ಬೆಂಗಳೂರು: ಜನಸಂದಣಿ ಇರುವ ಸಭೆ, ಸಮಾರಂಭ, ಜಾತ್ರೆ ಹಾಗೂ ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಲ್ಲಿ ಮೊಬೈಲ್‌ಗಳನ್ನು ಕಳವು ಮಾಡಿ ಕೇರಳದಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಚಂದ್ರಲೇಔಟ್ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿ 10.50 ಲಕ್ಷ ರೂ ಮೌಲ್ಯದ 52 ಮೊಬೈಲ್ ಗಳನ್ನು ಜಪ್ತಿ ಮಾಡಿದ್ದಾರೆ. ಶ್ರೀನಿವಾಸ್ ಹಾಗೂ ಶಫೀಕ್ ಬಂಧಿತ ಆರೋಪಿಗಳು. ಇವರ ತಂಡದ ಇತರ ಆರೋಪಿಗಳ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದ್ದಾರೆ.
ಡಿಟಿಡಿಸಿ ಕೊರಿಯರ್ ಮ್ಯಾನೇಜರ್ ದೂರು ನೀಡಿ ಕೊರಿಯರ್ ಮೂಲಕ ಕೇರಳ ರಾಜ್ಯಕ್ಕೆ ಪಾರ್ಸಲ್ ಮಾಡಿದ್ದ ಬಾಕ್ಸ್ ಅನ್ನು ಅಲ್ಲಿ ಯಾರೊಬ್ಬರೂ ಸ್ವೀಕರಿಸದ ಹಿನ್ನಲೆಯಲ್ಲಿ ವಾಪಸ್ ಬಂದಿತ್ತು. ಪಾರ್ಸಲ್ ಮಾಡಿದ ವ್ಯಕ್ತಿಗೆ ಹಲವಾರು ಬಾರಿ ಕರೆ ಮಾಡಿದರೂ ಆತ ಪ್ರತಿಕ್ರಿಯೆ ನೀಡಲಿಲ್ಲ. ಬಾಕ್ಸ್ ಓಪನ್ ಮಾಡಿ ನೋಡಿದಾಗ ಅದರಲ್ಲಿ 12 ಮೊಬೈಲ್ ಫೋನ್‌ಗಳು ಇರುವುದು ಕಂಡುಬಂದಿದ್ದು, ಅವುಗಳನ್ನು ಠಾಣೆಗೆ ಒಪ್ಪಿಸಿದ್ದರು. ಈ ಸಂಬಂಧ ಚಂದ್ರಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಭದ್ರಾವತಿಯ ಬಸವೇಶ್ವರ ಸರ್ಕಲ್ ಬಳಿ ನಿಂತಿದ್ದ ಓರ್ವನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮೊಬೈಲ್ ಫೋನ್‌ಗಳನ್ನು ಡಿಟಿಡಿಸಿ ಕೊರಿಯರ್ ಮೂಲಕ ಕೇರಳ ರಾಜ್ಯಕ್ಕೆ ಪಾರ್ಸಲ್ ಮಾಡಿದ್ದಾಗಿ ತಪ್ಪನ್ನು ಒಪ್ಪಿಕೊಂಡಿರುತ್ತಾನೆ. ಸುದೀರ್ಘವಾಗಿ ವಿಚಾರಣೆ ನಡೆಸಿದಾಗ ಆತನ ನಾಲ್ವರು ಸಹಚರರು ಸಭೆ ಸಮಾರಂಭ, ಜಾತ್ರೆ ಹಾಗೂ ಹೆಚ್ಚಿನ ಜನಸಂದಣಿ ಇರುವ ಕಡೆಗಳಲ್ಲಿ ಮೊಬೈಲ್ ಗಳನ್ನು ಕಳವು ಮಾಡಿಕೊಂಡು ಬಂದು ಆರೋಪಿಗೆ ನೀಡುತ್ತಿದ್ದರು. ಆತ ಹೊರರಾಜ್ಯಗಳಿಗೆ ಮಾರಾಟ ಮಾಡುವ ಸಲುವಾಗಿ ಕೊರಿಯರ್ ಮೂಲಕ ಪಾರ್ಸಲ್ ಮಾಡುತ್ತಿದ್ದುದ್ದಾಗಿ ತಿಳಿಸಿದ್ದಾನೆ. ಅಲ್ಲಿ ಮಾರಾಟ ಮಾಡಿದ್ದ ವ್ಯಕ್ತಿಯ ಬಗ್ಗೆಯೂ ಮಾಹಿತಿ ನೀಡಿದ್ದನೆ ಎಂದು ಆಯುಕ್ತರು ತಿಳಿಸಿದ್ದಾರೆ.
ಆರೋಪಿ ನೀಡಿದ ಮಾಹಿತಿ ಮೇರೆಗೆ ಕೇರಳ ರಾಜ್ಯದ ಕೊಂಡುಪರಂಬಿಲ್ ಎಂಬಲ್ಲಿ ಕೊರಿಯರ್ ಮಾಡಿದ್ದ ಮೊಬೈಲ್ ಫೋನ್‌ಗಳನ್ನು ಸ್ವೀಕರಿಸುತ್ತಿದ್ದ ಮತ್ತೊಬ್ಬ ಆರೋಪಿಯನ್ನು ವಿಚಾರಣೆ ಮಾಡಲಲಾಗಿದೆ. ಆತನಿಂದ 30 ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮೊಬೈಲ್ ಫೋನ್‌ಗಳನ್ನು ಕಳವು ಮಾಡಿಕೊಂಡು ಬರುತ್ತಿದ್ದ ಸಹಚರರು ತಲೆಮರೆಸಿಕೊಂಡಿದ್ದು, ಅವರುಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.