ನರೇಂದ್ರ ಮೋದಿಯವರು ಏನನ್ನು ಹೇಳಲು ಬಯಸುತ್ತಿದ್ದಾರೆ? ಮೀನು ತಿನ್ನುವವರು ದೇಶದ್ರೋಹಿಗಳೇ? ಮಾಂಸ ತಿನ್ನುವವರು ದೇಶದ್ರೋಹಿಗಳೇ? ಮೀನು-ಮಾಂಸ ತಿನ್ನುವವರು ಮೊಘಲರಂತೆ ಆಕ್ರಮಣ ಮಾಡುವವರೇ? – ದಿನೇಶ್ ಕುಮಾರ್ ಎಸ್ ಸಿ
ಸಂಪಾದಕೀಯ
ಬಿಹಾರದ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಹೆಲಿಕಾಪ್ಟರ್ ನಲ್ಲಿ ಕುಳಿತು ಮೀನು ತಿನ್ನುವ ದೃಶ್ಯವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಪ್ರಧಾನಿ ನರೇಂದ್ರ ಮೋದಿ ಜಮ್ಮುವಿನ ಉಧಾಮ್ ಪುರದಲ್ಲಿ ನಡೆಸಿದ ಸಭೆಯೊಂದರಲ್ಲಿ ಇದನ್ನು ಪ್ರಸ್ತಾಪಿಸಿ ಮೀನು ತಿನ್ನುವವರನ್ನು, ಅದರ ಜೊತೆಗೆ ಮೀನುಗಾರರನ್ನು ಅಪಮಾನಿಸಿದ್ದಾರೆ.
ಮೊಘಲರು ಭಾರತದ ಮೇಲೆ ದಾಳಿ ಮಾಡಿದಾಗ, ಅವರು ದೇವಾಲಯಗಳನ್ನು ಕೆಡವುವವರೆಗೂ ಅವರು ತೃಪ್ತಿ ಹೊಂದಲಿಲ್ಲ, ಅವರು (ತೇಜಸ್ವಿ ಯಾದವ್) ಮೊಘಲರಂತೆಯೇ ಶ್ರಾವಣ ಮಾಸದಲ್ಲಿ ಮೀನು ತಿನ್ನುವ ವೀಡಿಯೋ ತೋರಿಸುವ ಮೂಲಕ ದೇಶದ ಜನರನ್ನು ಕೆಣಕಲು ಬಯಸುತ್ತಾರೆ ಎಂದು ಮೋದಿ ಹೇಳಿದ್ದಾರೆ.
ಪ್ರತಿಬಾರಿ ಚುನಾವಣೆ ಬಂದಾಗಲೂ ಮೋದಿಯವರಿಗೆ ಮೊಘಲರು, ಮುಸ್ಲಿಮ್ ಲೀಗ್ ಇತ್ಯಾದಿಗಳೇ ನೆನಪಾಗುತ್ತವೆ. ದೇಶದಲ್ಲಿ ಹಿಂದೆಂದೂ ಕಂಡು ಕೇಳರಿಯದಂಥ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಅವುಗಳ ಕುರಿತು ಮೋದಿ ಮಾತನಾಡುವುದಿಲ್ಲ. ಒಬ್ಬ ರಾಜಕೀಯ ನಾಯಕ ಮೀನು ತಿನ್ನುವುದೇ ಅವರಿಗೆ ದೊಡ್ಡ ಚುನಾವಣಾ ವಿಷಯವಾಗಿದೆ.
ನಿನ್ನೆ ಉಧಮ್ ಪುರದಲ್ಲಿ ನಡೆದ ಸಮಾವೇಶದಲ್ಲಿ ಅವರು ಇನ್ನೊಂದು ಮಾತನ್ನೂ ಹೇಳಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಮನೆಗೆ ಭೇಟಿ ನೀಡಿದ್ದಾಗ ಅವರು ಕುರಿಯ ಮಾಂಸದ ಅಡುಗೆ ಮಾಡಿ ಬಡಿಸಿದ್ದರು. ಅದನ್ನು ಉಲ್ಲೇಖಿಸಿ, ದೇಶದ ಜನರ ಭಾವನೆಗಳನ್ನು ಅಗೌರವಿಸಲೆಂದು ನವರಾತ್ರಿಯ ಸಂದರ್ಭದಲ್ಲಿ ಇವರು ಮಾಂಸಾಹಾರ ಪಡೆಯುತ್ತಾರೆ ಎಂದು ಟೀಕಿಸಿದರು.
