ಇಂದಿರಾರವರ “ಬ್ಯಾಂಕ್ ರಾಷ್ಟ್ರೀಕರಣ”ವನ್ನು“ಬ್ಯಾಂಕ್ ಖಾಸಗೀಕರಣ” ಮಾಡಲು ಮೋದಿ ಸಿದ್ಧತೆ!

Most read

ಜುಲೈ 19, 1969ರಂದು ರಾತ್ರಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಸುಗ್ರೀವಾಜ್ಞೆಯ ಮೂಲಕ 50 ಕೋಟಿಗೂ ಮಿಕ್ಕಿ ಠೇವಣಿ ಇರುವ 14 ಬ್ಯಾಂಕುಗಳನ್ನು ರಾಷ್ಟ್ರೀಕರಿಸಿದರು. ಇಂದು ಭಾರತ ಖರೀದಿ ಶಕ್ತಿಯಲ್ಲಿ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದ್ದರೆ,  ಮೂರು ಲಕ್ಷ ಕೋಟಿ ಡಾಲರ್‌ ಅರ್ಥಿಕತೆ ಶಕ್ತಿಯಾಗಿದ್ದರೆ ಮತ್ತು 2024ರ ಹೊತ್ತಿಗೆ 5 ಲಕ್ಷ ಕೋಟಿ ಡಾಲರ್‌ ಅರ್ಥಿಕತೆಯ ದೇಶವಾಗುವುದಿದ್ದರೆ ಇದರಲ್ಲಿ ಬ್ಯಾಂಕ್ ರಾಷ್ಟ್ರೀಕರಣದ  ಪಾತ್ರ ಮಹತ್ವದ್ದಾಗಿದೆ. ಈಗ ಮೋದಿ ಸರ್ಕಾರ ಈ ಬ್ಯಾಂಕುಗಳನ್ನು ಖಾಸಗೀಕರಣ ಮಾಡಲು ಮುಂದಾಗಿದ್ದು ಇದರಿಂದಾಗಿ 5 ಲಕ್ಷ ಕೋಟಿ ಡಾಲರ್ ಆರ್ಥಿಕತೆ ಮರೀಚಿಕೆಯಾಗುವ ಅಪಾಯವಿದೆ – ರಾ. ಚಿಂತನ್, ಪತ್ರಕರ್ತರು.

ಮಣಿಪುರ ಕಂಡರೆ ಅಲರ್ಜಿ, money ಪುರ ಅಂದರೆ ಅಂಬಾನಿ ಮಗನ ಮದ್ವೆಯಲ್ಲಿ ಭರ್ಜರಿಯಾಗಿ ಕಂಡು ಬಂದ ಮೋದಿಯವರು; ತಾವು ಬಡವರಿಂದ ದೂರ, ಶ್ರೀಮಂತರಿಗೆ ಖಾಸ ಖಾಸ ಎನ್ನುವುದನ್ನು ಪದೇಪದೇ ನಿರೂಪಿಸುತ್ತಿದ್ದಾರೆ. Note Ban ನಂತಹ ಬಡವರ ಜೀವ ಹಿಂಡುವ ಅವರ ಅನೇಕ ಅನಾಹುತಕಾರಿ ಕಾರ್ಯಕ್ರಮಗಳಿಗೆ ಈಗ ಹೊಸ ಅನಾಹುತಕಾರಿ ಕಾರ್ಯಕ್ರಮ ಸೇರ್ಪಡೆಯಾಗುತ್ತಿದೆ. ಅದು ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗಿಕರಣ!

ಮೊದಲಿಗೆ ನಾವು ಈ ರಾಷ್ಟ್ರೀಕರಣ ಮತ್ತು ಖಾಸಗೀಕರಣ ಎಂದರೆ ಏನೆಂದು ತಿಳಿದುಕೊಳ್ಳಬೇಕು. ರಾಷ್ಟ್ರೀಕರಣ ಎಂದರೆ ಖಾಸಗಿ-ನಿಯಂತ್ರಿತ ಸಂಸ್ಥೆಗಳು, ಕೈಗಾರಿಕೆಗಳು ಅಥವಾ ಸ್ವತ್ತುಗಳನ್ನು ವಶಕ್ಕೆ ಪಡೆದುಕೊಂಡು ಅವುಗಳನ್ನು ಸರ್ಕಾರದ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಪ್ರಕ್ರಿಯೆ. ಖಾಸಗೀಕರಣ ಅಂದರೆ ಸರ್ಕಾರಿ ಹಿಡಿತದಲ್ಲಿರುವ ಸಂಸ್ಥೆಗಳು, ಕೈಗಾರಿಕೆಗಳು, ಸ್ವತ್ತುಗಳನ್ನು ವಶಪಡಿಸಿಕೊಂಡು ಖಾಸಗಿ ವ್ಯಕ್ತಿಗಳು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಪ್ರಕ್ರಿಯೆ.

