ಅಮ್ಮ ಮತ್ತು ಆಕೆಯ ಗೆಳತಿಯರು

Most read

“ಹಳ್ಳಿಯ ಹೆಣ್ಣುಮಕ್ಕಳು ಸ್ವತಃ ತಾವೇ ಪಿತೃಪ್ರಧಾನ ವ್ಯವಸ್ಥೆಯ ದೌರ್ಜನ್ಯಗಳನ್ನು ಒಪ್ಪಿಕೊಳ್ಳುತ್ತಾರೆ ಮತ್ತು ಸತಿಧರ್ಮವೇ ಶ್ರೇಷ್ಟವೆಂದು ಬದುಕುತ್ತಿರುತ್ತಾರೆ, ಸಮಾನತೆಯ ಕಲ್ಪನೆ ಇವರಿಗಿರುವುದಿಲ್ಲ ಎಂಬಂತಹ ಹುರುಳಿರದ ತಿಳುವಳಿಕೆಗಳನ್ನು ನಾವು ದೂರಮಾಡಿಕೊಳ್ಳಬೇಕಾಗಿದೆ- ದಿವ್ಯಶ್ರೀ ಅದರಂತೆ, ಯುವ ಲೇಖಕಿ.

ಮೊನ್ನೆ ಕಾಲೇಜಿನ ಘಟಿಕೋತ್ಸವಕ್ಕೆ ಬಂದ ಅಮ್ಮ ಜೊತೆಗೆ ತನ್ನ ಗೆಳತಿಯನ್ನು ಕರೆತಂದಿದ್ದಳು. ಯಾವತ್ತೂ ಸುತ್ತ ಮುತ್ತಲ ಹದಿನೈದು ಕಿಲೋ ಮೀಟರ್ ದೂರದ ಊರುಗಳನ್ನೆ ಸುತ್ತಿ ಬರುತ್ತಿದ್ದವರು ಹೀಗೆ ನಸುಕಿನ ಮುಂಜಾವಿನಲ್ಲಿ ನಾನೂರು ಕಿಲೋಮೀಟರ್ ದೂರದ ಮಹಾನಗರಿ ಬೆಂಗಳೂರಿಗೆ ಬಂದಿಳಿದ ಸಲುವಾಗಿ ಸಹಜ ಮಂದಹಾಸ ಇಬ್ಬರ ಮುಖದಲ್ಲೂ ಇತ್ತು.

ಮೆಜೆಸ್ಟಿಕ್ ನಿಂದ ರೂಮಿನವರೆಗೂ ಬರುವ ಹಾದಿಯಲ್ಲಿದ್ದ ಗಗನಚುಂಬಿ ಕಟ್ಟಡಗಳು ಎಲ್ಲಿಲ್ಲದ ಸೋಜಿಗವನ್ನ ಉಂಟುಮಾಡಿದ್ದವು. ನಸುಕಿನ ನಾಲ್ಕು ಗಂಟೆಗೆ ಎದ್ದು ತನ್ನ ಚಟುವಟಿಕೆಯಲ್ಲಿ ನಿರತವಾಗಿದ್ದ ಬೆಂಗಳೂರಿನ ಕುರಿತು, “ಈ ಬೆಂಗಳೂರಿನ ಜನಕ್ಕೆ ನಿದ್ದಿಲ್ಲ, ಬುದ್ದಿಲ್ಲ. ಎಸ್ಟೋತ್ತಿಗೋ ಮಲಗ್ತಾರೆ, ಯಾವಗ್ಲೋ ಏಳ್ತಾರೆ, ನಮ್ ಹಳ್ಳಿ ಜೀವ್ನನೇ ಪಾಡು, ಮೈತುಂಬಾ ಕೆಲಸ ಮಾಡಿ, ಕಣ್ತುಂಬ ನಿದ್ದೆ ಮಾಡ್ತೀವಿ” ಅಂತ ಅಮ್ಮಂದಿರು ಮಾತಾಡಿಕೊಳ್ಳುವಾಗ ಅವರ ಬದುಕಿನ ಬಗೆಗಿನ ಜೀವನ ಪ್ರೀತಿ ನನ್ನ ಕಣ್ಣಮುಂದಿತ್ತು.