ಅಷ್ಟಕ್ಕೂ ನರೇಂದ್ರ ಮೋದಿಯವರು ಏನನ್ನು ಹೇಳಲು ಬಯಸುತ್ತಿದ್ದಾರೆ? ಮೀನು ತಿನ್ನುವವರು ದೇಶದ್ರೋಹಿಗಳೇ? ಮಾಂಸ ತಿನ್ನುವವರು ದೇಶದ್ರೋಹಿಗಳೇ? ಮೀನು-ಮಾಂಸ ತಿನ್ನುವವರು ಮೊಘಲರಂತೆ ಆಕ್ರಮಣ ಮಾಡುವವರೇ? ಮೋದಿ ಮಾಂಸಾಹಾರಿಗಳನ್ನು ಟೀಕಿಸುವುದರ ಜೊತೆಗೆ ಮಾಂಸ ಮತ್ತು ಮೀನಿನ ವ್ಯಾಪಾರವನ್ನೇ ನಂಬಿಕೊಂಡ ಕೋಟ್ಯಂತರ ಜನರನ್ನು ಅಪಮಾನಿಸಿದ್ದಾರೆ.
ಯಾರೋ ಮೀನು ತಿಂದರೆ, ಮಾಂಸ ತಿಂದರೆ ಅದು ಭಾರತೀಯರ ಮನಸಿಗೆ ಯಾಕೆ ಘಾಸಿಯಾಗಬೇಕು? ಇದು ಯಾವ ಬಗೆಯ ತರ್ಕ? ಅಧ್ಯಯನಗಳ ಪ್ರಕಾರ ಭಾರತದ ಶೇ.80 ಕ್ಕೂ ಹೆಚ್ಚು ಮಂದಿ ಮಾಂಸಾಹಾರಿಗಳೇ ಆಗಿದ್ದಾರೆ. ನಾವು ಸಸ್ಯಾಹಾರಿಗಳು ಎಂದು ಹೇಳಿಕೊಂಡು ಮಾಂಸಾಹಾರ ತಿನ್ನುವವರನ್ನೂ ಸೇರಿಸಿದರೆ ಈ ಸಂಖ್ಯೆ ಇನ್ನಷ್ಟು ಹೆಚ್ಚುತ್ತದೆ. ಹಾಗಿದ್ದರೆ ಶೇ.80ರಷ್ಟು ಭಾರತೀಯರು ದೇಶದ್ರೋಹಿಗಳೇ? ಉಳಿದ ಶೇ.20ರಷ್ಟು ಮಂದಿ ಮಾತ್ರ ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುವವರೇ? ಮೋದಿಯವರ ದೃಷ್ಟಿಯಲ್ಲಿ ಭಾರತೀಯರೆಂದರೆ ಯಾರು? ಮಾಂಸಾಹಾರ ತಿನ್ನದ ಜನರು ಮಾತ್ರವೇ?
