ವಂದೇ ಮಾತರಂ ಗೀತೆಗೆ ರಾಜಕೀಯ ಬಣ್ಣ: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ

Most read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು, ವಂದೇ ಮಾತರಂ ಗೀತೆಗೆ ರಾಜಕೀಯ ಬಣ್ಣ ನೀಡಲು ಹವಣಿಸುತ್ತಿದ್ದಾರೆ. ಆದರೆ ಬಿಜೆಪಿ ಎಷ್ಟೇ ಪ್ರಯತ್ನ ನಡೆಸಿದರೂ ಜವಹರಲಾಲ್‌ ನೆಹರೂ ಅವರ ಕೊಡುಗೆಯನ್ನು ಅಳಿಸಿಹಾಕಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ಲೋಕಸಭೆ ಸದಸ್ಯ ಗೌರವ್‌ ಗೊಗೊಯಿ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭೆಯಲ್ಲಿ ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವ ಕುರಿತು ಮೋದಿ ಅವರ ಭಾಷಣಕ್ಕೆ ತಿರುಗೇಟು ನೀಡಿದರು.

ವಂದೇ ಮಾತರಂ ಗೀತೆಗೆ ರಾಷ್ಟ್ರೀಯ ಗೀತೆಯ ಸ್ಥಾನಮಾನವನ್ನು ನೀಡಿದ್ದು ಕಾಂಗ್ರೆಸ್ ಪಕ್ಷವೇ ಹೊರತು ಬಿಜೆಪಿಯಲ್ಲ ಎನ್ನುವುದನ್ನು ಮರೆಯಬಾರದು. ಯಾವುದೇ ವಿಷಯ ಕುರಿತು ಮಾತನಾಡಿದರೂ ದೇಶದ ಮೊದಲ ಪ್ರಧಾನಿ ನೆಹರೂ ಮತ್ತು ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸುವುದು ಮೋದಿ ಅವರ ಚಾಳಿಯಾಗಿದೆ ಎಂದು ಗೊಗೊಯ್ ವ್ಯಂಗ್ಯವಾಡಿದರು.

ಪಾಕಿಸ್ತಾನ ವಿರುದ್ಧ ನಡೆದ ಅಪರೇಷನ್ ಸಿಂಧೂರ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲೂ ಮೋದಿ ಅವರು ನೆಹರೂ ಅವರ ಹೆಸರನ್ನು 14 ಬಾರಿ ಮತ್ತು ಕಾಂಗ್ರೆಸ್ ಹೆಸರನ್ನು 50 ಬಾರಿ ಪ್ರಸ್ತಾಪಿಸಿದ್ದರು. ಸಂವಿಧಾನದ 75ನೇ ವಾರ್ಷಿಕೋತ್ಸವ  ಕುರಿತು ಚರ್ಚೆ ನಡೆದಾಗ ನೆಹರೂ ಅವರ ಹೆಸರನ್ನು 10 ಬಾರಿ ಮತ್ತು ಕಾಂಗ್ರೆಸ್ ಹೆಸರನ್ನು 26 ಬಾರಿ ಪ್ರಸ್ತಾಪಿಸಿದ್ದರು ಎಂದು ಗೊಗೊಯ್ ಹೇಳಿದರು.

2020ರಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಯ ವೇಳೆ ನೆಹರೂ ಹೆಸರನ್ನು 20 ಬಾರಿ, 2022ರಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆ ನಡೆದಾಗ 15 ಬಾರಿ ಉಲ್ಲೇಖಿಸಿದ್ದರು. ಮೋದಿ ಅವರೇ ನೀವು ನಿಮ್ಮ ಪಕ್ಷ ಎಷ್ಟೇ ಪ್ರಯತ್ನಿಸಿದರೂ ನೆಹರೂ ಅವರ ಕೊಡುಗೆಗಳನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಗೊಗೊಯ್ ವಾಗ್ದಾಳಿ ನಡೆಸಿದರು.

More articles

Latest article