ಪ್ರಜಾಪ್ರಭುತ್ವದಲ್ಲಿ ಸರ್ಕಾರಿ ಸಂಸ್ಥೆಗಳ ಮೇಲೆ ಪ್ರಜಾಪ್ರಭುವಿಗೆ ಹಕ್ಕಿರುತ್ತದೆ, ನಿಯಂತ್ರಣವಿರುತ್ತದೆ, ನ್ಯಾಯದ ಗ್ಯಾರಂಟಿ ಇರುತ್ತದೆ. ಖಾಸಗಿ ನಿಯಂತ್ರಣದಲ್ಲಿ ಜನಸಾಮಾನ್ಯರು ಗುಲಾಮರೇ ಹೊರತು ಬೇರೇನಲ್ಲ. ಈ ವ್ಯವಸ್ಥೆಯಲ್ಲಿ ಶ್ರೀಮಂತರ ದಬ್ಬಾಳಿಕೆಯಲ್ಲಿ ನರಳಾಡಬೇಕೇ ಹೊರತು ವಿಧಿಯಿಲ್ಲ. ಇಂತಹ ಅನೇಕ ವಿಪರೀತಗಳನ್ನು ಮುಗಿಸಲು ಹೊರಟಿದ್ದು ಅಂದಿನ ಪ್ರಧಾನಿ ಇಂದಿರಾ ಗಾಂಧಿ. ಅವುಗಳಲ್ಲಿ ಪ್ರಮುಖವಾದ ಕ್ರಾಂತಿಕಾರಿ ನಿರ್ಧಾರವೇ ಬ್ಯಾಂಕ್ ರಾಷ್ಟ್ರೀಕರಣ. ಈಗ ಅದನ್ನೇ ಸುಸ್ತಿ ಸಾಲ ಇನ್ನಿತರೇ ಕ್ಷುಲ್ಲಕ ನೆಪದಲ್ಲಿ ಖಾಸಗಿಕರಣ ಮಾಡಲು ಹೊರಟಿದ್ದಾರೆ Money ಪುರ ಮೋದಿ.

ಮುಂದಿನ ಬಜೆಟ್ ಅಧಿವೇಶನದಲ್ಲಿ ಕೇಂದ್ರ ಸರಕಾರವು ಬ್ಯಾಂಕಿಂಗ್‌ ವಲಯದ ಸುಧಾರಣೆಗಾಗಿ ಬ್ಯಾಂಕಿಂಗ್‌ ನಿಯಂತ್ರಣ ಕಾಯಿದೆ-1949ಕ್ಕೆ ತಿದ್ದುಪಡಿ ಸಂಬಂಧ ಮಸೂದೆ ಮಂಡಿಸುವ ಸಾಧ್ಯತೆ ಇದೆ. ಅಲ್ಲದೆ, ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸಲು ಸರಕಾರವು, ಬ್ಯಾಂಕಿಂಗ್ ಕಂಪನಿಗಳ ಕಾಯಿದೆ-1970 ಮತ್ತು 1980ರ ಕಾಯಿದೆಗೆ (ಸ್ವಾಧೀನ ಮತ್ತು ವರ್ಗಾವಣೆ) ತಿದ್ದುಪಡಿ ಮಸೂದೆ ಮಂಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ಎರಡು ಕಾಯಿದೆಗಳ ಅಡಿ ಬ್ಯಾಂಕ್‌ಗಳನ್ನು ಎರಡು ಹಂತಗಳಲ್ಲಿ ರಾಷ್ಟ್ರೀಕರಣಗೊಳಿಸಲಾಗಿತ್ತು. ಬ್ಯಾಂಕ್‌ಗಳ ಖಾಸಗೀಕರಣಕ್ಕಾಗಿ ಈ ಎರಡು ಕಾಯಿದೆಗಳನ್ನು ತಿದ್ದುಪಡಿ ಮಾಡಬೇಕಿದೆ ಎಂದು ಹೇಳಲಾಗಿದೆ. ತಿದ್ದುಪಡಿಗೆ ಸಂಸತ್ತು ಅನುಮೋದನೆ ನೀಡಿದರೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ತನ್ನ ಹೂಡಿಕೆಯನ್ನು ಸರಕಾರವು ಶೇಕಡ 51ಕ್ಕಿಂತ ಕಡಿಮೆ ಮಾಡಿಕೊಳ್ಳಬಹುದು. ಇಂದಿರಾ ಗಾಂಧಿ ಬ್ಯಾಂಕ್ ರಾಷ್ಟ್ರೀಕರಣಗೊಳಿಸಿದ ನಂತರ ಬ್ಯಾಂಕುಗಳಲ್ಲಿ ಶೇಕಡಾ 51ರಷ್ಟು ಸರಕಾರದ ಷೇರಿದೆ. ಬ್ಯಾಂಕ್‌ಗಳ ಆಡಳಿತ ಸುಧಾರಣೆಯ ಜತೆಗೆ ಹೂಡಿಕೆದಾರರ ರಕ್ಷಣೆಯನ್ನೂ ಹೆಚ್ಚಿಸಬಹುದು ಎಂಬುದು Money ಪುರ ಮೋದಿ ಸರ್ಕಾರದ ವಾದವಾಗಿದೆ. ಈ ಎರಡೂ ಮಸೂದೆಗಳನ್ನು 2021ರ ಸಂಸತ್ತಿನ ಚಳಿಗಾಲದ ಎರಡು ಅಧಿವೇಶನಗಳಲ್ಲೇ ಮಂಡಿಸಲು ಸರಕಾರ ಸಿದ್ಧತೆ ನಡೆಸಿತ್ತು. ಆದರೆ, ಆಗ ಸಾಧ್ಯವಾಗಿರಲಿಲ್ಲ. ಈಗ ಮತ್ತೆ ಮಂಡಿಸುವ ಸಾಧ್ಯತೆ ಬಹುತೇಕ ಖಚಿತ ಎನ್ನಲಾಗುತ್ತಿದೆ.

ಆ ಕಾಲಕ್ಕೆ ಜನಸಾಮಾನ್ಯರಿಗೆ ಬ್ಯಾಂಕ್‌  ಮತ್ತು ಬ್ಯಾಂಕ್ ಉದ್ಯೋಗಗಳು ಮರೀಚಿಕೆಯಾಗಿದ್ದವು. ಸುಮಾರು 300 ಬ್ಯಾಂಕ್‌ಗಳನ್ನು ನಿಯಂತ್ರಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು ರಿಸರ್ವ್‌ ಬ್ಯಾಂಕ್‌ಗೆ ಸವಾಲಾಗಿತ್ತು. ಬಹುತೇಕ ಬ್ಯಾಂಕ್‌ಗಳು TRADE FINANCE ಮಾಡುತ್ತಿದ್ದು, ದೇಶದ ಸರ್ವೋತ್ತಮ ಅಭಿವೃದ್ಧಿಗೆ ಅವಶ್ಯಕವಾದ ಕೃಷಿ ಮತ್ತು ಸಣ್ಣ ಉದ್ದಿಮೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದವು.