ತಮ್ಮ ಚುನಾವಣಾ ಭಾಷಣಗಳಲ್ಲಿ ಎಂದಿನಂತೆ ಭಾರತೀಯ ಸಂಸ್ಕೃತಿ, ಸಂಪ್ರದಾಯಗಳನ್ನು ಮೋದಿ ಎಳೆದು ತಂದಿದ್ದಾರೆ. ಇವತ್ತು ಭಾರತೀಯರು ಪೂಜಿಸುವ ಬಹುತೇಕ ದೇವ-ದೇವಿಯರು ಮಾಂಸಾಹಾರಿಗಳಾಗಿದ್ದರು ಎಂಬುದು ಮೋದಿಗೆ ಗೊತ್ತಿಲ್ಲವೇ? ಯಾವ ರಾಮನ ಹೆಸರಿನಲ್ಲಿ ಮಂದಿರವನ್ನು ಉದ್ಘಾಟನೆ ಮಾಡಿದರೋ ಅದೇ ರಾಮ ಕೂಡ ಮಾಂಸಾಹಾರಿಯಾಗಿದ್ದ ಎಂಬುದು ವಾಲ್ಮೀಕಿ ರಾಮಾಯಣದಲ್ಲೇ ಉಲ್ಲೇಖವಿದೆ. ಬೌದ್ಧ ದಮ್ಮ ಭಾರತದಲ್ಲಿ ಉಚ್ಛ್ರಾಯ ಸ್ಥಿತಿ ತಲುಪುವವರೆಗೆ ಭಾರತ ಸಂಪೂರ್ಣ ಮಾಂಸಾಹಾರಿ ದೇಶವಾಗಿತ್ತು ಮತ್ತು ಬ್ರಾಹ್ಮಣರೂ ಕೂಡ ಮಾಂಸಾಹಾರಿಗಳಾಗಿದ್ದರು. ಇದ್ಯಾವುದೂ ಮೋದಿಯವರಿಗೆ ಗೊತ್ತಿಲ್ಲವೇ? ಹಾಗೆ ನೋಡಿದರೆ ಮಾಂಸಾಹಾರವೇ ಭಾರತದ ಸಂಸ್ಕೃತಿ. ಮೋದಿಯವರೇ ಭಾರತದ ಸಂಸ್ಕೃತಿಯನ್ನು ಅಪಮಾನಿಸಿದ್ದಾರೆ.
ನರೇಂದ್ರ ಮೋದಿಯವರು ಮೀನು ತಿನ್ನುವವರನ್ನು, ಮಾಂಸ ತಿನ್ನುವವರನ್ನು ಅಪಮಾನಿಸುವುದರೊಂದಿಗೆ ಈ ಉದ್ಯಮದಲ್ಲಿ ತೊಡಗಿಕೊಂಡ ಕೋಟ್ಯಂತರ ಮಂದಿ ಮೀನುಗಾರರು ಸೇರಿದಂತೆ ಮಾಂಸದ ಉದ್ಯಮದಲ್ಲಿ ತೊಡಗಿಕೊಂಡವರನ್ನು ಅಪಮಾನಿಸಿದ್ದಾರೆ. ಅವರಲ್ಲಿ ದೊಡ್ಡ ಆತಂಕವನ್ನು ಮೂಡಿಸಿದ್ದಾರೆ. ಚುನಾವಣಾ ಭಾಷಣದಲ್ಲೇ ಹೀಗೆ ಮಾತನಾಡಿದವರು ನಾಳೆ ಮತ್ತೆ ಅಧಿಕಾರಕ್ಕೆ ಬಂದರೆ ಮೀನುಗಾರಿಕೆಯನ್ನೇ, ಮಾಂಸದ ಉದ್ಯಮವನ್ನೇ ನಿಷೇಧಿಸಿದರೆ ಎಂಬ ಆತಂಕ ಉಂಟಾಗಿದೆ.
ಮೀನುಗಾರಿಕೆಯನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಜಗತ್ತಿನ ಮೀನು ಉತ್ಪಾದನೆಯ ಶೇ. 7.96ರಷ್ಟು ಪಾಲನ್ನು ಭಾರತವೇ ನೀಡುತ್ತದೆ. ಭಾರತದ ಆರ್ಥಿಕತೆಯಲ್ಲಿ ಮೀನುಗಾರಿಕೆಯ ಪಾಲು ಅಪಾರ. ಭಾರತದ ಒಟ್ಟು ಜಿಡಿಪಿಯ ಶೇ. 1.07 ಭಾಗದ ಕೊಡುಗೆ ಮೀನುಗಾರಿಕೆಯಿಂದಲೇ ಬರುತ್ತದೆ. ಸುಮಾರು 15 ರಿಂದ 16 ಮಿಲಿಯನ್ ಮೆಟ್ರಿಕ್ ಟನ್ ಮೀನು ಭಾರತದಲ್ಲಿ ಉತ್ಪಾದನೆಯಾಗುತ್ತದೆ. ಸರಿ ಸುಮಾರು ಮೂರು ಕೋಟಿ ಜನರು ಮೀನುಗಾರಿಕೆ ಕ್ಷೇತ್ರವನ್ನೇ ತಮ್ಮ ಜೀವನೋಪಾಯವನ್ನಾಗಿಸಿಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಈ ಉದ್ಯಮವನ್ನು ನಂಬಿಕೊಂಡಿರುವವರು ದುರ್ಬಲ ಸಮುದಾಯಗಳು.
