾಲಿಕ ಮತ್ತು ಸಂಘಟಿತ ಆರೈಕೆಯ ಮೂಲಕ ತಾಯಿ ಮತ್ತು ಶಿಶು ಮರಣಗಳಲ್ಲಿ ಕಡಿತ.
* ಸರ್ಕಾರಿ ಆಸ್ಪತ್ರೆಗಳಲ್ಲಿ ಸುಧಾರಿತ ಮಾದರಿಯಲ್ಲಿ ಹೆರಿಗೆ ಮತ್ತು ಸಾರ್ವಜನಿಕರ ನಂಬಿಕೆ ಗಳಿಸಲು ಸಾಧ್ಯ.
* ಉತ್ತಮ ಆರೋಗ್ಯ ವ್ಯವಸ್ಥೆಗಾಗಿ ಮಾನವ ಸಂಪನ್ಮೂಲಗಳ ಸಮಾನವಾದ ಹಂಚಿಕೆ.
* NHM ಮಾನದಂಡಗಳ ಅಡಿಯಲ್ಲಿ ಹೆಚ್ಚಿನ ಆಸ್ಪತ್ರೆಗಳು ಇದರಿಂದಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ (MCH) ಯ ಮಾನದಂಡಗಳನ್ನು ಹೊಂದಲು ಅವಕಾಶ ಕಲ್ಪಿಸುತ್ತದೆ.