ತಿಂಡಿ ತಿಂದು ರೆಡಿಯಾಗಿ ಕಾಲೇಜಿಗೆ ಹೋದಾಗಲಂತೂ ಅವರಿಗೆ ಒಂದಲ್ಲ ಹತ್ತು ಹಲವು ಅಚ್ಚರಿಗಳು. ನನ್ನ ಗೆಳತಿಯರು ಮತ್ತು ಪ್ರೊಫೆಸರ್ ಗಳು ತಮಗೆ ಬರುತ್ತಿದ್ದ ಹರಕು ಮುರುಕು ಕನ್ನಡದಲ್ಲಿ ಅಮ್ಮನನ್ನ ನಗುನಗುತ್ತಾ  ಮಾತಾನಾಡಿಸುವಾಗಲಂತೂ, ಅಮ್ಮ, ತಾನು ಎಂದೂ ಕಾಣದ ಇನ್ನೊಂದು ಮನುಕುಲದ ಜಗತ್ತಿಗೆ ಬಂದು ಪ್ರೀತಿ ಉಂಡ ಅನುಭವ ಅನುಭವಿಸುತ್ತಿದ್ದಳು.

ಕಾಲೇಜಿನಲ್ಲಿ ಹುಡುಗ ಹುಡುಗಿಯರು ಭೇದಭಾವವಿಲ್ಲದೆ ಬೆರೆಯುತ್ತಿದ್ದ ಪರಿ, ಅವರು ಮಾತನಾಡುತ್ತಿದ್ದ ಇಂಗ್ಲಿಷ್ ಭಾಷೆ, ಉಡುಗೆ ತೊಡುಗೆ ಮತ್ತು ನಾರ್ಥ್ ಈಸ್ಟ್ ಹುಡುಗಿಯರ ಮುಗ್ಧ ನಗುವಿನಲ್ಲಿ ಅಮ್ಮ ಕಳೆದು ಹೋದದ್ದಂತೂ ಅಕ್ಷರಶಃ ಸತ್ಯ.

ಅವತ್ತು ಸಂಜೆಯಿಂದ ರಾತ್ರಿಯವರೆಗೂ ಅಮ್ಮನ ಫೋನಿಗೆ ಸಾಲು ಸಾಲಾಗಿ ಬರುತ್ತಿದ್ದ ಫೋನ್ ಕಾಲ್ ಗಳು ಮಾತ್ರ ನನ್ನನ್ನು ಅಚ್ಚರಿಗೊಳಿಸಿದವು. ದಿನಕ್ಕೆ ಒಂದೋ ಎರಡೋ ಸಲ ಫೋನಿನಲ್ಲಿ ಮಾತಾಡುವ ನಂಗೆ, ಅಮ್ಮ  ಮತ್ತು  ಅಮ್ಮನ ಜೊತೆಗಿದ್ದ ಆಂಟಿ ಹೀಗೆ ಫೋನಿನಲ್ಲಿ ಬರಪೂರ ನಗುನಗುತ್ತಾ ಮಾತಾಡುವುದು ನಿಜಕ್ಕು ನಂಗೆ ಹೊಟ್ಟೆಕಿಚ್ಚು ತರಿಸಿತ್ತು.

ಲೇಖಕಿ ತನ್ನ ಅಮ್ಮನೊಂದಿಗೆ

ಕೊನೆಗೂ ಸಹಿಸಲಾಗದೇ ಕೇಳಿಯೇಬಿಟ್ಟೆ. ಅಷ್ಟಕ್ಕೂ ಅಮ್ಮನಿಗೆ ಫೋನ್ ಮಾಡುತ್ತಿದ್ದದ್ದು ಯಾರು ಗೊತ್ತಾ ?

ಅಮ್ಮನ ಮಾತಿನಲ್ಲೆ ಹೇಳಬೇಕೆಂದರೆ ಅದು, ಅಮ್ಮನ ಫ್ರೆಂಡ್ಸ್!!!!!

ಐದನೇ ಕ್ಲಾಸಿಗೆ ಓದುಬಿಟ್ಟು ಹೈಸ್ಕೂಲ್, ಕಾಲೇಜಿನ ಮೆಟ್ಟಿಲು ಹತ್ತದ ಅಮ್ಮನಿಗೆ ಫ್ರೆಂಡ್ಸ್ ಸಿಕ್ಕಿದ್ದಾದರೂ ಎಲ್ಲಿ?