ಹೀಗಿರುವಾಗ ಜುಲೈ 19, 1969ರಂದು ರಾತ್ರಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಸುಗ್ರೀವಾಜ್ಞೆಯ ಮೂಲಕ 50 ಕೋಟಿಗೂ ಮಿಕ್ಕಿ ಠೇವಣಿ ಇರುವ 14 ಬ್ಯಾಂಕುಗಳನ್ನು ರಾಷ್ಟ್ರೀಕರಿಸಿದರು. ನಂತರ ರಾಷ್ಟ್ರವನ್ನು ಉದ್ದೇಶಿಸಿ ಆಕಾಶವಾಣಿಯ ಮೂಲಕ ಭಾಷಣ ಮಾಡಿದ ಇಂದಿರಾ ಗಾಂಧಿಯವರು, ಬ್ಯಾಂಕುಗಳ ರಾಷ್ಟ್ರೀಕರಣದ ಹಿಂದಿನ ಉದ್ದೇಶವನ್ನು ಮತ್ತು ಮುಂದಿನ ಯೋಜನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ್ದರು. ಇದೇ ಜುಲೈ 19ನೇ ತಾರೀಕು ಬಂದರೆ ಬ್ಯಾಂಕ್ ರಾಷ್ಟ್ರೀಕರಣವಾಗಿ 55 ವರ್ಷವಾಗುತ್ತದೆ.

ಬ್ಯಾಂಕ್‌ ರಾಷ್ಟ್ರೀಕರಣದ ಅರ್ಥ, ಮಹತ್ವ ಮತ್ತು ಉದ್ದೇಶವನ್ನು ತಿಳಿಯದ ಜನಸಾಮಾನ್ಯರು ಮತ್ತು ಕೆಲವು ಮಾಧ್ಯಮದವರು ಇಂದಿರಾಗಾಂಧಿಯವರ ಈ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದರು. ಈಗಲೂ ವಿರೋಧಿಸುವ ಅರೆಬೆಂದ ಮಡಿಕೆಗಳಿವೆ.

ಅವತ್ತೂ ಕಾಂಗ್ರೆಸ್ ಸರ್ಕಾರದ ಕೆಲ ಹಿರಿಯ ನಾಯಕರಿಗೆ ಇಂದಿರಾ ಗಾಂಧಿಯವರ ಈ ಕ್ರಾಂತಿಕಾರಿ ಅರ್ಥಿಕ ಸುಧಾರಣಾ ಹೆಜ್ಜೆಗೆ ಸಹಮತವಿರಲಿಲ್ಲ. ಇದನ್ನು ಮೊದಲೇ ತಿಳಿದ ಇಂದಿರಾಗಾಂಧಿಯವರು ತಮ್ಮ ನಂಬುಗೆಯ ಕೆಲವು ಹಿರಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಮಾತ್ರ ವಿಶ್ವಾಸಕ್ಕೆ ತೆಗೆದುಕೊಂಡರು. ಇಂದಿರಾ ಗಾಂಧಿ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಮೊರಾರ್ಜಿ ದೇಸಾಯಿ ಮತ್ತು ಇಂದಿರಾ ಗಾಂಧಿಯವರ ಮಧ್ಯದ ಶೀತಲ ಸಮರಕ್ಕೆ ಇದು ಕಾರಣವಾಗಿತ್ತು. ರಾಷ್ಟ್ರೀಕರಣಕ್ಕೆ ಸಹಮತ ಇರದಿದ್ದರೆ, ಹಣಕಾಸು ಇಲಾಖೆ ಬಿಟ್ಟು ಕೇವಲ ಉಪಪ್ರಧಾನಿಯಾಗಿ ಮುಂದುವರೆಯುವಂತೆ ಇಂದಿರಾಗಾಂಧಿ ಹೇಳಿದ್ದು  ದೇಸಾಯಿ ಕಾಂಗ್ರೆಸ್ ತೊರೆದು ಜನತಾ ಪರಿವಾರ ಸೇರಲು ಕಾರಣವಾಗಿತ್ತು.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯಸ್ಥ ಆರ್ ಸಿ ಕೂಪರ್ ಸೇರಿದಂತೆ ಬ್ಯಾಂಕ್ ಒಡೆತನವಿದ್ದವರು ಈ ಸುಗ್ರೀವಾಜ್ಞೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಕೋರ್ಟ್ 34 ದಿನಗಳ ಮಧ್ಯಂತರ ತಡೆಯಾಜ್ಞೆ ತಂದು ಕಡೆಗೆ ಬ್ಯಾಂಕ್ ರಾಷ್ಟ್ರೀಕರಣದಿಂದ ಹೂಡಿಕೆದಾರರಿಗೆ ಸಂಕಷ್ಟವಾಗುತ್ತದೆ, ಇದನ್ನು ರದ್ದುಗೊಳಿಸುತ್ತೇವೆ ಎಂದು ಇಂದಿರಾ ಗಾಂಧಿ ಸರ್ಕಾರದ ವಿರುದ್ಧವಾಗಿ ತೀರ್ಪು ನೀಡುತ್ತದೆ.