ಭಾರತವನ್ನು ಮೂರು ಸಮುದ್ರಗಳು ಮೂರು ದಿಕ್ಕುಗಳಲ್ಲಿ ಸುತ್ತುವರೆದಿದ್ದು, ಒಟ್ಟು 7516 ಕಿ.ಮೀ ಉದ್ದದ ಕರಾವಳಿಯನ್ನು ಹೊಂದಿದೆ. ಮೀನುಗಾರಿಕೆಯನ್ನೇ ನೆಚ್ಚಿಕೊಂಡ 3,827 ಹಳ್ಳಿಗಳು ದೇಶದಲ್ಲಿವೆ. ಇದಲ್ಲದೆ ಸಿಹಿನೀರಿನಲ್ಲಿನ ಮೀನುಗಾರಿಕೆಯನ್ನು ನಂಬಿಕೊಂಡ ಲಕ್ಷಾಂತರ ಜನರೂ ಕರಾವಳಿಯಲ್ಲದ ಬೇರೆ ಬೇರೆ ಭಾಗಗಳಲ್ಲಿ ಇದ್ದಾರೆ.
ಮೋದಿಯವರ ತರ್ಕವನ್ನೇ ವಿಸ್ತರಿಸಿ ಹೇಳುವುದಾದರೆ, ಭಾರತದ ಮೀನುಪ್ರಿಯ ಮಾಂಸಾಹಾರಿಗಳು ಶ್ರಾವಣ ಮಾಸ, ಕಾರ್ತಿಕ ಮಾಸ, ನವರಾತ್ರಿ, ಹಬ್ಬ ಹರಿದಿನಗಳು ಇತ್ಯಾದಿಗಳ ಸಂದರ್ಭದಲ್ಲಿ ಮೀನು ತಿನ್ನುವುದನ್ನು ಬಿಟ್ಟರೆ ಮೀನುಗಾರರು ಏನು ಮಾಡಬೇಕು? ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಮಲಗಬೇಕೆ? ಸರ್ಕಾರದ ಸಹಾಯವಿಲ್ಲದೆ ಭಾರತೀಯ ಮೀನುಗಾರರು ಈಗಾಗಲೇ ಕಂಗೆಟ್ಟು ಹೋಗಿದ್ದಾರೆ. ಸಂಪ್ರದಾಯಗಳ ಹೆಸರಲ್ಲಿ ಮೀನು ತಿನ್ನುವುದೇ ಅಪರಾಧವಾದರೆ ಅವರೆಲ್ಲ ಏನು ಮಾಡಬೇಕು?
ಕರ್ನಾಟಕದಲ್ಲಿ ಮೊಗವೀರ (ಮೊಗೆಯರ್, ಮೊಗೇರು), ಗಂಗಾಮತಸ್ಥ, ಬೆಸ್ತ, ಅಂಬಿಗ, ಕೋಲಿ, ಹರಿಕಾಂತ, ತಾಂಡೇಲ, ಖಾರ್ವಿ, ಗಾಬಿತ, ಆಗೇರ, ದಾಲಜಿ ಸಮುದಾಯಗಳು ಮೀನುಗಾರಿಕೆಯನ್ನೇ ನೆಚ್ಚಿಕೊಂಡು ಬದುಕುತ್ತಿವೆ. ಒಂದು ವೇಳೆ ಇದೇ ನರೇಂದ್ರ ಮೋದಿ ಮೀನು ತಿನ್ನುವುದು ಭಾರತೀಯ ಸಂಸ್ಕೃತಿಗೆ ವಿರುದ್ಧ, ಮೀನು ತಿನ್ನುವುದರಿಂದ ಕೆಲವು ಭಾರತೀಯರಿಗೆ ಅವರ ಸಂಪ್ರದಾಯದ ಕಾರಣದಿಂದ ನೋವಾಗುತ್ತದೆ ಎಂಬ ಕಾರಣ ನೀಡಿ ಮೀನುಗಾರಿಕೆಯನ್ನೇ ನಿಷೇಧಿಸಿದರೆ ಅಥವಾ ವರ್ಷದ ಹಲವು ತಿಂಗಳುಗಳಲ್ಲಿ ಸಂಪ್ರದಾಯದ ನೆಪವೊಡ್ಡಿ ಭಾಗಶಃ ನಿಷೇಧ ಹೇರಿದರೆ ಈ ಸಮುದಾಯಗಳೆಲ್ಲ ಏನು ಮಾಡಬೇಕು? ಉಪವಾಸ ನರಳಿ ಸಾಯಬೇಕೆ?
