ಮೊಬೈಲ್‌ ಪರದೆ ಮತ್ತು ಈಗಿನ ಪೀಳಿಗೆ

Most read

ಈಗಿನ ಸಮಯದಲ್ಲಿ ಮೊಬೈಲ್ ಪರದೆಯು ಜೀವ ರಕ್ಷಕವಾಗಬಹುದು. ಎಷ್ಟೋ ಜನಕ್ಕೆ ಒಂಟಿತನದ ನಿವಾರಣೆಗೆ  ಸಹಾಯ ಮಾಡಬಹುದು. ಜ್ಞಾನದ ಮೂಟೆಯನ್ನೇ‌ ಹೊತ್ತು ತರಬಹುದು. ಆದರೆ ಅದೆಂದಿಗೂ ಮನಸು ಮತ್ತು ಮಾನವರಿಗೆ ಪರ್ಯಾಯವಾಗಲಾರದು – ಡಾ. ರೂಪಾ ರಾವ್‌, ಮನ:ಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ

ನನ್ನ ಆಪ್ತ ಸಮಾಲೋಚನೆ ಸಮಯದಲ್ಲಿ ಇಂದಿನ ಮಕ್ಕಳು ಮತ್ತು ಯುವ ವಯಸ್ಕರು ಮಾನಸಿಕ ಆರೋಗ್ಯವನ್ನು ನಿರ್ವಹಿಸಲು ಎದುರಿಸುತ್ತಿರುವ ಸವಾಲುಗಳನ್ನು ಬಹಳ‌ ಹತ್ತಿರದಿಂದ ನೋಡುತ್ತಿರುತ್ತೇನೆ. ಬಹುಶಃ ಸ್ಕ್ರೀನ್ ಟೈಮ್ ಬಗ್ಗೆಯ ಸವಾಲುಗಳ‌ ಬಗ್ಗೆಯೇ  ಪ್ರತಿಯೊಬ್ಬರೂ ಕೌನ್ಸೆಲಿಂಗ್ ಪಡೆಯುವಂತಿದ್ದರೆ  ಕೇವಲ ಒಂದು ರೂ ಅಂತ‌ ಚಾರ್ಜ್ ಮಾಡಿದ್ದರೂ ಒಂದಿಡೀ ಮೊಬೈಲ್ ಕಂಪನಿಯನ್ನೇ  ಶುರು ಮಾಡಬಹುದೇನೋ ; ಇದು  ತಮಾಷೆ ಅನಿಸಿದರೂ ಮೊಬೈಲುಗಳ‌ ಸತತ ತಪ್ಪಾದ ಬಳಕೆ ಒಂದಿಡಿ ಪೀಳಿಗೆಯನ್ನೇ ಮಾನಸಿಕವಾಗಿ ದುರ್ಬಲ ಪೀಳಿಗೆಯನ್ನಾಗಿ ಮಾರ್ಪಡಿಸುತ್ತಿರುವುದು ತಮಾಷೆ ಅಲ್ಲ‌.

ಹೌದು. ಈ ಕಾಲದಲ್ಲಿ ಮಕ್ಕಳು, ದೊಡ್ಡವರೆನ್ನದೇ ಮನೆಯಲ್ಲಿ, ಶಾಲೆಯಲ್ಲಿ, ಮತ್ತು ಊಟದ ಸಮಯದಲ್ಲಿ (ಬಹುತೇಕ ನಾವೆಲ್ಲರೂ ಅದರಲ್ಲಿದ್ದೇವೆ) ಸ್ಕ್ರೀನ್ ಟೈಮಿನಲ್ಲಿ ತಲ್ಲೀನರಾಗಿದ್ದಾರೆ, ತಲ್ಲೀನರಾಗುತ್ತಿದ್ದಾರೆ. ಸುತ್ತ ಮುತ್ತಲಿನ ಇರುವಿಕೆಯನ್ನೂ ಮರೆಯುವಷ್ಟು, ಇಹದ ಸಮಸ್ಯೆಗಳಿಂದಲೇ ದೂರವಾಗಲು‌ ಮೊರೆ ಹೋಗುವ ನಶೆಯಂತೆ.