ಆದರೆ ದೇಶದ ಕ್ಷಿಪ್ರ ಸುಧಾರಣೆಗೆ ಪ್ರಮುಖವಾದ ಹೆಜ್ಜೆಗಳನ್ನು ಇಡುತ್ತಿದ್ದ ಇಂದಿರಾ ಗಾಂಧಿಯವರು 1970ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಬ್ಯಾಂಕ್ ರಾಷ್ಟ್ರೀಕರಣ ಮಾಡಿದರು. ಇದು ನ್ಯಾಯಾಂಗ ವ್ಯವಸ್ಥೆ ಹಾಗೂ ಇಂದಿರಾ ಗಾಂಧಿಯವರ ನಡುವೆ ಶೀತಲ ಸಮರಕ್ಕೆ ಕಾರಣವಾಯ್ತು. ಅತ್ತ ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಪರಿವಾರ ಇಂದಿರಾ ಗಾಂಧಿ ವಿರುದ್ಧ ಆಂದೋಲನಕ್ಕೆ ಸಿದ್ಧತೆ ಮಾಡತೊಡಗಿತು. ಅದೇ ವೇಳೆ  ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಮತ್ತೆ ಸಂವಿಧಾನದಲ್ಲಿ ತಿದ್ದುಪಡಿ ತಂದು privy purse ರದ್ದು ಮಾಡಿ ರಾಜರ ಕುಟುಂಬಕ್ಕೆ ಅನ್ಯಾಯವಾಗಿ ಹೋಗುತ್ತಿದ್ದ ಸರ್ಕಾರದ ಹಣ ನಿಲ್ಲಿಸಿದರು. ಈ ಸಂದರ್ಭದಲ್ಲಿ ಪಾಕಿಸ್ತಾನ ಯುದ್ಧಕ್ಕೆ ಬಂತು. 1971ರ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿದರೂ ಅಕ್ರಮವಾಗಿ ಗೆದ್ದಿದ್ದಾರೆ ಅಂತ ಸಂಯುಕ್ತ ಸೋಷಲಿಸ್ಟ್ ಪಕ್ಷದ ರಾಜ್ ನಾರಾಯಣ್ ಅಲಹಾಬಾದ್ ಹೈಕೋರ್ಟ್ ನಲ್ಲಿ ದೂರು ಸಲ್ಲಿಸಿದ್ದರು. 1973ರಲ್ಲಿ ತೈಲ ಬಿಕ್ಕಟ್ಟು ಎದುರಾಯಿತು. ಚುನಾವಣಾ ಅಕ್ರಮ ಸಾಬೀತಾಗಿದೆ ಎಂದು ಹೈಕೋರ್ಟ್, ಸುಪ್ರೀಂ ಕೋರ್ಟ್ ಎರಡೂ ಇಂದಿರಾಗಾಂಧಿಯನ್ನು ಮುಗಿಸುವ ಪ್ರಯತ್ನ ಮಾಡಿತು. ಅದಾದ ಮೇಲೆಯೇ 1975 ಜೂನ್ 25ರಂದು ಇಂದಿರಾ ಗಾಂಧಿಯವರು ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರಿಗೆ ಮನವಿ ಮಾಡಿ ತುರ್ತುಪರಿಸ್ಥಿತಿ ಹೇರಿದರು.

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವ ಪರಿಸ್ಥಿತಿಗೆ ಇಂದಿರಾ ಗಾಂಧಿ ತಲುಪಲು ಕಾರಣವಾಗಿದ್ದರ ಮೊದಲ foundation ಬ್ಯಾಂಕ್ ರಾಷ್ಟ್ರೀಕರಣವಾಗಿತ್ತು.

ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿಯ ನಂತರದ ಸೋಲಿನ ಬಳಿಕ 1980ರಲ್ಲಿ ಅಧಿಕಾರಕ್ಕೆ ಬಂದಾಗ 200 ಕೋಟಿಗೂ ಮಿಕ್ಕಿ ಠೇವಣಿ ಇರುವ 6 ಬ್ಯಾಂಕುಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಂಡರು. ಮೊದಲ ಸುತ್ತಿನ ರಾಷ್ಟ್ರೀಕರಣದಿಂದ ದೇಶದ 85% ಬ್ಯಾಂಕಿಂಗ್‌ ವ್ಯವಹಾರ ಸರ್ಕಾರಿ ಬ್ಯಾಂಕುಗಳಿಗೆ ಬಂದರೆ, ಎರಡನೇ ಸುತ್ತಿನ ರಾಷ್ಟ್ರೀಕರಣದಿಂದ 91%ವರೆಗೆ ಬ್ಯಾಂಕಿಂಗ್‌ ವ್ಯವಹಾರ ಸರ್ಕಾರಿ ಬ್ಯಾಂಕುಗಳಿಗೆ ಸಿಕ್ಕಿತ್ತು.

