ಬೆಂಗಳೂರು: ಕಳವು ಮಾಡಿದ್ದ ಮೊಬೈಲ್ ಹಿಂತಿರುಗಿಸುವ ವಿಷಯಕ್ಕೆ ಸಂಬಂಧಿಸಿದಂತೆ ಮೆಕ್ಯಾನಿಕಲ್ ಎಂಜಿನಿಯರ್ ವೊಬ್ಬರ ಹತ್ಯೆ ನಡೆದಿದೆ. ಬಿಹಾರ ಮೂಲದ ಅಬ್ದುಲ್ ಮಲೀಕ್ (52) ಮೃತಪಟ್ಟ ದುರ್ದೈವಿ. ಈ ಪ್ರಕರಣ ಕುರಿತು ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮನೋಜ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೋಜ್ ಪೋರ್ಟರ್ ಕಂಪನಿಯೊಂದರಲ್ಲಿ ಡೆಲಿವರಿ ಏಜೆಂಟ್ ಕೆಲಸ ಮಾಡುತ್ತಿದ್ದ. ಒಮ್ಮೆ ಅಬ್ದುಲ್ ಮಲೀಕ್ ಅವರ ಕಚೇರಿಗೆ ತೆರಳಿದ್ದ ಮನೋಜ್ ಮೊಬೈಲ್‌ವೊಂದನ್ನು ಕಳವು ಮಾಡಿಕೊಂಡು ಬಂದಿದ್ದ. ಈ ದೃಶ್ಯವನ್ನು ಅಬ್ದುಲ್ ಮಲೀಕ್ ಮತ್ತು ಅವರ ಆಪ್ತ ಜೈನುಲ್ ಸಿಸಿಟಿವಿಯಲ್ಲಿ ಗಮನಿಸಿ ಮೊಬೈಲ್ ಹಿಂದಿರುಗಿಸುವಂತೆ ಮನೋಜ್ ಗೆ ತಿಳಿಸಿದ್ದರು.
ಈ ಸಂಬಂಧ ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿ ಇವರ ನಡುವೆ ಕಲಹ ನಡೆದಿದೆ. ಪದೇ ಪದೇ ಮೊಬೈಲ್ ಮರಳಿಸುವಂತೆ ಕೇಳಿದಾಗ ಆರೋಪಿ ಮನೋಜ್ ಅಬ್ದುಲ್ ಮಲೀಕ್ ಮತ್ತು ಅವರ ಸಹಾಯಕ ಜೈನುಲ್ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಅಬ್ದುಲ್ ಮಲೀಕ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಜೈನುಲ್‌ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಬ್ದುಲ್ ಮಲೀಕ್ ಮತ್ತು ಜೈನುಲ್ ಅವರು ಐದು ವರ್ಷಗಳಿಂದ ಖಾಸಗಿ ಕಂಪನಿಯೊಂದರಲ್ಲಿ ಜತೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