ಅದು ವೀಡಿಯೊ ಚಾಟಿಂಗ್ ಆಗಿರಲಿ, ಟೆಕ್ಸ್ಟಿಂಗ್ ಆಗಿರಲಿ, ಗೇಮಿಂಗ್ ಆಗಿರಲಿ ಅಥವಾ ವೀಡಿಯೊಗಳನ್ನು ನೋಡುತ್ತಿರಲಿ ಇವೆಲ್ಲ ಸ್ಕ್ರೀನ್ ಟೈಮ್ ಇರುವ, ಹೊತ್ತು ಕಳೆಯುವ ಸಾಧನವಾಗಿ ಮಾರ್ಪಟ್ಟಿವೆ.

ಯುಸಿ ಸ್ಯಾನ್ ಫ್ರಾನ್ಸಿಸ್ಕೋದ ಎರಡು ವರ್ಷಗಳ ಅಧ್ಯಯನದಂತೆ ಇತ್ತೀಚಿನ ಸಂಶೋಧನೆಯು, ಮೊಬೈಲುಗಳೊಂದಿಗೆ ಕಿರಿಪೀಳಿಗೆಯ ಅಂಟಿಕೊಂಡಿರುವಿಕೆ ನಾವು ಅಂದುಕೊಂಡಿರುವುದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಹಾನಿಯನ್ನುಂಟು ಮಾಡುತ್ತದೆ ಎಂದು ಸೂಚಿಸುತ್ತದೆ. ಅತಿರೇಕದ ಮೊಬೈಲ್ ಸಮಯವು  10 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಿನ ಮಟ್ಟದ ಖಿನ್ನತೆ, ಆತಂಕ, ಅಟೆನ್ಷನ್  ಸಮಸ್ಯೆಗಳು ಮತ್ತು ನಿರ್ಲಕ್ಷ್ಯ ಮತ್ತು ಅಗ್ರೆಸೀವ್ನೆಸ್ ಸಮಸ್ಯೆಗಳನ್ನು ತರುತ್ತವೆ.

ನಿಜ, ಈಗಿನ ಸಮಯದಲ್ಲಿ ಮೊಬೈಲ್ ಪರದೆಯು ಜೀವ ರಕ್ಷಕವಾಗಬಹುದು. ಎಷ್ಟೋ ಜನಕ್ಕೆ ಒಂಟಿತನದ ನಿವಾರಣೆಗೆ  ಸಹಾಯ ಮಾಡಬಹುದು. ಜ್ಞಾನದ ಮೂಟೆಯನ್ನೇ‌ ಹೊತ್ತು ತರಬಹುದು. ಆದರೆ ಅದೆಂದಿಗೂ ಮನಸು ಮತ್ತು ಮಾನವರಿಗೆ ಪರ್ಯಾಯವಾಗಲಾರದು.

ಅತಿಯಾದ ಯಾವುದೇ ಆಗಲಿ ವಿಷವಾಗುತ್ತದೆ. ಹಾಗೆಯೇ‌ ಮೊಬೈಲ್ ಮೇಲಿನ ವಿಪರೀತ ಅವಲಂಬನೆಯೂ ಅಷ್ಟೇ. ಮಕ್ಕಳು ಈ ನೀಲಿ ಪರದೆಯ ಮೇಲೆ  ಅತೀವ ಅವಲಂಬನೆಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇದು ಅವರ ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಖಂಡಿತಾ  ಪರಿಣಾಮ ಬೀರುತ್ತಿದೆ. ಇನ್ನೂ ಒಂದು ಆಸಕ್ತಿದಾಯಕ ಸಂಗತಿಯೆಂದರೆ ವೀಡಿಯೊ ಚಾಟಿಂಗ್, ಟೆಕ್ಸ್‌ಟಿಂಗ್ ಮತ್ತು ಗೇಮಿಂಗ್‌ ನಂತಹ ಚಟುವಟಿಕೆಗಳು ಖಿನ್ನತೆಯ ಲಕ್ಷಣಗಳನ್ನು ತರುವ ಸಾಧ್ಯತೆ ಹೆಚ್ಚು ಹೊಂದಿವೆ.

ಹೌದು. ವೀಡಿಯೊ ಚಾಟಿಂಗ್, ಎಲ್ಲರನ್ನೂ ಸಂಪರ್ಕದಲ್ಲಿರಿಸುತ್ತದೆ ಎಂದು ನಾವು ಒಂದೊಮ್ಮೆ  ಭಾವಿಸಿದ್ದ ವಿಷಯವು ಈಗ ಮಕ್ಕಳಿಗೆ ವ್ಯತಿರಿಕ್ತವಾಗಿ ಕೆಲಸ ಮಾಡಬಹುದು.