ರಾಷ್ಟ್ರೀಕರಣದ ಮೊದಲು ಬ್ಯಾಂಕುಗಳು ಖಾಸಗಿ ಒಡೆತನದಲ್ಲಿ ಇದ್ದು, ಅವು ಜನಸಾಮಾನ್ಯರಿಂದ ಠೇವಣಿಯನ್ನು ಸ್ವೀಕರಿಸುತ್ತಿದ್ದವು.. ಆದರೆ ಇವುಗಳ ಬಳಕೆ ಉಳ್ಳವರಿಗೆ, ಪ್ರಭಾವಿಗಳಿಗೆ ಮತ್ತು ಸಮಾಜದಲ್ಲಿ ಕೆಲವೇ ವರ್ಗದವರಿಗೆ ಅಗುತ್ತಿತ್ತು. ದೇಶದ ಸಂಪತ್ತು ಕೆಲವೇ ವ್ಯಕ್ತಿಗಳಲ್ಲಿ ಕೇಂದ್ರೀಕೃತವಾಗುವುದು ರಾಷ್ಟ್ರದ ಒಟ್ಟಾರೆ ಹಿತದ ದೃಷ್ಟಿಯಲ್ಲಿ ಒಳ್ಳೆಯ ಬೆಳವಣಿಗೆಯಲ್ಲ ಎನ್ನುವ ಚಿಂತನೆ ಪಕ್ಷದ ಯುವ ನೇತಾರರಲ್ಲಿ ಇತ್ತು. ಪಕ್ಷದಲ್ಲಿ ಯಂಗ್‌ ಟರ್ಕ್‌ ಎಂದು ಕರೆಸಿಕೊಳ್ಳುತ್ತಿದ್ದ, ಮುಂದೆ ದೇಶದ ಪ್ರಧಾನಿಯೂ ಆದ ಎಡಪಂಥೀಯ ಒಲವಿನ ಚಂದ್ರಶೇಖರ್, ಕೃಷ್ಣಕಾಂತ್ ಮತ್ತಿತರರು ಇಂದಿರಾ ಗಾಂಧಿಯವರ ಮೇಲೆ ಬ್ಯಾಂಕ್ ರಾಷ್ಟ್ರೀಕರಣಕ್ಕಾಗಿ ಒತ್ತಡ ಹಾಕುತ್ತಿದ್ದರು. ಯಾವಾಗಲೂ ಖಾಸಗಿ ಒಡೆತನವನ್ನು ವಿರೋಧಿಸುವ ಕಮ್ಯುನಿಸ್ಟರು ಕೂಡಾ ಇಂದಿರಾಗಾಂಧಿಯವರಿಗೆ  ಈ ವಿಚಾರದಲ್ಲಿ ಜೊತೆಯಾದರು.

ಜೊತೆಗೆ ಇಂದಿರಾ ಗಾಂಧಿಯವರಿಗೆ ಕಡಿವಾಣ ಹಾಕಲು ಸದಾ ಪ್ರಯತ್ನಿಸುತ್ತಿದ್ದ ಕೆಲ ಹಿರಿಯ ಕಾಂಗ್ರೆಸ್ ನಾಯಕರನ್ನು ನಿಯಂತ್ರಿಸಲು ತುರ್ತಾಗಿ ಅವರಿಗೆ ಒಂದು ಜನಪರ ಮತ್ತು ಪ್ರಗತಿಪರ ಅರ್ಥಿಕ ಕಾರ್ಯಕ್ರಮ ಬೇಕಿತ್ತು. ಬ್ಯಾಂಕ್‌ ಕಾರ್ಮಿಕ ಸಂಘಗಳು ಬ್ಯಾಂಕುಗಳ ರಾಷ್ಟ್ರೀಕರಣಕ್ಕೆ ಒತ್ತಾಯಿಸುತ್ತಿದ್ದವು. ಜನಸಾಮಾನ್ಯರ ಬೆವರಿನ ಉಳಿತಾಯದ ಹಣ ಕೇವಲ ಶ್ರೀಮಂತರ ಹೊಟ್ಟೆ ತುಂಬಿಸುತ್ತಿದೆ. ಜನಸಾಮಾನ್ಯರ ಅರ್ಥಿಕ ಬೆಳವಣಿಗೆಗೆ ಬ್ಯಾಂಕುಗಳ ರಾಷ್ಟ್ರೀಕರಣ ಒಂದೇ ಮಾರ್ಗ ಎಂದು ಅವರು ನಿರಂತರವಾಗಿ ಮುಷ್ಕರ ನಡೆಸುತ್ತಿದ್ದರು.

ಬಹುತೇಕ ಬ್ಯಾಂಕ್‌ಗಳು ಟ್ರೇಡ್‌ ಫೈನಾನ್ಸ್‌ ಮಾಡುತ್ತಿದ್ದು, ದೇಶದ ಸರ್ವೋತ್ತಮ ಅಭಿವೃದ್ಧಿಗೆ ಅವಶ್ಯಕವಾದ ಕೃಷಿ ಮತ್ತು ಸಣ್ಣ ಉದ್ದಿಮೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದವು. 14 ಬ್ಯಾಂಕುಗಳು ಬ್ಯಾಂಕಿಂಗ್‌ ವಲಯದ ಸುಮಾರು 70% ಠೇವಣಿಯನ್ನು ಹೊಂದಿದ್ದರೂ ದೇಶದ ಜನತೆಯ ಸಾಲದ ಅವಶ್ಯಕತೆಯನ್ನು ಪೂರೈಸಲು ಪ್ರಯತ್ನಿಸದೆ ಯಾವುದೋ ನೆಪಗಳನ್ನು ಹೇಳಿ ಹಿಂದೇಟು ಹಾಕುತ್ತಿದ್ದವು. ಬ್ಯಾಂಕಿಂಗ್‌ ಉದ್ಯಮದ ಈ ವಾಸ್ತವಗಳು ಬ್ಯಾಂಕ್‌ ರಾಷ್ಟ್ರೀಕರಣದ ಹಿಂದಿನ ಪ್ರೇರಣೆಯಾಗಿತ್ತು.

