ಬೆಂಗಳೂರು: ನಾನು ಚಿಕ್ಕ ವಯಸ್ಸಿನಲ್ಲೇ ಸಚಿವನಾದರೂ ಸಿಗದ ಖುಷಿ, ಎಂ.ಎ ಗ್ರ್ಯಾಜುಯೇಟ್ ಆದಾಗ ಸಿಕ್ಕಿತ್ತು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಗರದ ಸೆಂಟ್ರಲ್ ಕಾಲೇಜು ಕ್ಯಾಂಪಸ್ ನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನೂತನವಾಗಿ ನೇಮಕವಾಗಿರುವ ಸಹಾಯಕ ಪ್ರಾಧ್ಯಾಪಕರಿಗೆ ಆಯೋಜಿಸಿದ್ದ ‘ಹೊಸ ಹಾದಿ- ಒಂದು ದಿನದ ವೃತ್ತಿ ಮಾರ್ಗದರ್ಶನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದ ಬಹುಮುಖ್ಯ ನಾಲ್ಕು ಪಿಲ್ಲರ್ ಗಳಲ್ಲಿ ಶಿಕ್ಷಕರೂ ಒಬ್ಬರು. ಸಮಾಜದ ಭವಿಷ್ಯದ ನಾಗರಿಕರನ್ನು ರೂಪಿಸುವ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದೀರಿ. ನಮ್ಮ ಸರ್ಕಾರ ಯಾವ ಲಂಚ ಪಡೆಯದೇ, ಯಾರ ಶಿಫಾರಸು ಇಲ್ಲದೇ ನಿಮಗೆಲ್ಲಾ ನೇಮಕಾತಿ ಆದೇಶ ನೀಡಿದೆ. ಭಕ್ತನಿಗೂ ಭಗವಂತನಿಗೂ ಇರುವಂತಹ ಸಂಬಂಧ ಶಿಕ್ಷಕ ವಿದ್ಯಾರ್ಥಿಗಳ ನಡುವೆಯೂ ಇರಬೇಕು. ವಿದ್ಯಾರ್ಥಿಗಳಿಗೆ ಪಾಸಿಟಿವ್ ಯೋಚನೆಗಳನ್ನು ನೀಡಿ. ಅವರ ಕನಸಿನ ನಾಯಕರಾಗಬೇಕು. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಹೇಳಿ, ಗ್ರಾಮೀಣ ಭಾಗದವರೆ ಉನ್ನತ ಹುದ್ದೆಗಳನ್ನು ಏರಿದ್ದಾರೆ. ಇನ್ನೂ ಹಲವರನ್ನು ರೂಪಿಸುವ ಜವಾಬ್ದಾರಿಯುತ ಸ್ಥಾನದಲ್ಲಿದ್ದೀರಿ. ಧನಾತ್ಮಕವಾದ ಯೋಜನೆಗಳನ್ನು ಇಟ್ಟುಕೊಂಡು ಕೆಲಸ ಮಾಡಿ ಎಂದು ಕಿವಿಮಾತುಗಳನ್ನು ಹೇಳಿದರು.
ಕಾರ್ಯಾಗಾರದ ಘನ ಉಪಸ್ಥಿತಿ ವಹಿಸಿದ್ದ ಉನ್ನತ ಶಿಕ್ಷಣ ಸಚಿವ ಎಂ. ಸಿ. ಸುಧಾಕರ್ ಮಾತನಾಡಿ, 2021ರಲ್ಲಿ ಆರಂಭವಾದ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗಿದ್ದ ಹಲವು ಸಮಸ್ಯೆಗಳನ್ನು ನಮ್ಮ ಸರ್ಕಾರ ಬಗೆಹರಿಸಿ, ತ್ವರಿತವಾಗಿ ಆದೇಶ ನೀಡಿದೆ ಎಂದರು.
ವಿಶೇಷ ವರ್ಗಾವಣೆ, ಹೈದರಾಬಾದ್ ಕರ್ನಾಟಕದ ಮೀಸಲಾತಿ ಹಂಚಿಕೆಯ ದಾವೆ ಹಾಗೂ ಕೆಲವು ವಿಷಯಗಳಲ್ಲಿನ ನ್ಯಾಯಾಲಯದ ದಾವೆಗಳಿಂದ ತಾತ್ಕಾಲಿಕ ತಡೆ ಇಂತಹ, ಕಾಲೇಜು ಶಿಕ್ಷಣ ಇಲಾಖೆಯಲ್ಲಿನ ಒಂದೊಂದು ಸಮಸ್ಯೆಗಳಿಗೂ ಪರಿಹಾರ ಕಂಡುಕೊಂಡಿದ್ದೆವೆ. ಇಲಾಖೆಯಲ್ಲಿ ಕೌಶಲ್ಯಕ್ಕೆ ಮನ್ನಣೆ ನೀಡುವಂತಹ ಹೊಸ ನಾಲ್ಕು ಪದವಿ ಕೋರ್ಸ್ ಗಳನ್ನು ಪ್ರಾರಂಭಿಸಲಾಗಿದೆ. ನಿರುದ್ಯೋಗಿಗಳ ಕಷ್ಟ ಅರಿತಿರುವುದರಿಂದ ಮುಂದಿನ ದಿನಗಳಲ್ಲಿ 5000 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಇಂಗ್ಲೆಂಡ್ ನ ಯಾವುದೇ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುವಂತಹ ಐದು ವಿದ್ಯಾರ್ಥಿನಿಯರಿಗೆ ಒಂದು ವರ್ಷದ ವರೆಗಿನ ಶಿಷ್ಯವೇತನ ನೀಡಲಾಗುವ ಒಡಂಬಡಿಕೆಯೂ ಆಗಿದೆ ಎಂಬ ಮಾಹಿತಿ ನೀಡಿದರು. ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತೆ ಮಂಜುಶ್ರೀ ಸ್ವಾಗತಿಸಿದರು. ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಕರ್ ಮತ್ತಿತರರಿದ್ದರು.