ಪ್ರಧಾನಿ ಮೋದಿ ಮೀನುಗಾರಿಕೆ ಅಥವಾ ಮಾಂಸ ಮಾರಾಟ ನಿಷೇಧದ ಮಾತುಗಳನ್ನು ಆಡದೆಯೇ ಇರಬಹುದು. ಆದರೆ ಅವರ ಮಾತುಗಳು ಅಲ್ಲಿಗೇ ನಮ್ಮನ್ನು ತೆಗೆದುಕೊಂಡುಹೋಗುತ್ತದೆ. ಇವತ್ತು ಮೋದಿ ನವರಾತ್ರಿಯ ಒಂಭತ್ತು ದಿನಗಳು, ಶ್ರಾವಣ ಮಾಸದ ಮೂವತ್ತು ದಿನಗಳ ಬಗ್ಗೆ ಮಾತಾಡಿದ್ದಾರೆ. ನಾಳೆ ಇದಕ್ಕೆ ಇನ್ನಷ್ಟು ತಿಂಗಳುಗಳು ಸೇರಿಕೊಳ್ಳಬಹುದು. ಭಾರತದಲ್ಲಿ ಸಂಪದ್ರಾಯಗಳಿಗೆ, ಹಬ್ಬ ಹರಿದಿನಗಳಿಗೇನು ಕೊರತೆಯೇ? ಇದು ಹೀಗೆಯೇ ಬೆಳೆದರೆ ಭವಿಷ್ಯದಲ್ಲಿ ಮೀನು, ಮಾಂಸಾಹಾರವೇ ನಿಷೇಧವಾಗಬಹುದು. ಇಂಥ ಸೂಕ್ಷ್ಮ ವಿಷಯದ ಬಗ್ಗೆ ಮಾತನಾಡುವಾಗ ಈ ಉದ್ಯಮವನ್ನೇ ನೆಚ್ಚಿಕೊಂಡವರ ಹೊಟ್ಟೆ ಮೇಲೆ ಹೊಡೆದಂತೆ ಆಗುತ್ತದೆ ಎಂಬ ಸಾಮಾನ್ಯ ಜ್ಞಾನವೂ ಮೋದಿಯವರಿಗಿಲ್ಲವೇ?