ಹೌದು ಅಮ್ಮನಿಗೆ ನನಗಿಂತಲೂ ಹೆಚ್ಚು ಜನ ಫ್ರೆಂಡ್ಸ್ ಇದ್ದಾರೆ. ಅವರೆಲ್ಲರೂ ವಯಸ್ಸಿನ ಅಂತರವಿಲ್ಲದೇ ಜೊತೆಯಾದ ಗೆಳತಿಯರು. ಎಲ್ಲರೂ ಜೊತೆಯಾಗುವುದು ಗದ್ದೆ ನಾಟಿಮಾಡುವಾಗ, ಗದ್ದೆ ಕೊಯ್ಯುವಾಗ, ಒಕ್ಕಲು ಮಾಡುವಾಗ, ಅಡಿಕೆ ಸುಲಿಯುವಾಗ ಮತ್ತು ಉದ್ಯೋಗ ಖಾತ್ರಿ ಕೆಲಸಗಳಲ್ಲಿ!!!!!

ಅಮ್ಮ ಬೆಂಗಳೂರಿಗೆ ಬಂದ ವಿಚಾರ ಅವರಿಗೂ ತಿಳಿದಿತ್ತು! ಅಷ್ಟಕ್ಕೂ ಅವರು ಫೋನ್ ಮಾಡುತ್ತಿದ್ದದ್ದೂ ಅಮ್ಮಂದಿರ ಯೋಗಕ್ಷೆಮ ವಿಚಾರಿಸಿಕೊಳ್ಳಲು !

 “ಅಕ್ಕಾ, ಚನಾಗ್ ಹೋದ್ರಾ ಬೆಂಗಳೂರಿಗೆ? ಮಗಳು ಓದೋ ಕಾಲೇಜು ಹೆಂಗೈತಿ? ಪೋಗ್ರಾಮ್ ಚನಾಗಾತಾ? ಅಂತ ಒಬ್ಬ ಕಿರಿಯ ಗೆಳತಿ ಕೇಳಿದ್ರೆ,

“ಅಪ್ಪೀ‌, ನೀವಿಬ್ರೂ ಬೆಂಗಳೂರು ಹೋಗಿ, ಊರಾಗಿರೋ ನಮ್ನಲ್ಲಾ ಮರೆತು ಬಿಟ್ಟಿರನೇ” ಅಂತ ಇನ್ನೊಬ್ಬ ಹಿರಿಯ ಗೆಳತಿಯ ಫೋನ್,

“ಬೆಂಗಳೂರು ಹೋಗಿ ಸುಮ್ಮನೇ ರೂಮಗೇ ಕುತ್ಕುಂದು ವಾಪಸ್ ಬಂದುಬಿಟ್ಟಿರ, ಒಂದ್ ನಾಕು ದಿನ ಇದ್ದು ಅಲ್ಲಿ ಇಲ್ಲಿ ಸುತ್ತಾಡಿಕಿಂದು ಬರ್ರಿ ಗದ್ದೆ, ತೋಟ, ಕಳೆ ತೆಗಿಯದು, ಅಡಿಗೆ ಮಾಡದು, ಕೊಟ್ಟಿಗೆ ಸಗಣಿ ತಗಿಯದು ದಿನಾ ಇದ್ದುದ್ದೆ” ಅಂತ ಮತ್ತೊಬ್ಬ ಗೆಳತಿಯ ಫೋನ್!

“ಮನ್ಯಗೆ, ಎನೋ ದೊಡ್ಡ್ ಮನ್ಸು ಮಾಡಿ ಕಳಿಸ್ಯಾರೆ, ಮತ್ತೆ ಹಿಂಗ್ ಹೋಗದು ಮುಂದಿನ್ ಜನ್ಮದಾಗೆ ಎನೋ, ಹೋಗದ್ ಹೋಗಿರಿ, ನಾಕ್ ದಿನ ಅರಾಮಾಗಿ ಇದ್ದು ಮೈ ಕೈ ಹಗುರ ಮಾಡ್ಕಿಂದು ಬನ್ನಿ ಅನ್ನೊ ಮಗದೊಂದು ಮಾತು!