 ದಿ ಇನ್‌ಸ್ಟಂಟ್‌ ಗ್ರ್ಯಾಟಿಫಿಕೇಷನ್ ಜನರೇಷನ್: ತ್ವರಿತ ಪ್ರತಿಫಲ

ಆಗೆಲ್ಲಾ ಕೈ ಕೆಸರಾದರೆ ಬಾಯಿ‌ಮೊಸರು ಎಂಬುದನ್ನು ಅರಿತು ಬೆಳೆದ ಕಾರಣ ಆಗಿನ ಪೀಳಿಗೆ ತಮಗೆ ಬೇಕೆನಿಸಿದವುಗಳಿಗೆ ಕಷ್ಟಪಟ್ಟೋ ಅಥವಾ ಕಾದು ಪಡೆದೋ ಬದುಕಿನ ಅದೆಷ್ಟೋ ಸವಾಲುಗಳಿಗೆ ಅಂಜದೇ ಮುಂದುವರೆಯುತ್ತಿದೆ. ಆದರೆ ಈಗ ಕಾದು ಪಡೆಯುವಿಕೆ ಮಕ್ಕಳಲ್ಲಿ ಅಸಹನೆಯ ವಿಷಯ. ನಾವಂದುಕೊಂಡದ್ದಕ್ಕಿಂತ ಜಟಿಲವಾಗುತ್ತಿದೆ ಈ ಗಂಭೀರ ವಿಷಯ. ಮಕ್ಕಳು ಏಕಾಗ್ರತೆ  ಮತ್ತು ಮಾನಸಿಕ ಸಮಸ್ಯೆಗಳೊಂದಿಗೆ ಹೆಣಗಾಡುತ್ತಿರುವುದು ಮಾತ್ರವಲ್ಲ, ಅವರು ಕಾದು ಪಡೆವ ಆನಂದದ ಬಗ್ಗೆ ಕಡಿಮೆ ಸಹಿಷ್ಣುತೆಯನ್ನು ಹೊಂದುತ್ತಿದ್ದಾರೆ.

ನೀವು ಬೇಕಾದರೆ ನೋಡಿ, ಮೊಬೈಲ್ ಪ್ರಪಂಚವು ಕಾರ್ಯ ನಿರ್ವಹಿಸುವುದೇ ಇನ್‌ಸ್ಟಂಟ್‌ ಆಧಾರದ ಮೇಲೆ. ಯಾವುದೇ  ಪಠ್ಯದ ಜಟಿಲ ಸಮಸ್ಯೆಗೆ ಗೂಗಲ್ ಸರ್ಚ್‌ಮಾಡಿ.  ತಕ್ಷಣ ಉತ್ತರ ಸಿಗುತ್ತದೆ. ಸಾಲದೆಂದು ಇದೀಗ‌ ಕೃತಕ ಬುದ್ಧಿಮತ್ತೆಯ ಕಾಲ. ಹುಡುಕುವುದೇ ‌ಬೇಡ‌. ಸರಿಯಾದ ಪ್ರಾಂಪ್ಟ್ ಕೊಟ್ಟರೆ ಕೈ ಬೆರಳುಗಳ ತುದಿಯಲ್ಲಿ ಈ ಎಲ್ಲವೂ ಲಭ್ಯವಿರುವಾಗ‌ ಬುದ್ಧಿಗೇನು ಕೆಲಸ?

ಸಾಂದರ್ಭಿಕ ಚಿತ್ರ ( ಗೂಗಲ್)

ಇನ್ನು ರೀಲ್‌ಗಳು  ವಿಡಿಯೋ ಗೇಮ್‌ಗಳು ? ಎಲ್ಲೆಡೆಯೂ ತಕ್ಷಣದ ಪ್ರತಿಫಲಗಳು. ವೀಡಿಯೊಗಳನ್ನು ನೋಡುತ್ತಾ ಇನ್ನಷ್ಟು ಬೇಕು ಇನ್ನಷ್ಟು ಬೇಕು ಎಂಬ ಡೋಪೋಮೈನ್ ಟ್ರಾಪಿಗೆ ಬೀಳುವುದು ಸರ್ವೇ ಸಾಮಾನ್ಯ. ಸಿನಿಮಾ, ವೆಬ್‌ ಸೀರೀಸ್‌  ಗಂಟೆಗಳ ಕಾಲ ಬಿಂಜ್-ವಾಚ್ ಮಾಡುತ್ತಲೇ ಕೂರಬಹುದು. ಈ ಎಲ್ಲಾ  ದಿಢೀರ್ ವೇಗದ-ಗತಿಯ ವಿಷಯಗಳು ನಮ್ಮ ಮೆದುಳನ್ನು ಇನ್ಸ್ಟಾಂಟ್ ಆಗಿ ಎಲ್ಲವೂ ಆಗಬೇಕೆಂಬ ಮನಸ್ಥಿತಿಯನ್ನು  ವಿಶೇಷವಾಗಿ ಮಕ್ಕಳಲ್ಲಿ  ಬೆಳೆಸುತ್ತಿದೆ.

