ನವದೆಹಲಿ: ‘ಭಾರತದ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಆಧಾರರಹಿತ ಆರೋಪಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವ್ರತ ತಾಳಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.
ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು ನಮಗೆದೇಶ ಮೊದಲು, ನಾವು ಯಾವತ್ತೂ ದೇಶದ ಹಿತಾಸಕ್ತಿಯೊಂದಿಗೆ ಇದ್ದೇವೆ ಎಂದು ಹೇಳಿದ್ದಾರೆ.
ಟ್ರಂಪ್ ಅವರ ಭಾರತ-ಪಾಕಿಸ್ತಾನ ಕದನ ವಿರಾಮ ಹೇಳಿಕೆಯ ಕುರಿತು ಪ್ರಧಾನಿ ಮೋದಿ ‘ಮೌನ ವ್ರತ’ ವಹಿಸಿದ್ದಾರೆ. ಆಗಸ್ಟ್ 1 ರಿಂದ ಭಾರತದ ಮೇಲೆ ಶೇ. 25ರಷ್ಟು ಸುಂಕ ಹಾಗೂ ದಂಡ ವಿಧಿಸುವುದಾಗಿ ಟ್ರಂಪ್ ಪ್ರಕಟಿಸಿದ್ದಾರೆ. ಇದರ ಬೆನ್ನಲ್ಲೇ ಭಾರತದ ಆರ್ಥಿಕತೆ ನೆಲಕಚ್ಚಿದೆ ಎಂದೂ ಹೇಳಿದ್ದಾರೆ. ಸುಂಕ ಹೇರಿಕೆಯು ದೇಶದ ವ್ಯಾಪಾರದ ಮೇಲೆ ದುಷ್ಪರಿಣಾಮ ಬೀರಲಿದೆ. ಎಂಎಸ್‌ಎಂಇ ಸೇರಿದಂತೆ ಅನೇಕ ಕೈಗಾರಿಕೆಗಳು ನಷ್ಟ ಅನುಭವಿಸಲಿವೆ. ನಿಮ್ಮ ಸಚಿವರು ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದದ ಮಾತುಕತೆ ನಡೆಸಿದ್ದರು. ಕೆಲವರು ಹಲವು ದಿನಗಳಿಂದ ವಾಷಿಂಗ್ಟನ್‌ನಲ್ಲಿ ಬೀಡು ಬಿಟ್ಟಿದ್ದರು. ಆದರೆ ಏನಾಯಿತು ಎಂದು ಖರ್ಗೆ ಪ್ರಶ್ನಿಸಿದ್ದಾರೆ.
‘ನಿಮ್ಮ ಸ್ನೇಹಕ್ಕೆ ‘ನಮಸ್ತೆ ಟ್ರಂಪ್’ ‘ಅಬ್‌ಕೀ ಬಾರ್ ಟ್ರಂಪ್ ಸರ್ಕಾರ’ ನೀಡಿದ ಪುರಸ್ಕಾರ ಇದೇನಾ’ ಎಂದೂ ಖರ್ಗೆ ಪ್ರಶ್ನಿಸಿದ್ದಾರೆ. ರಷ್ಯಾದಿಂದ ತೈಲ ಆಮದು, ಶಸ್ತ್ರಾಸ್ತ್ರ ಖರೀದಿ ಮತ್ತು ಬ್ರಿಕ್ಸ್ ಸದಸ್ಯತ್ವಕ್ಕಾಗಿ ಭಾರತದ ಮೇಲೆ ಸುಂಕ ಹೇರುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇದು ದೇಶದ ರಾಷ್ಟ್ರೀಯ ನೀತಿಗೆ ಎದುರಾದ ದೊಡ್ಡ ಹೊಡೆತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.