“ಅಲ್ರೇ ನೀವಿಬ್ರೆ ಮಾತಾಡ್ಕಿಂದು ಬೆಂಗ್ಳೂರ್ ಹೋಗಿಬಿಟ್ಟಿರಾ, ಕರುದ್ದುದ್ರೆ ನಾವು ಬರ್ತಿದ್ವಪ್ಪಾ ” ಅಂತ ಊರಿನ ಇನ್ನೊಂದು ಮಗ್ಗುಲಲ್ಲಿ ಇರುವ ಗೆಳತಿಯ ಫೋನು!

ಹಿಂಗೆ ಬಿಡುವಿಲ್ಲದ ಫೋನ್ ಕಾಲ್ ಗಳನ್ನ ಕೇಳಿದ ಮೇಲೆ ಬದುಕಿನ ಬಗ್ಗೆ ಇಷ್ಟು ಜೀವಂತಿಕೆ ಇಟ್ಟುಕೊಂಡ ಹಳ್ಳಿ ಹೆಣ್ಣುಮಕ್ಕಳ ಭಾವನೆಗಳನ್ನು ಅದೆಷ್ಟು ಸಲೀಸಾಗಿ ನಿರಾಕರಿಸಿ ಬಿಡುತ್ತೇವಲ್ಲ ಅಂತ ನನಗೆ ಒಮ್ಮೆ ನಾಚಿಕೆಯಾದದ್ದಂತೂ ನಿಜ.

ನಾನು ಸಣ್ಣವಳಿದ್ದಾಗ, ಹತ್ತು ವರ್ಷದ ಹಿಂದೆ, ಗದ್ದೆ  ನಾಟಿಗೊ ಅಥವಾ ಗದ್ದೆಕೊಯ್ಯಲೋ ಮೈ ಆಳು ಹುಡುಕಲು ಅಮ್ಮ  ನನ್ನನ್ನೂ ಕರೆದುಕೊಂಡು ಹೋಗುತ್ತಿದ್ದಳು. ಹಳ್ಳಿಯಲ್ಲಿ ಹೆಂಗಸರು ಮನೆಯಲ್ಲಿ ಸಿಗುವುದು ಸೂರ್ಯ ಮುಳುಗಿದ ನಂತರವೇ. ಹಾಗಾಗಿ ಆಳು ಹುಡುಕಿಕೊಂಡು ಹೋಗುವುದು ಸಹ ಸಂಜೆಯ ಹೊತ್ತಿಗೆ. ಕೆಲವೊಮ್ಮೆ ಸುರಿವ ಮಳೆಯಲ್ಲಿ  ಒಂದೇ ಛತ್ರಿಯ ಕೆಳಗೆ, ಗುಂಡಿ ಬಿದ್ದ  ರೋಡುಗಳಲ್ಲಿ  ಮನೆಮನೆಗೂ ಹೋಗಿ ಮೈ ಆಳು ಕೇಳಿಕೊಂಡು ಹತ್ತು ಹದಿನೈದು ಜನರನ್ನ  ಹೊಂದಿಸಿಕೊಂಡು ಬರುವುದು ಹೆಂಗಸರ ಪಾಲಿಗೆ ಅಷ್ಟು  ಸುಲಭದ ಮಾತಲ್ಲ. ಒಮ್ಮೊಮ್ಮೆ  ತೀರಾ ದೂರವಿರುವ ಮನೆಗಳಿಗೂ ಹೋಗಿ ಬರುವುದು ನಿಜಕ್ಕು  ಸವಾಲಿನ ವಿಷಯವಾಗಿತ್ತು.

ಈಗ ನನ್ನೂರಿನಲ್ಲಿ ಪರಿಸ್ಥಿತಿ ಬದಲಾಗಿದೆ, ಊರಿನ ಹೆಂಗಸರು ಮೊಬೈಲ್ ಬಳಕೆ ಶುರುಮಾಡಿದ್ದಾರೆ!!!. ತಮಗೆ ಯಾವಾಗ ಬೇಕೋ ಆಗ ಫೋನ್ ಮಾಡಿ “ನಾಳೆ ನಮ್ಮನಿಗೆ ಮೈ ಆಳು ಬರ್ತಿಯಾ” ಅಂತ ಕೇಳಿಕೊಂಡು, ತಾವೇ ದಿನಾಂಕ ನಿಗದಿ ಮಾಡಿಕೊಂಡು, ಇಂತವರ ಮನೆಯಲ್ಲಿ ಇಂತ ದಿನ ನಟ್ಟಿ  ಇಡ್ಕೋಳೊಣ” ಅಂತ ಒಂದೆರಡು ನಿಮಿಷದಲ್ಲಿ ಮಾತಾಡಿಕೊಳ್ಳುವುದರಿಂದ, ರಾತ್ರಿ ವೇಳೆ ಕಿಲೋ ಮೀಟರ್ ಗಳ ದೂರ ನಡೆದು ಹೋಗುವುದು ತಪ್ಪಿದೆ.