ದಿಢೀರ್ ಖುಷಿಯ ಈ ಹಂಬಲವು ಮಕ್ಕಳನ್ನು ಭಾವನಾತ್ಮಕ ಸಮಸ್ಯೆಗಳಿಗೆ ಕಡಿಮೆ ಹೊಂದಿಕೊಳ್ಳುವಂತೆ ಮಾಡಿದೆ. ಅವರಿಗೆ ಹತಾಶೆಯನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತಿದೆ ಅಥವಾ ಏನಾದರೂ ಬರುವವರೆಗೆ ತಾಳ್ಮೆಯಿಂದ ಕಾಯುವುದನ್ನು‌ ಹಿಂಸೆ ಯಾಗಿಸಿದೆ. ಆಟದಲ್ಲಿ ಅವರ ಸರದಿಗಾಗಿ ಕಾಯುವುದಿರಲಿ ಅಥವಾ ಶಾಲೆಯಲ್ಲಿ ಫೇಲ್ಯೂರ್  ಅನ್ನು ನಿಭಾಯಿಸುವುದಾಗಲಿ ಅಥವಾ ಬದುಕಿನ ಸಣ್ಣ ಪುಟ್ಟ ಏರುಪೇರುಗಳನ್ನು ಸಹಿಸಿಕೊಳ್ಳುವುದೂ ಅಸಾಧ್ಯವಾಗುತ್ತಿದೆ. ಶಾಲಾ ಕಾಲೇಜುಗಳ ಮಕ್ಕಳು ತಾವು ಕೇಳಿದ್ದನ್ನು ಕೊಡಿಸಲಿಲ್ಲ ಎಂದೋ, ತಮಗೆ ಅಂಕ‌ ಬರಲಿಲ್ಲ ಎಂದೋ, ಇಲ್ಲ ಬಯಸಿದ ಹುಡುಗಿ/ ಹುಡುಗ ಸಿಗಲಿಲ್ಲ ಎಂದೋ, ಮನೆಯಲ್ಲಿ ಬೈದರು ಎಂಬೆಲ್ಲಾ ಕಾರಣಗಳಿಗೆ ಆತ್ಮಹತ್ಯೆಗೆ ಶರಣಾಗುತ್ತಿರುವುದಕ್ಕೆ‌ ಈ ದಿಢೀರ್ ಆನಂದದ ನಿರೀಕ್ಷೆಯೂ ಕಾರಣವಾಗಿದೆ