ಸ್ವ ಪಕ್ಷವು ಸೇರಿದಂತೆ ವಿರೋಧಿಗಳ ಆಕ್ಷೇಪ ಇದ್ದಿದ್ದರಿಂದ ಸುಗ್ರೀವಾಜ್ಞೆಯ ಮೂಲಕ ಬ್ಯಾಂಕ್ ರಾಷ್ಟ್ರೀಕರಣ ಮಾಡಿದರೂ ಸುಪ್ರೀಂ ಕೋರ್ಟ್ ತಡೆ ನೀಡಿತು. ಕಡೆಗೆ ಸಂವಿಧಾನಕ್ಕೆ ತಿದ್ದುಪಡಿ ತಂದು ರಾಷ್ಟ್ರೀಕರಣ ಮಾಡುವುದರಲ್ಲಿ ಯಶಸ್ವಿಯಾದರು ಇಂದಿರಾ ಗಾಂಧಿ.  ಬ್ಯಾಂಕ್‌ ರಾಷ್ಟ್ರೀಕರಣ ದೇಶಕ್ಕೆ ಎಷ್ಟು ಅಗತ್ಯವಾಗಿತ್ತೆಂದರೆ ಕೆಲವೇ ಪ್ರದೇಶಗಳಿಗೆ ಸೀಮಿತವಾಗಿದ್ದ ಬ್ಯಾಂಕ್‌ ಶಾಖೆಗಳು ದೇಶದ ಮೂಲೆ ಮೂಲೆಗೂ ವಿಸ್ತರಿಸಿದವು. ನಿರ್ಲಕ್ಷಿಸಲ್ಪಟ್ಟಿದ್ದ ಗ್ರಾಮಾಂತರ ಪ್ರದೇಶ ಮತ್ತು ಗ್ರಾಮೀಣ ಜನರನ್ನು ಬ್ಯಾಂಕಿಂಗ್‌ಗೆ ಒಳಪಡಿಸಲು, ಅವರಿಗೆ ಬ್ಯಾಂಕಿಂಗ್‌ ಸೌಲಭ್ಯ ದೊರಕುವಂತೆ ಮಾಡಲು ಅನುಕೂಲವಾಯಿತು. ಬ್ಯಾಂಕ್‌ ಶಾಖೆ ತೆರೆಯುವ ನಿಯಮಾವಳಿಗೆ ತಿದ್ದುಪಡಿ ಮಾಡಿ ಮೂರು ಶಾಖೆಗಳನ್ನು ಗ್ರಾಮಾಂತರ ಪ್ರದೇಶದಲ್ಲಿ ತೆರೆದರೆ ಮಾತ್ರ ಒಂದು ಶಾಖೆಯನ್ನು ನಗರ-ಪಟ್ಟಣಗಳಲ್ಲಿ ತೆರೆಯಬಹುದು ಎನ್ನುವ ನಿಯಮಾವಳಿ ರೂಪಿಸಿದ್ದರಿಂದ  ಬ್ಯಾಂಕ್‌ ರಹಿತ ಪ್ರದೇಶಗಳು ಬ್ಯಾಂಕುಗಳನ್ನು ಕಂಡವು. ಬ್ಯಾಂಕುಗಳು ತಮ್ಮ ಕಮರ್ಷಿಯಲ್ tag ‌ ತೆಗೆದು ಸೋಷಿಯಲ್ tag ಗೆ ಬದಲಾವಣೆ ಹೊಂದಿದವು. ಹೀಗೆ, ಬ್ಯಾಂಕುಗಳು ಗ್ರಾಹಕರ ಮತ್ತು ಜನಸಾಮಾನ್ಯರ ಮನೆಬಾಗಿಲನ್ನು ಬಡಿಯುವಂತೆ ಮಾಡಲಾಯಿತು.

ನಿರ್ಲಕ್ಷಿಸಲ್ಪಟ್ಟ ಕೃಷಿ, ಸಣ್ಣ- ಮಧ್ಯಮ ಗಾತ್ರದ ಉದ್ದಿಮೆಗಳು ಇವತ್ತು ಅತ್ಯುತ್ತಮ ಸ್ಥಿತಿಯಲ್ಲಿ ಇದ್ದರೆ, ಇದರಿಂದ ಉದ್ಯೋಗ ಸೃಷ್ಟಿಯಾಗುತ್ತಿದ್ದರೆ ಅದಕ್ಕೆ ಕಾರಣ ಬ್ಯಾಂಕ್ ರಾಷ್ಟ್ರೀಕರಣ. ಇದರಿಂದ ಬ್ಯಾಂಕುಗಳು ತಮ್ಮ ಒಟ್ಟು ಸಾಲದ  ಶೇಕಡಾ 40% ರಷ್ಟನ್ನು ಕೃಷಿ, ಸಣ್ಣ-ಮಧ್ಯಮ ಪ್ರಮಾಣದ ಉದ್ದಿಮೆ ಒಳಗೊಂಡಿರುವ ಆದ್ಯತಾ ವಲಯಕ್ಕೆ ನೀಡುವಂತಾಗಿದೆ.

ಈಗ ಇದೇ ರಾಷ್ಟ್ರೀಕೃತ ಬ್ಯಾಂಕುಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಸನ್ಮಾನ್ಯ ಪ್ರಧಾನ ಮಂತ್ರಿಗಳ ಜನಧನ್ ಯೋಜನೆ ಅಡಿಯಲ್ಲಿ ಹೆಚ್ಚುಕಮ್ಮಿ 28.65 ಕೋಟಿ ಖಾತೆಗಳನ್ನು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ತೆರೆಯಲಾಗಿದೆ. ಖಾಸಗಿ ಬ್ಯಾಂಕುಗಳಲ್ಲಿ ಕೇವಲ 1.25 ಕೋಟಿ ಅಕೌಂಟ್‌ ಓಪನ್ ಆಗಿದೆ. ಇಂದು ಭಾರತ ಖರೀದಿ ಶಕ್ತಿಯಲ್ಲಿ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದ್ದರೆ,  ಮೂರು ಲಕ್ಷ ಕೋಟಿ ಡಾಲರ್‌ ಅರ್ಥಿಕತೆ ಶಕ್ತಿಯಾಗಿದ್ದರೆ ಮತ್ತು 2024ರ ಹೊತ್ತಿಗೆ 5 ಲಕ್ಷ ಕೋಟಿ ಡಾಲರ್‌ ಅರ್ಥಿಕತೆಯ ದೇಶವಾಗುವುದಿದ್ದರೆ, ಇದರಲ್ಲಿ ಬ್ಯಾಂಕ್ ರಾಷ್ಟ್ರೀಕರಣದ  ಪಾತ್ರ ಮಹತ್ವದ್ದಾಗಿದೆ. ಆದರೆ ಮೋದಿ ಈಗ ಇದರ ಅಸ್ತಿತ್ವಕ್ಕೆ ಕೈ ಇಟ್ಟಿರುವುದರಿಂದ 5 ಲಕ್ಷ ಕೋಟಿ ಡಾಲರ್ ಆರ್ಥಿಕತೆ ಮರೀಚಿಕೆಯಾಗುವ ಅಪಾಯವಿದೆ. ಹಾಗೆಯೇ ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಬ್ಯಾಂಕ್ ರಾಷ್ಟ್ರೀಕರಣದ ಕೊಡುಗೆ ದೊಡ್ಡದಿದೆ.