ಸಾಂದರ್ಭಿಕ ಚಿತ್ರ

ಇದೇನು ಅಂತ ದೊಡ್ಡ ವಿಷಯವಾ ಅನ್ನಿಸಬಹುದು. ಹೌದು ಇದು ನಿಜಕ್ಕೂ ದೊಡ್ಡ ವಿಷಯ.

ಅಮ್ಮ ಬೆಂಗಳೂರಿಗೆ ಬಂದಿದ್ದಾಗ, ಅವಳಿಗೆ ಬರುವ ಗೆಳತಿಯರ ಯಾವ ಕಾಲ್ ಗಳನ್ನೂ ನಿರಾಕರಿಸಲಿಲ್ಲ. ಎಲ್ಲರ ಜೊತೆಗೂ ನಗುತ್ತಲೇ ಇಲ್ಲಿನ ಅನುಭವಗಳನ್ನ  ಬಿಚ್ಚಿಡುತ್ತಿದ್ದಳು.

“ಇವತ್ತು ನಾನು ಫುಲ್ ಫ್ರೀ, ಎಷ್ಟು ಬೇಕಾದ್ರು ಮಾತಾಡೋಕೆ ಪುರುಸೊತ್ತು ಐತಿ” ಅನ್ನುವಾಗ, ಇಲ್ಲಿ  ಅವಳಿಗೊಂದು ಬಿಡುವಿನ ಮತ್ತು ಬಿಡುಗಡೆಯ ವಾತಾವರಣವೊಂದಿತ್ತು ಅನ್ನುವುದನ್ನ ಗಮನಿಸಿದೆ.

ಇನ್ನೂ ಅಮ್ಮನ ಗೆಳತಿಯರೂ ಅಷ್ಟೆ.  “ ಗದ್ದೆ ಕಡೆ ಬಂದಿದ್ದೆ, ಮನೆ ಕಡೆ ಹೋದ್ಮೆಲೆ ಬರೀ ಅದು ಇದು ಅಂತ ಕೆಲಸ ಮಾಡೊದಗತ್ತೆ. ಗದ್ದೆಲಿ ಕೆಲಸ ಮಾಡ್ತಾ, ನಿನ್ ಜೊತೆ ಮಾತಾಡೊಣ ಅನ್ನಿಸಿ, ನಿಂಗ್ ಇವಾಗ ಪೋನ್ ಮಾಡಿದೆ” ಅನ್ನುವಾಗ ಅವರಿಗೂ ಒಂದಿಷ್ಟು ಹೊತ್ತು ಬಿಡುವಿನ ಕಾಲ ಸಿಗುತ್ತಿದೆ ಅನ್ನಿಸಲಿಲ್ಲ, ಆದರೆ ಹಿಂಗೆ ಫೋನ್ ನಲ್ಲಿ ತಮಗೆ ಬೇಕಾದವರೊಟ್ಟಿಗೆ ಒಂದಿಷ್ಟು ಹೊತ್ತು ನೆಮ್ಮದಿಯಿಂದ ಮಾತನಾಡುವ ಅವಕಾಶವೊಂದು ಸಿಕ್ಕಿದೆಯಲ್ಲ  ಅನಿಸಿತು.