ನಾನು ಇತ್ತೀಚೆಗೆ ಒಬ್ಬ 23 ವರ್ಷದ ಯುವಕನ ಜೊತೆ‌ ಆತನ  ಮಾನಸಿಕ ಸಮಸ್ಯೆಯ‌ ಬಗ್ಗೆ ಮಾತಾಡುತ್ತಿದ್ದೆ. ಆತ ಈಗಷ್ಟೇ ತನ್ನ  ಮೊದಲ ಕೆಲಸಕ್ಕೆ ಹೊಸದಾಗಿ ಸೇರಿದ್ದಾನೆ. ಮನೆಯಲ್ಲಿ ತಂದೆ ತಾಯಿಗೆ ಒಬ್ಬನೇ ಮಗ.  ತಾ ಬಯಸಿದ ಎಲ್ಲಾ ಸೌಕರ್ಯಗಳು ಸೌಲಭ್ಯಗಳೊಂದಿಗೆ‌ ತನ್ನೆಲ್ಲಾ ಸಮಸ್ಯೆಗಳನ್ನೂ ಅಪ್ಪ ಅಮ್ಮ‌ನೇ ಪರಿಹರಿಸುತ್ತಿದ್ದರು. ಆರಾಮವಾಗಿ ಮೊಬೈಲ್ ಮತ್ತು  ಕಾಲೇಜು ಅಂತಿದ್ದ ವ್ಯಕ್ತಿಗೆ  ಈಗ  ಕೆಲಸದ ಸ್ಥಳದ ಸಹಜ ಬೇಡಿಕೆ, ಒತ್ತಡದ ವಾಸ್ತವವನ್ನು ಎದುರಿಸಲಾಗುತ್ತಿಲ್ಲ. ಅಲ್ಲಿ ಘಂಟಾನುಗಟ್ಟಲೆ ಒಂದೆಡೆ ‌ಕೂತು ಕೆಲಸ‌ಮಾಡುವುದರಿಂದ  ಮೊಬೈಲ್ ನೋಡಲು ಸಮಯವಾಗುತ್ತಿಲ್ಲ ಎನ್ನುವುದು ಆತನಿಗೆ ಅಸಹನೀಯವಾಗಿದೆ.  ಇದು ಅವನಿಗೆ ಒಂದು ಆಘಾತಕಾರಿ ಅನುಭವವಾಗಿ ಖಿನ್ನತೆ ಹಾಗು ಆಂಕ್ಸೈಟಿಗೆ ಅವನನ್ನುತಳ್ಳಿತು.

ನನ್ನ ಇನ್ನೊಂದು ಪೇಷೆಂಟ್,  ಹುಡುಗಿ ಪ್ರತಿಭಾವಂತೆ. ಕೆಲಸದ ಸ್ಥಳದ ಸಹಜ ಸ್ಪರ್ಧೆ, ಪೈಪೋಟಿ, ಅಸೂಯೆಗಳ‌ ಜೊತೆ‌ ನಿಭಾಯಿಸಲು ಹೆಣಗಾಡುತ್ತಿದ್ದಾಳೆ. ಬಹುತೇಕ ಚಾಟ್ ಮತ್ತು ಡಿಜಿಟಲ್ ಸಂವಹನಗಳ ಫೇಕ್ ಮಾತುಕತೆಯ ಜೊತೆಯೇ ಬೆಳೆದು  ವಾಸ್ತವ ಸಂವಹನದ ರಿಯಾಲಿಟಿ ಅರ್ಥ ಮಾಡಿಕೊಳ್ಳಲು ಸೋಲುತ್ತಿದ್ದಾಳೆ. ಮೊಬೈಲ್ ನ ಅತಿಯಾದ ಅವಲಂಬನೆ  ಸೋಶಿಯಲ್ ಇಂಟೆಲಿಜೆನ್ಸ್ ಅಥವಾ ಸೋಶಿಯಲ್ ಇಮ್ಯೂನಿಟಿಯನ್ನು ಕಡಿಮೆಗೊಳಿಸುತ್ತಿದೆ.

ಸಾಂದರ್ಭಿಕ ಚಿತ್ರ ( ಗೂಗಲ್)

ನಿಜವಾದ ಗೆಳೆತನ ಅಥವಾ ಫಿಸಿಕಲ್ ಆಗಿ ಜನರ ಜೊತೆ ಮಾತಾಡಿ ಅವರ ಸ್ವಭಾವ, ವರ್ತನೆ ಇವುಗಳನ್ನು ಅರಿಯುವ  ಸಾಮಾಜಿಕ ಸನ್ನಿವೇಶಗಳು ಮೊಬೈಲಿನಲ್ಲಿ ಸಿಗುವ ಸೋಶಿಯಲ್ ಮೀಡಿಯಾ ಅವಲಂಬನೆಯಿಂದಾಗಿ ಈಗಿನ ಮಕ್ಕಳಿಗೆ ಸಿಗುವುದು ಕಡಿಮೆಯಾಗುತ್ತಿದೆ. ಆ ಸಾಮಾಜಿಕ ಸನ್ನಿವೇಶ,  ಶೈಕ್ಷಣಿಕ ಸ್ಪರ್ಧೆಯಾಗಿರಲಿ ಅಥವಾ ಸಾಮಾಜಿಕ ಸಂಘರ್ಷವಾಗಲಿ, ಮಕ್ಕಳ ಭಾವನಾತ್ಮಕ ಪರಿವರ್ತನೆಗೆ ಹೊಂದಿಕೊಳ್ಳುವ  ಗುಣವಾಗಲಿ  ಈಗ  ದುರ್ಬಲವಾಗುತ್ತಿದೆ‌.