ಬ್ಯಾಂಕ್ ರಾಷ್ಟ್ರೀಕರಣದಿಂದ ಪಾಲಿಸಲಾದ ಆಶಿಸ್ತಿನಿಂದ ಬೇಕಾಬಿಟ್ಟಿ ಸಾಲ ಕೊಟ್ಟ ಪರಿಣಾಮ ಸುಸ್ತಿ ಸಾಲ ಅಂದರೆ  ವಸೂಲಿಯಾಗದ ಸಾಲ ಬ್ಯಾಂಕ್ ರಾಷ್ಟ್ರೀಕರಣದ ಕ್ರಾಂತಿಯಲ್ಲಿ ಕಪ್ಪು ಚುಕ್ಕೆಯಾಗಿದೆ. ಫಲಾನುಭವಿಗಳು ವ್ಯವಸ್ಥೆಗೆ ಮಾರಕವಾದರೆ ಯಾವುದೇ ಯೋಜನೆಯಲ್ಲೂ ಎದುರಾಗುವ ಸಾಮಾನ್ಯ ಪ್ರಕ್ರಿಯೆಗಳಿವು. ಆದರೆ ಇದು ದೇಶದ ಬ್ಯಾಂಕಿಂಗ್ ವ್ಯವಸ್ಥೆಗೆ ಇವತ್ತು ಗಂಭೀರ ಪರಿಣಾಮವನ್ನುಂಟು ಮಾಡಿದೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ. ಮೋದಿ ಸರ್ಕಾರ ಹೂಡಿಕೆ ಹೆಚ್ಚಿಸಲು, ಸುಸ್ತಿ ನಿಯಂತ್ರಿಸಲು ಸಂವಿಧಾನ ತಿದ್ದುಪಡಿಯ ಮೂಲಕ ಬ್ಯಾಂಕ್ ಖಾಸಗೀಕರಣ ಮಾಡಲು ಮುಂದಾಗುತ್ತಿದೆ ಎಂದು ಹೇಳಲಾಗಿದೆ.

ವಿಜಯ್ ಮಲ್ಯ ಸೇರಿದಂತೆ ಸುಸ್ತಿದಾರರ ಸಾಲಗಳನ್ನು ಮನ್ನಾ ಮಾಡಿದವರು ಸುಸ್ತಿ ಸಾಲ ನಿಯಂತ್ರಣವೂ ಒಂದು ಕಾರಣವಾಗಿ ಬ್ಯಾಂಕ್ ಖಾಸಗೀಕರಣ ಮಾಡ್ತಾರೆ ಅನ್ನೋದು ಎಂಥ ವಿಚಿತ್ರ ಅಲ್ಲವೇ?  ರಾಷ್ಟ್ರೀಕರಣದ 55ನೇ ವರ್ಷದಲ್ಲಿ ಖಾಸಗೀಕರಣದ ಚರ್ಚೆ ವಿಪರ್ಯಾಸವಾಗಿದೆ. ಇದು ರಾಷ್ಟ್ರೀಕರಣವನ್ನು ಸರಿಯಾಗಿ ನಿಭಾಯಿಸಲಾಗದ ಉದಾಹರಣೆಯೇ ಹೊರತು, ಈ ವೈಫ‌ಲ್ಯ ರಾಷ್ಟ್ರೀಕರಣದ ಪರಿಕಲ್ಪನೆಯದಲ್ಲ.