ಮೀನು ತಿನ್ನುವುದು, ಮಾಂಸ ತಿನ್ನುವುದು ಅವರವರ ಇಷ್ಟಕ್ಕೆ ಸೇರಿದ್ದು. ಅದನ್ನು ಯಾರೂ ನಿಯಂತ್ರಿಸಲಾಗದು, ನಿಯಂತ್ರಿಸಬಾರದು ಕೂಡ. ಮೋದಿಯವರಿಗೆ ಇಷ್ಟವಿಲ್ಲದ್ದು ದೇಶದ ಜನರಿಗೆ ಇಷ್ಟವಾಗಬಾರದು ಎಂದರೆ ಹೇಗೆ? ಮೋದಿ ದೇಶದ ನೂರಾ ನಲವತ್ತು ಕೋಟಿ ಮಂದಿಗೂ ಪ್ರಧಾನಿಯಲ್ಲವೇ? ಅವರು ಯಾವಾಗ ಇಪ್ಪತ್ತು ಕೋಟಿ ಜನರ ಪ್ರಧಾನಿಯಾದರು? ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಅವರಿಗೆ ಮೀನು ತಿನ್ನುವವರು, ಮೀನುಗಾರರು, ಮಾಂಸ ತಿನ್ನುವವರು, ಮಾಂಸದ ಉದ್ಯಮಗಳಲ್ಲಿ ತೊಡಗಿಕೊಂಡವರು ಮತ ನೀಡಿಲ್ಲವೇ? ಅವರ ಭಾವನೆಗಳಿಗೆ ಅಪಮಾನ ಮಾಡುವುದು ಎಷ್ಟು ಸರಿ? ಈ ಬಾರಿಯೂ ಮೋದಿಯವರಿಗೇ ನಮ್ಮ ಮತ ಎಂದು ಹೇಳಿಕೊಳ್ಳುತ್ತಿದ್ದ ಈ ಜನರು ಈಗ ತಮ್ಮ ಅಸ್ತಿತ್ವ ಉಳಿಸಿಕೊಳ್ಳುತ್ತಾರೋ ಅಥವಾ ಮೀನೂಟವನ್ನು ವಿರೋಧಿಸುವ ಮೂಲಕ ಮೀನುಗಾರಿಕೆಯನ್ನೇ ಅಪಮಾನಿಸಿರುವ ಮೋದಿಯನ್ನು ಬೆಂಬಲಿಸುತ್ತಾರಾ?
ಸಂಘ ಪರಿವಾರ ಮೊದಲಿನಿಂದಲೂ ಮೇಲ್ಜಾತಿಗಳ ಹಿಡಿತದಲ್ಲೇ ಇದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಸಸ್ಯಾಹಾರಿಗಳೇ ಸಂಘದ ಮತ್ತು ಅದರ ರಾಜಕೀಯಪಕ್ಷದ ಗೊತ್ತು ಗುರಿಗಳನ್ನು ನಿರ್ಧರಿಸುತ್ತಾರೆ. ಸಮಯ ಬಂದಾಗೆಲ್ಲ ಅವರು ಮಾಂಸಾಹಾರಿಗಳನ್ನು ಅಪಮಾನಿಸುವ ಕಾರ್ಯವನ್ನು ಮಾಡುತ್ತ ಬಂದಿವೆ. ಮೀನು ಮಾಂಸ ಇಲ್ಲದ ಸಂಪೂರ್ಣ ಸಸ್ಯಾಹಾರಿಗಳ ದೇಶ ಅವರ ಅಂತಿಮ ಗುರಿ, ಅದೇ ಅವರ ಹಿಡನ್ ಅಜೆಂಡಾ. ಅದಕ್ಕಾಗಿಯೇ ಇಂಥ ಕುತರ್ಕಗಳನ್ನು ಅವರು ಮಂಡಿಸುತ್ತ ಬರುತ್ತಾರೆ.
ನರೇಂದ್ರ ಮೋದಿ ದೇಶದ ಜನರ ವಿರುದ್ಧ ಮಾತನಾಡಿದ್ದಾರೆ. ದೇಶದ ಬಹುಸಂಖ್ಯಾತರು ಮಾಂಸಾಹಾರಿಗಳು. ಅವರ ಭಾವನೆಗಳನ್ನು ಮೋದಿ ಕೆಣಕಿದ್ದಾರೆ. ಅಷ್ಟೇ ಅಲ್ಲದೆ ಮೀನುಗಾರರು ಸೇರಿದಂತೆ ದೇಶದಲ್ಲಿ ಮೀನು-ಮಾಂಸದ ಉದ್ಯಮವನ್ನು ನೆಚ್ಚಿಕೊಂಡು ಕೋಟ್ಯಂತರ ಜನರನ್ನು ಅಪಮಾನಿಸಿದ್ದಾರೆ. ದೇಶದ ಜನತೆಯಲ್ಲಿ ನರೇಂದ್ರ ಮೋದಿ ಬೇಷರತ್ ಕ್ಷಮೆ ಕೇಳಬೇಕು. ತಮ್ಮಿಂದ ಆಗಿರುವ ಪ್ರಮಾದವನ್ನು ಒಪ್ಪಿಕೊಳ್ಳಬೇಕು.