ಮಕ್ಕಳು ನೈಜ ಜಗತ್ತಿನಲ್ಲಿ, ವೈಯಕ್ತಿಕ ಸಂವಹನಗಳನ್ನು ತಪ್ಪಿಸಿಕೊಂಡಾಗ ನಾವು ನೋಡುವ ಸಹಜ ಪ್ಯಾಟರ್ನ್ ಮೇಲಿನದು.

ಹಾಗಾದರೆ, ನಾವೇನು ಮಾಡಬೇಕು?

ಈಗ, ನಾವೆಲ್ಲರೂ ನಮ್ಮ ಮೊಬೈಲುಗಳನ್ನು ಮನೆಯಿಂದ ಹೊರಗೆ ಎಸೆಯಬೇಕು ಎಂದು ನಾನು ಹೇಳುತ್ತಿಲ್ಲ (ಆದರೂ ವೈ-ಫೈ ಅಥವಾ ಮೊಬೈಲ್  ಇಲ್ಲದೆ ವಾರಾಂತ್ಯವನ್ನು  ಕಳೆಯುವುದು  ಒಳ್ಳೆಯದೇ)

ಆದರೆ ಪೋಷಕರು, ಶಿಕ್ಷಕರು ಮತ್ತು ಈಗಿನ ಮಕ್ಕಳ ಸುತ್ತಮುತ್ತಲಿನವರಾಗಿ‌, ಪರದೆಯ ಸಮಯ( ಸ್ಕ್ರೀನ್ ಟೈಮ್‌) ಎಷ್ಟು ಜಾಸ್ತಿ ಮತ್ತು ಅದು ಮಕ್ಕಳಲ್ಲಿ ಯಾವ ಸ್ವಭಾವವನ್ನು ಬದಲಿಸುತ್ತಿದೆ ಅಥವಾ ತರುತ್ತಿದೆ ಎಂಬುದನ್ನು ನಾವು ಹತ್ತಿರದಿಂದ ಮಾನಿಟರ್ ಮಾಡಬೇಕಾಗಿದೆ.

 ಮೇಲೆ ಹೇಳಿದಂತಹ  ಸಾಮಾಜಿಕ ಸನ್ನಿವೇಶಗಳನ್ನು ಮುಗಿಸಿದ ನಂತರವೇ ಮಕ್ಕಳಿಗೆ   ಮೊಬೈಲ್ ನೋಡಬೇಕಾದ ಸಮಯವನ್ನು ನಿಗದಿಪಡಿಸಬೇಕು.

ಭೌತಿಕ ಆಟೋಟಗಳು, ವ್ಯಾಯಾಮಗಳು‌ ಮಕ್ಕಳ ಮನಸಿನ ಮೇಲೆ ಧನಾತ್ಮಕ ಪರಿಣಾಮ‌ ಬೀರುತ್ತವೆ. ಅಷ್ಟೇ ಅಲ್ಲ ಖಿನ್ನತೆಯನ್ನು ಕಡಿಮೆಗೊಳಿಸುತ್ತವೆ ಎಂದು ಅನೇಕ ಸಂಶೋಧನೆಗಳು‌ ಹೇಳಿವೆ.

ಸಾಂದರ್ಭಿಕ ಚಿತ್ರ ( ಗೂಗಲ್)

ಫ್ಯಾಮಿಲಿ ಡೈನಾಮಿಕ್ಸ್ – ಕೌಟುಂಬಿಕ ಚಟುವಟಿಕೆಗಳು ಕುಟುಂಬದವರಲ್ಲಿ ಪರಸ್ಪರ ಮಾತುಕತೆ ಚಲನಶೀಲತೆ, ಸಾಮಾಜಿಕ ಬದುಕು ಹಾಗು‌ ಸಾಂಸ್ಕೃತಿಕ ಹಿನ್ನಲೆಗಳ ಸರಿಯಾದ ಪರಿಚಯಗಳು ಮೊಬೈಲ್ ಬಳಕೆಯಿಂದಾಗಬಹುದಾದ ದುಷ್ಪರಿಣಾಮಗಳನ್ನು  ತಡೆಯುತ್ತವೆ ಎಂದು ಕೆಲವು ಅಧ್ಯಯನಗಳು ದೃಢಪಡಿಸಿವೆ . ಆದ್ದರಿಂದ ವಾರಾಂತ್ಯದಲ್ಲಿ ಒಂದೊಳ್ಳೆ ಪ್ರವಾಸ ಅಥವಾ ಕೌಟುಂಬಿಕ ಅಥವಾ ಸಾಮಾಜಿಕ ಸಮಾರಂಭಗಳಿಗೆ ಮಕ್ಕಳನ್ನು ಕರೆದೊಯ್ಯುವುದು ಒಳ್ಳೆಯ ಅಭ್ಯಾಸವಾಗಿ ಪರಿಣಮಿಸಬಹುದು