ಈಗ ಇರುವ ಖಾಸಗಿ ಬ್ಯಾಂಕುಗಳು ಹೇಗೆ ಬಡ್ಡಿ, ಚಕ್ರಬಡ್ಡಿಯ ಹೆಸರಲ್ಲಿ ಗ್ರಾಹಕರನ್ನು ಸುಲಿಯುತ್ತವೆ ಎಂಬುದು ಎಲ್ಲರಿಗೂ ಗೊತ್ತಿದೆ.  ಯಥಾಪ್ರಕಾರ ಬಡವರ ವಿರುದ್ಧ ಶ್ರೀಮಂತರ ಪರ ನಿಲ್ಲುವ ಮೋದಿ ಬಿಜೆಪಿ ಸರ್ಕಾರದ ವಿಷಪೂರಿತ ಉದ್ದೇಶವೇ ಇದು ಹೊರತು ಬೇರೇನಲ್ಲ. ದೇಶದ ಔದ್ಯೋಗಿಕ, ಆರ್ಥಿಕ ಕ್ರಾಂತಿಗಾಗಿ, ಬಡವರ ಕಾರ್ಯಕ್ರಮವಾಗಿ 1970ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಬ್ಯಾಂಕ್ ರಾಷ್ಟ್ರೀಕರಣ ಮಾಡಿ ಯಶಸ್ವಿಯಾದ ಇಂದಿರಾಗಾಂಧಿಯವರ  ಕ್ರಾಂತಿಯನ್ನು ಲೋಕಸಭೆ ರಾಜ್ಯಸಭೆಯಲ್ಲಿ ಹೆಚ್ಚು ಸಂಖ್ಯೆಯಿರುವ ಬಿಜೆಪಿ ಅದೇ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಬ್ಯಾಂಕ್ ಖಾಸಗಿಕರಣಕ್ಕೆ ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಇಂದಿರಾ ಗಾಂಧಿಯವರು 14 ಬ್ಯಾಂಕುಗಳನ್ನು ಸರ್ಕಾರದ ತೆಕ್ಕೆಗೆ ತೆಗೆದುಕೊಳ್ಳುವಾಗ, ದೇಶಾದ್ಯಂತ 73 Scheduled Commercial ಬ್ಯಾಂಕುಗಳು ಇದ್ದವು. 8,262 ಶಾಖೆಗಳ ಪೈಕಿ ಶೇಕಡಾ 22ರಷ್ಟು ಗ್ರಾಮಾಂತರ ಪ್ರದೇಶಗಳಲ್ಲಿ, ಶೇಕಡಾ 40ರಷ್ಟು ಪಟ್ಟಣಗಳಲ್ಲಿ, 1,447 ಶಾಖೆಗಳು ನಗರಗಳಲ್ಲಿ ಮತ್ತು 1,661 ಶಾಖೆಗಳು Metropolitan ‌ ನಗರಗಳಲ್ಲಿ ಇದ್ದವು. 4,646 ಕೋಟಿ ಠೇವಣಿಯ ಪೈಕಿ 3,599 ಕೋಟಿ ಸಾಲ ನೀಡಿದ್ದವು. ಪ್ರತಿ 60 ಸಾವಿರ ಜನಸಂಖ್ಯೆಗೆ ಒಂದು ಶಾಖೆ ಇದ್ದು, ಬ್ಯಾಂಕಿಂಗ್‌ ಉದ್ಯಮದಲ್ಲಿ 2.20 ಲಕ್ಷ ಸಿಬ್ಬಂದಿ ಇದ್ದರು.

ಇವತ್ತು ದೇಶದಾದ್ಯಂತ ಬ್ಯಾಂಕುಗಳ ಶಾಖೆಗಳು ಹರಡಿವೆ. 1,41,756 ಕ್ಕೂ ಹೆಚ್ಚು ಶಾಖೆಗಳಿವೆ. 50,051ಕ್ಕೂ ಹೆಚ್ಚು ಗ್ರಾಮಾಂತರ ಶಾಖೆಗಳಿವೆ. ಸಣ್ಣ ಪಟ್ಟಣಗಳಲ್ಲಿ 9,063 ಮತ್ತು ನಗರಗಳಲ್ಲಿ 25,948 ಶಾಖೆಗಳಿವೆ. ಹಾಗೆಯೇ ಮೆಟ್ರೋ ಪಾಲಿಟನ್‌ ನಗರಗಳಲ್ಲಿ 27,114 ಶಾಖೆಗಳು ಇವೆ. ಬ್ಯಾಂಕುಗಳಲ್ಲಿ ಠೇವಣಿ ಪ್ರಮಾಣ 125 ಟ್ರಿಲಿಯನ್‌ ಏರಿದರೆ ಸಾಲದ ಪ್ರಮಾಣ 96.5 ಟ್ರಿಲಿಯನ್‌ಗೆ ಏರಿದೆ. ಬ್ಯಾಂಕಿಂಗ್‌ ಉದ್ಯಮ ಇಂದು ರೈಲು ಇಲಾಖೆಯ ನಂತರ ದೇಶದ ಎರಡನೇ ಅತಿ ದೊಡ್ಡ ಉದ್ಯಮವಾಗಿದ್ದು ಸುಮಾರು 10 ಲಕ್ಷಕ್ಕೂ ಅಧಿಕ ಸಿಬ್ಬಂದಿಯಿದ್ದಾರೆ. ಇಂದು ಪ್ರತಿ 8ರಿಂದ 10 ಸಾವಿರ ಜನಸಂಖ್ಯೆಗೆ ಒಂದು ಬ್ಯಾಂಕ್‌ ಶಾಖೆ ಇದೆ. ಕನಿಷ್ಠ ನಾಗರಿಕ ಸೌಲಭ್ಯಗಳಿಲ್ಲದ ಹಳ್ಳಿಗಳಲ್ಲಿ ಕೂಡಾ ಬ್ಯಾಂಕ್‌ ಶಾಖೆಗಳು ಇವೆ.

ಇವೆಲ್ಲಕ್ಕೂ ಕಾರಣವಾಗಿದ್ದು ಬ್ಯಾಂಕ್ ರಾಷ್ಟ್ರೀಕರಣ. ಈಗ ಮೋದಿ ಸರ್ಕಾರ ಖಾಸಗೀಕರಣ ಮಾಡಲು ಮುಂದಾಗುತ್ತಿದೆಯಂತೆ. ಅಷ್ಟಕ್ಕೂ ಇಲ್ಲಿಯವರೆಗೂ ಇವರು ಬಡವರನ್ನು ಮುಗಿಸುವ ಕಾರ್ಯಕ್ರಮಗಳನ್ನಲ್ಲವೇ ಮಾಡುತ್ತಾ ಬಂದಿರುವುದು? ಜನಾಂದೋಲನದ ಮೂಲಕವಾದರೂ ಇವರ ಈ ಅತಿರೇಕವನ್ನು ತಡೆಯದಿದ್ದರೆ ಅನಾಹುತವಾದೀತು ಎಚ್ಚರ!

ರಾ ಚಿಂತನ್

ಪತ್ರಕರ್ತರು

ಇದನ್ನೂ ಓದಿ-1975ರ ತುರ್ತು ಪರಿಸ್ಥಿತಿ ನಿಜಕ್ಕೂ ಸಂವಿಧಾನ ಹತ್ಯಾ ದಿವಸವೇ? ತುರ್ತು ಪರಿಸ್ಥಿತಿಯ ನೈಜತೆಯೇನು?

More articles

Latest article