 ಜಗತ್ತು ವಿಪರೀತ ವೇಗದಲ್ಲಿ  ಓಡುತ್ತಿರುವಾಗ, ಹಳ್ಳಿಗಳಲ್ಲಿ  ನಿಧಾನಗತಿಯ ಬೆಳವಣಿಗೆಗಳಾಗುತ್ತಿವೆ.  ದಶಕಗಳಿಂದಲೂ ಅಪ್ಪಂದಿರ ಕೈಯಲ್ಲಿ ಮಾತ್ರ  ಮೊಬೈಲ್ ನೋಡುತ್ತಿದ್ದ ಮಕ್ಕಳು, ಈಗ ತಮ್ಮ ಅಮ್ಮಂದಿರು ತಮ್ಮ ಫೋನಿನಲ್ಲಿ ನಿರಾಳವಾಗಿ ತಮಗೆ ಸಮಯ ಸಿಕ್ಕಾಗಲೋ, ಅಥವಾ ತೋಟದ ಕೆಲಸ ಮಾಡುವಾಗಲೋ ಫೋನ್ ಮಾಡಿ ಖುಷಿಯನ್ನೋ, ಬೇಸರವನ್ನೋ ಹಂಚಿಕೊಂಡು ಒಂಟಿತನವನ್ನ ಮೀರಿ ಬದುಕುತ್ತಿರುವುದನ್ನು ನೋಡುತ್ತಿದ್ದಾರೆ. ದಶಕಗಳಿಂದ ಗಂಡಸರ ಕಪಿಮುಷ್ಟಿಯಲ್ಲಿದ್ದ ಈ ಮೊಬೈಲ್ ಫೋನು ಹಳ್ಳಿಯ ಹೆಂಗಸರ ಕೈ ಗೆ ಬಂದು ಸೇರಿದ್ದು ಆರ್ಥಿಕ ಅನುಕೂಲತೆಯ ಕಾರಣದಿಂದ ಅನ್ನಿಸಿದರೂ ಸಹ, ಹೀಗೆ ಅವರಿಗೆ ಫೋನ್ ಬಳಸುವ ಅವಕಾಶವೊಂದು ಸಿಕ್ಕಿರುವುದರಲ್ಲಿ ಗಂಡಸರ ಪಾಲು ಸಹ ಇದೆ.

ಸಿಕ್ಕ ಸಣ್ಣ ಸಣ್ಣ ಅವಕಾಶಗಳಿಂದ ತಮಗೆ ಅರಿವಿಲ್ಲದಂತೆಯೇ ಕಟ್ಟುಪಾಡುಗಳನ್ನ ಮೀರಿ ಹೊರಬಂದು ಬಿಡುಗಡೆಯತ್ತ ಚಲಿಸುತ್ತಿರುವ ಈ ಸ್ತ್ರೀ ಸ್ವಾತಂತ್ರ್ಯದ ಪ್ರಕ್ರಿಯೆಯ ಸೋಜಿಗದಿಂದ ನಮ್ಮಂತಹ ಸ್ತ್ರೀವಾದದ ಕಲಿಕಾರ್ಥಿಗಳು ಕಲಿಯುವುದು ಬಹಳಷ್ಟಿದೆ. “ಹಳ್ಳಿಯ ಹೆಣ್ಣುಮಕ್ಕಳು ಸ್ವತಃ ತಾವೇ ಪಿತೃಪ್ರಧಾನ ವ್ಯವಸ್ಥೆಯ ದೌರ್ಜನ್ಯ ಗಳನ್ನ ಒಪ್ಪಿಕೊಳ್ಳುತ್ತಾರೆ ಮತ್ತು ಸತಿಧರ್ಮವೇ ಶ್ರೇಷ್ಟವೆಂದು ಬದುಕುತ್ತಿರುತ್ತಾರೆ, ಸಮಾನತೆಯ ಕಲ್ಪನೆ ಇವರಿಗಿರುವುದಿಲ್ಲ ಎಂಬಂತಹ ಹುರುಳಿರದ ತಿಳುವಳಿಕೆಗಳನ್ನು ನಾವು ದೂರಮಾಡಿಕೊಳ್ಳಬೇಕಾಗಿದೆ.

ದಿವ್ಯಶ್ರೀ ಅದರಂತೆ

ಯುವ ಲೇಖಕಿ

ಇದನ್ನೂ ಓದಿ- ಗುಲ್ಫಿಶಾ ಫಾತಿಮಾ 40,000 ಗಂಟೆಗಳಿಂದ ಜೈಲಿನಲ್ಲಿ ಕೊಳೆಯುತ್ತಿದ್ದಾಳೆ!!!

More articles

Latest article