ನಿಸ್ಸಂಶಯವಾಗಿ, ಹೊರಗಡೆಯ ಆಟ, ವ್ಯಾಯಾಮ ಮತ್ತು ಸ್ನೇಹಿತರೊಂದಿಗೆ ಉತ್ತಮ ಫೇಸ್‌ಟು ಫೇಸ್‌ ಮಾತುಕತೆ ಸಂಭಾಷಣೆಗಳಂತಹುದನ್ನು ಮಾಡಲು ಮಕ್ಕಳನ್ನು ಪ್ರೋತ್ಸಾಹಿಸಬೇಕು.

ನೋ ಮೊಬೈಲ್ ಡೇ

ವಾರದಲ್ಲಿ ಒಂದು ದಿನ ಕರೆ ಬಿಟ್ಟು ಮತ್ತಾವ ಕಾರಣಕ್ಕೂ ಮೊಬೈಲ್ ಅನ್ನು ಬಳಸಬಾರದು ಎಂಬ ನಿಯಮವನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಹಾಕಿಕೊಳ್ಳುವುದು.

ಮಕ್ಕಳ ಈಗಿನ ದೈನಂದಿನ ಜೀವನದಲ್ಲಿ ಯಾವುದನ್ನು ಅನುಮೋದಿಸುತ್ತೇವೋ ಅದು ಅವರ ಇಡೀ ಜೀವನದಲ್ಲಿ ದೀರ್ಘಾವಧಿಯ ಪರಿಣಾಮಗಳನ್ನು ಬೀರಬಹುದು. ವಾಸ್ತವ  ಬದುಕಿನ ಸವಾಲು ಮತ್ತು ಸಮಸ್ಯೆಗಳನ್ನು ಎದುರಿಸಲಾಗದೇ  ದೊಡ್ಡವರು ಮೊಬೈಲ್ ಬಳಕೆಗೆ ಶರಣಾಗುತ್ತಿದ್ದರೆ ಮಕ್ಕಳೂ ಅದನ್ನೇ ಮಾಡುತ್ತಾರೆ‌. ಆಗೆಲ್ಲಾ ಮನರಂಜನೆಗೆಂದು ಮನೆಯಲ್ಲಿ ಬೇರೆ ಬೇರೆ ಕವಡೆ, ಚೆಸ್ , ಅಳುಗೊಳಿಮನೆ ಆಟ ಆಡುತ್ತಿದ್ದರು. ಅದಕ್ಕೆ ದೊಡ್ಡವರೂ ಸೇರುತ್ತಿದ್ದರು. ಇದೀಗ ಮಕ್ಕಳ‌ ಗೇಮಿಂಗ್‌ ಮತ್ತು ದೊಡ್ಡವರ ಚಾಟಿಂಗ್ ಅಂತ ಶುರುವಾಗಿದೆ

ಹೀಗಾಗಿ ಜೀವನದ ಅನಿವಾರ್ಯ ಏರಿಳಿತಗಳೊಂದಿಗೆ ಹೋರಾಡುವ ಗುಣ, ತಾಳ್ಮೆ ಮತ್ತು ಸಹಿಷ್ಣುತೆಯನ್ನು ಬೆಳೆಸಿಕೊಳ್ಳುವ ಅವಕಾಶವನ್ನು ದೊಡ್ಡವರೇ ಚಿಕ್ಕವರಿಂದ ಕಿತ್ತುಕೊಳ್ಳುತ್ತಿದ್ದಾರೆ ಅನಿಸುತ್ತದೆ. ಜೀವನದ ಹೆಚ್ಚಿನ ವಿಷಯಗಳಂತೆಯೇ ಇಲ್ಲಿಯೂ When and where to stop ಎಂಬುದನ್ನು ತಿಳಿಯುವ ಘಟ್ಟ ಇದಾಗಿದೆ,

ಡಿಜಿಟಲ್ ಪರದೆಗಳಿಂದ ವಿರಾಮ ತೆಗೆದುಕೊಳ್ಳಲು, ಮೊದಲು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ಮಕ್ಕಳಿಗೆ ಕಲಿಸಬೇಕು. ನೇರ  ಮುಖಾಮುಖಿ ಸಂಬಂಧಗಳನ್ನು ಬೆಳೆಸಲು ಮಕ್ಕಳಿಗೆ ಅಭ್ಯಾಸ ಮಾಡಿಸಬೇಕು.

ಕಾರ್ಪೊರೇಟ್ ಜಗತ್ತು ಹಿಂದೆಂದಿಗಿಂತಲೂ ಸ್ಪರ್ಧಾತ್ಮಕವಾಗಿದೆ. ಆದರೆ, ಕಾದು , ಕೈ ಕೆಸರು ಮಾಡಿಕೊಂಡು, ಬೆವರಿಳಿಸಿ ಕೊಂಡು ಪುಟ್ಟ ಪ್ರಯತ್ನಕ್ಕೆ  ಸಿಗುವ  ಪ್ರತಿಫಲಗಳು, ಅಥವಾ ಕೆಲವೊಮ್ಮೆ ಆಗುವ ಹಿನ್ನಡೆಗಳು ಮತ್ತು ಸವಾಲುಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ನಾವು ಮಕ್ಕಳಿಗೆ ಕಲಿಸುವುದನ್ನು ಶುರು ಮಾಡಬೇಕು. ಅದಕ್ಕಾಗಿಯೇ  ಹೌ ಟು ಫೇಲ್ ಅಥವಾ ವೈಫಲ್ಯಗಳನ್ನು ತೋರಿಸಿ ಅದನ್ನು ಮೀರಿ ಗೆಲ್ಲುವ ಬಗೆ ತೋರಿಸಲು ಆಟೋಟಗಳು‌ ಸಹಾಯವಾಗುತ್ತವೆ.

ಮೊದಲ ಹೆಜ್ಜೆ ಸಣ್ಣದೇ ಇರಲಿ.

ಸಾಂದರ್ಭಿಕ ಚಿತ್ರ ( ಗೂಗಲ್)

ಇಂದಿನಿಂದಲೇ‌ ಮಕ್ಕಳಿಗೆ ವ್ಯಾಯಾಮ, ಮೈದಾನದಲ್ಲಿ ಅಥವಾ ಹೊರಗಡೆ ‌ಆಟ ಶುರು ಮಾಡಿಸಿ.

ವಿಡಿಯೋ ಗೇಮ್ ಅಥವಾ ಟೆಕ್ಸ್‌ಟಿಂಗ್  ಸಮಯವನ್ನು  ಸಣ್ಣ ಸಣ್ಣದಾಗಿ  ಕಡಿಮೆ‌ ಮಾಡುತ್ತಾ ಬನ್ನಿ.

ಕುಟುಂಬದ ಊಟದ ಸಮಯದಲ್ಲಿ ಮೊಬೈಲುಗಳು ಆಫ್ ಆಗಿರಲಿ.

ವಾರಾಂತ್ಯದಲ್ಲಿ  ಡಿಜಿಟಲ್ ಡಿಟಾಕ್ಸ್‌ ಮಾಡುವತ್ತ ಗಮನ ಹರಿಸಿ

ಪ್ರತೀ ಕುಟುಂಬವೂ  ಇದನ್ನು ಮಾಡುವತ್ತ ಗಮನ‌ ಹರಿಸಿದರೆ  ಬಹುಶಃ ಮುಂದಿನ ಪೀಳಿಗೆ ಹಳೇ‌ ಪೀಳಿಗೆಯವರಷ್ಟೇ ಮಾನಸಿಕ ಸದೃಢತೆಯನ್ನು ಹೊಂದಬಹುದು.‌

ಡಾ ರೂಪಾ ರಾವ್

ಮನ:ಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ

ಬೆಂಗಳೂರು ವಾಸಿಯಾಗಿರುವ ಇವರು ಮನಃಶಾಸ್ತ್ರದಲ್ಲಿ ಹಾಗೂ ಸೈಕೋಥೆರಪಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ಸಂಪರ್ಕ ಸಂಖ್ಯೆ: 97408 66990

More articles

Latest article